ಒಂದು ಗಜಲ್

ನೀ ಬರುವ ದಾರಿಯಲಿ ಕಂಗಳಿರಿಸಿ ಕಾಯುತಿರೆ ಕಾತುರದಿ ಸಂಧಿಸಲು ಬೇಗ ಬಾ
ಕಾಣದ ನಿನ್ನನು ಹೊಳೆದಂಡೆಯೂ ಕೂಗುತಿರೆ ದಡಬಡಿಸಿ ಸಂತೈಸಲು ಬೇಗ ಬಾ

ತುಟಿ ಮೇಲೆ ತರದ ಥರಥರ ಹೊಸಥರದ ಯೋಚನೆ ನೂರು ಪಟ್ಟಿ ಮಾಡಿರುವೆ
ಎದುರು ಬದುರು ಕೂತು ಚರ್ಚಿಸಿ ನಾಳೆಗೊಂದ ಹೊಸಗನಸ ನೇಯಲು ಬೇಗ ಬಾ

ಹೊತ್ತುಗಳೆಯಲರಿಯದ ಇಂದ್ರಿಯಗಳು ವಿರಹದಾಗ್ನಿಯಲಿ ಬೆಂದು ಚಡಪಡಿಸುತಿರೆ
ಅಂಗೈಲ್ಹಿಡಿದ ಹರಳುಗಳು ಸಜೆ ಅನುಭವಿಸುತಿವೆ ಬಿಡುಗಡೆಗೊಳಿಸಲು ಬೇಗ ಬಾ

ಹೃದಯಗೂಡಿನ ಬೆಚ್ಚನೆ ಭಾವಗಳು ನಿನಗಾಗಿ ಹಪಹಪಿಸಿ ಆತಂಕದಿ ತಲ್ಲಣಿಸುತಿರೆ
ಎದೆಗೆದೆಯ ಬೆಸೆದು ತುಟಿಗೆ ತುಟಿ ಜಡಿದು ನನ್ನನ್ನೇ ಲೂಟಿ ಮಾಡಲು ಬೇಗ ಬಾ

ಇರುಳ ದಾರಿಯಲಿ ಸುರಿದೊಲವ ಬೆಳಕ ತೊರೆದು ಹೋಗದಿರು ಕಡುವಿರಹ ಸುಡುತಲಿರೆ
‘ರುಕ್ಮಿಣಿ’ಯ ಒಂಟಿಹೆಜ್ಜೆಗೂ ನಿತ್ರಾಣ ಹೆಗಲಿಗ್ಹೆಗಲ ಜೋಡಿಸಿ ಕಾಲ ಸರಿಸಲು ಬೇಗ ಬಾ

ರುಕ್ಮಿಣಿ ಎನ್.

ನೆನ್ನೆ ಮೊನ್ನೆಯಷ್ಟೆ
ಮೊಳಕಾಲಿಗೂ ಮೇಲಿರುವ
ಪೆಟ್ಟಿಕೋಟು ತೊಟ್ಟು
ಓರಗೆಯವರೊಡನೆ ಓಡಾಡುತ್ತ
ಊರೆಲ್ಲ ಸುತ್ತಿದ ನೆನಪು…

ಈಗೀಗ ಅಮ್ಮ ಶುರುವಿಟ್ಟಿದ್ದಾಳೆ
ಮೈತುಂಬ ಬಟ್ಟೆಯುಡು
ಎದೆ ಮೇಲೊಂದು ದುಪಟ್ಟಾ ಹೊದ್ದೇ
ನೀರು ತುಂಬು
ಅವರಿವರೊಡನೆ ಆಟ ಸಾಕು
ಹೊಂವರ್ಕ್ ಮುಗಿಸಿ
ಅಡುಗೆ ಕಡೆ ಸ್ವಲ್ಪ ಗಮನಿಸು
ಹದಿನಾರಾಯಿತು ನೀನನ್ನು ಚಿಕ್ಕವಳಲ್ಲ!

ಹೌದೆ..! ಎಂದೊಮ್ಮೆ
ಗಂಭೀರವಾಗಿ ನನ್ನ ನಾ ದಿಟ್ಟಿಸಿದೆ
ಇದೇನಾ ದೊಡ್ಡವಳಾಗೋದು ಅಂದ್ರೆ
ಮನಸು ದೇಹವನು ಪ್ರಶ್ನಾತೀತವಾಗಿ ನೋಡಿತ್ತಿತ್ತು

ಬ್ಯಾಗು ಹೆಗಲಿಗೆ ಹಾಕಿ ಸ್ಕೂಲಿಗೆ ಹೊರಡುವಾಗ
ಅದೆಂಥ ಮುಜುಗರ!
ಅಗಸಿ ಬಾಗಿಲಿಗೆ ಠಿಕಾಣಿ ಹೂಡುವ
ಆ ಪುಂಡರ ದಂಡು
ಜೊಲ್ಲು ಸುರಿಸುವಂತೆ ದುರುಗುಟ್ಟುವಾಗ
ಸಿಗಿದು ಹಾಕುವಷ್ಟು ರೋಷ!
ಸುಮ್ಮನೆ ನಡೆದುಬಿಡುತ್ತೇನೆ ನೆಲ ದಿಟ್ಟಿಸಿ
ಮನಸೊಳಗೆ ನೂರೆಂಟು ಬೈಗುಳ ಹೆಟ್ಟಿ

ನಾಲ್ಕನೆಯ ಸಾಲಿನಲಿ ಕೂತ
ಆ ಮೂವರಲಿ ಎರಡನೆಯವನು
ಕ್ಲಾಸಿಗೇನೆ ಮೊದಲಿಗನು
ಚಿಗುರು ಮೀಸೆಯ ಹುಡುಗ
ರೆಪ್ಪೆ ಮಿಟುಕಿಸದೆ ನನ್ನ ನೋಡುತಿರಲು
ಎದೆಯೊಳಗೆ ಏನೋ ಒಂಥರಾ
ಹಾಯ್ ರಾಮಾ! ಹರಿಯಬಿಡಲೇ ಅವನೆಡೆಗೆ
ಕಟ್ಟಿಡಲು ಬಾರದ ಈ ಮನಸ

ಹಿಡಿಸದ ವಿಷಯ ಗಣಿತ
ಬಿಡಿಸಲು ಬಾರದೆ
ಸಜ್ಜನ್ ಮಾಸ್ತರನ ಏಟು ತಿಂದು
ಓರಗೆಯರ ನಡುವೆ ಅವಮಾನವೆನಿಸಿ
ತೇವದ ಕಣ್ಣುಗಳ ಒರೆಸುವಲಿ ಅನಿಸಿತು

ಚಿಕ್ಕವರಾಗಿರುವುದು ಎಷ್ಟು ಚಂದ!

ರುಕ್ಮಿಣಿ ಎನ್.

ಸೂಳೆಯ ಶೀಲ

ಹಗಲಿಗೆ ನಂಜೇರುತ್ತಿದ್ದಂತೆಯೇ
ಆ ಕೆಂಪು ದೀಪದ ಬೀದಿಗಳಿಗೆ
ಕಣ್ಣು ಬರುತ್ತವೆ

ಅಗೊ! ಅಲ್ಲಿ ನೋಡಿ!
ತನ್ನೆತ್ತರದ ಕನ್ನಡಿಯೆದುರು ನಿಂತು
ಆಕೆ ಅತೀ ಶ್ರದ್ಧೆಯಿಂದ
ತನ್ನ ತಾ ಸಿಂಗರಿಸಿಕೊಳ್ಳುತಿರುವಳು
ಗಿರಾಕಿಯ ಕಣ್ಣು
ತನ್ನ ಮೇಲೆಯೇ ನೆಡುವಂತೆ
ಮೈಮಾಟ ಒಡೆದಿರಿಸುವ
ದಿರಿಸು ಧರಿಸಿರುವಳು

ಆ ಕಿಕ್ಕಿರಿದ ಜನಸಂಧಣಿಯವಳು
ನುಲಿದು ನಿಂತು, ರಸವತ್ತ
ರಂಗಿನಧರಗಳ ಕಚ್ಚಿ ಹಿಡಿದು
ಕಣ್ಣ ಸನ್ನೆಯಲೇ ಹೂಬಾಣಗಳ ಬಿಡುತ
ಗಂಡಸರುಗಳ ಎದೆಗೆ
ಲಗ್ಗೆ ಇಡುತ್ತಿರುವಳು

ಥೂ…! ಲಜ್ಜೆಗೆಟ್ಟವಳು!
ಪತಿವ್ರತೆಯರು ಅಲ್ಲಲ್ಲಿ ಆಡಿಕೊಳ್ಳುತಿರುವರು…

ಹಸಿದು ಬರುವವರನು ಬಾಹುಗಳಲಿ ಬಳಸಿ
ತರತರದ ಆಯಾಮಗಳಲಿ ಸ್ಖಲಿಸಿ
ಹೊರಳಾಡಿ ಹಿತವಾಗಿ ನರಳಾಡಿ
ಕಿಬ್ಬೊಟ್ಟೆಯ ಗಂಟ ಗುಕ್ಕಿಗೆ ಕರಗಿಸಿ
ಗಿರಾಕಿಗಳನೆಲ್ಲ ಮಾದಕ ಸೆರಗಿನಲಿ ಕಟ್ಟಿ
ಸೆಳೆದುಬಿಡುತ್ತಾಳೆ

ಗಂಡನ ಮರೆಯಲ್ಲಿ ಕದ್ದುಮುಚ್ಚಿ
ಮಿಂಡನೊಡನೆ ಹಾದರ ನಡೆಸಿ
ಶೀಲ ಕಳೆದುಕೊಂಡಿರುವ
ಪತಿವ್ರತೆಯ ಮುಖವಾಡ ತೊಟ್ಟ
ಶಿರೋಮಣಿಯರಿಗೆಲ್ಲ
ಇವಳೊಬ್ಬ ಹಡಬೆ! ಹಾದರಗಿತ್ತಿ!

ಹೌದು… ಹಾದರದಲೇ
ಅನ್ನದೇವನ ಕಂಡುಕೊಂಡ ಈಕೆ
ಸ್ವಚ್ಛ ಮನಸಿನ ಭಗಿಣಿ!

“ಗೇಣು ಹೊಟ್ಟೆ” ಸಲಹುವ
ಆ ಅನ್ನದ ಋಣಕೆ
ಭಾವನೆಗಳ ಕಲಬೆರಕೆ ಮಾಡದೆ
ಆತ್ಮಶುದ್ಧಿಯಲಿ ಮೈ ಮಾರುತಿರುವಳು…

ರುಕ್ಮಿಣಿ ಎನ್.

ಈ ಮುಸ್ಸಂಜೆಯಲಿ ಚಳಿ ಹುಟ್ಟಿಸುವ
ನಿನ್ನ ಬೆಚ್ಚನೆಯ ಭಾವನೆಗಳಿಗೆ
ಮಾರುಹೋಗಿ
ನಿನ್ನ ಪಡೆಯುವ ಹಠದಲ್ಲಿ ನಾನೀಗ
ಧ್ಯಾನಸ್ಥೆ!

***
ಇಲ್ಲೆನಗೆ ರಾತ್ರಿಯಿಡೀ ಬಿಕ್ಕಳಿಕೆ
ನಿಜ ಹೇಳು-
ನನ್ನ ನೆನಪುಗಳ ಸಂತೆಯಲಿ
ಕಳೆದುಹೋದ ಚೋರ ನೀನೆ ತಾನೆ..?

***
ಕಳೆದ ರಾತ್ರಿ
ಕಣ್ಣು ತುಂಬಿದ ನೀರು
ನಿದ್ದೆ ಮಾಡಗೊಡಲಿಲ್ಲ ಹುಡುಗ…

***
ನಿನ್ನ ಕಣ್ಣ ತಿಳಿಗೊಳದಲಿ
ನನ್ನ ಭಾವನೆಗಳನ್ನೆಲ್ಲ ಬೆತ್ತಳುಗೊಳಿಸಿ
ಈಜಬೇಕಿದೆ ಹುಡುಗ
ನನ್ನ ಪ್ರೀತಿಯ ಸಾವು-ಬದುಕು
ಪರೀಕ್ಷಿಸಲು….

***
ನಿನ್ನ ಮೌನವೂ ಇರಿಯುತ್ತದೆ ನನ್ನ
ಬಲು ಹಿತವಾಗಿ..
ಹಾಯ್ ಹಾಯ್

***

ರುಕ್ಮಿಣಿ ಎನ್.

ಮೊರೆಯನಾಲಿಸು

ಆದಾಮನ ಪ್ರೇಮಪಾಶದಿ ಸಿಲುಕಿ
ಪಾಪದಲಿ ಪಾಲುಂಡ, ಆ
ಏವಳು ನಾನೇ ಹೇ ಪ್ರಭು…

ಪಾಪದ ಹೊರೆಯೀಗ ಭಾರವೆನಿಸುತಿದೆ
ಮನ್ನಿಸಿ ಬಿಡು ನನ್ನೊಮ್ಮೆ
ಹೇ ಅಘನಾಶಕ…

ದೂತಗಣ ಅತೀ ಚಂದದಿ ಉಲಿದಿತ್ತು
ಒಳಿತು ಕೆಡುಕುಗಳ, ಕೇಳದ
ಚಂಚಲಮನ ಮರುಳಾಗಿ ಹೋಗಿತ್ತು…

ಅರಿವಿನ ಕನ್ನಡಿಯಲೀಗ ನನ್ನ ನಾ ಕಾಣುತಿರಲು
ಅಗೋ, ಅಲ್ಲಿ ಮೂಡುತಿದೆ
ನನ್ನದೇ ಲಜ್ಜೆಗೆಟ್ಟ ಬೆತ್ತಲು ಮನ…

ಪಾಪದಿ ಇರದ ಭಯ ತಾಪದಿ ದಹಿಸುತಿರಲು
ಅಭಯ ಹಸ್ತ ಚಾಚುತ ರಕ್ಷಿಸಬಾರದೇ?
ಹೇ ಕರುಣಾಕರ…

ಭವಸಾಗರದ ಸುಳಿಗೀಗ ಸಿಲುಕಿ
ರೋದಿಸುತಿರುವೆನು ಹೊರ ಬರದೆ, ಮೊರೆಯನಾಲಿಸಿ
ಪೊರೆಯು ನನ್ನ ಹೇ ತಂದೆ…

ರುಕ್ಮಿಣಿ ಎನ್.

ಇನ್ನಿಲ್ಲದ ನಿನಗಾಗಿ…

ನಾ ನಿನ್ನ ನೋಡುವುದಕೂ
ನೀ ನನ್ನ ನೋಡುವುದಕೂ
ತಾಳೆಯಾಗಿದ್ದರೆ
ನನ್ನೆಲ್ಲ ಭಾವನೆಗಳೂ
ನಿನ್ನವೇ ಆಗಿರುತ್ತಿದ್ದವು ಈ ದಿನ…

ನಾನೇ ಬೇರೆ…
ನೀನೆ ಬೇರೆ…
ನಾನು ನಾನಾಗಿ ನೀನು ನೀನಾಗಿಯೇ
ಉಳಿದುಬಿಟ್ಟೆವು
ನಾನು ನೀನು ಹಿಂದಿನಂತೆಯೇ…

ಛೆ!
ಹೀಗಾಗಬಾರದಿತ್ತು…

ನನ್ನ ನಿನ್ನ ನಡುವೀಗ ಬೇರೇನೂ ಉಳಿದಿಲ್ಲ
ಅಹಮಿಕೆಗಳ ಗೋಡೆಯೊಂದು
ಬೆಳೆದು ನಿಂತಿದೆ
ಹಿಂದೆಂದೂ ನಾವಾಗದ ನಾನು ನೀನು
ಮುಂದೆಂದೂ ನಾವಾಗಲಾರೆವು
ಎಂದೆನಿಸುತಿದೆ ಈಗೀಗ…

ಈ ನಾನು ನೀನೆಂಬುವುದು ಮಣ್ಣಲ್ಲಿ ಹುದುಗಿ
ಕಾಲದ ಮರೆವೆಂಬ ಮಳೆ ಹನಿದು
ಸ್ನೇಹದ ಹೂವೊಂದು ಚಿಗುರಿದರೆ
ಮಂದಸ್ಮಿತಳಾಗುವೆ
ಮುಂದೊಂದು ದಿನ….

ರುಕ್ಮಿಣಿ ಎನ್.

ನಿರೀಕ್ಷೆ

ನೆನ್ನೆಯ ನೆನಪುಗಳಲ್ಲಿಯೇ
ಹೊರಳಾಡುತಿದೆ ಮನಸು
ತನಗೆ ತಾನೇ ಬೇಸರ ಎನಿಸುವಷ್ಟು..
ಕುಗ್ಗಿಯೇ ಹೋಗಿದೆ ಹೃದಯ
ಜಡತ್ವ ತುಂಬಿ
ದೈತ್ಯ ದೇಹಕ್ಕೂ ಮೇಲೆತ್ತಲು ಕಸುವಿಲ್ಲದಷ್ಟು..

ದೈವದ ವಕ್ರದೃಷ್ಟಿ ಇರಬಹುದು
ಅದೇನಾಯಿತೋ ಏನೋ
ಅರಿವಿಗೆ ಮಾತ್ರ ಇಂದಿಗೂ ಬರದು..
ನಂಬಿಕೆಯ ಚೀಲಕೀಗ ತೂತು ಬಿದ್ದಂತಿದೆ
ಸಂಬಂಧಗಳ ಕೊಂಡಿ ಕಳಚಿ
ನೆಲಕುರುಳಿ ಅಸು ನೀಗಿದೆ..

ಮೊಬ್ಬು ಹಿಡಿದಂತಿದೆ ಈ ಬದುಕ ಸಂತೆಗೆ
ದಿಕ್ಕೆಟ್ಟ ಹೃದಯದ ಆರ್ತನಾದವೊಂದು
ಘೂಂಜಿಸುತಿದೆ ಜನನಿಬಿಡದಲಿ..
ಹೃದಯ ರೋದನೆಯ ಕೇಳುವವರು ಯಾರಿಲ್ಲ
ಇಳಿ ಸಂಜೆಯ ಮುನ್ನ ಸಂತೆ ಮುಗಿಸಿ
ಮನೆ ಸೇರುವ ಧಾವಂತದಲಿ..

ತನ್ನ ಮಡಿಲೊಳಗೆ ತಲೆಯಿರಿಸಿ
ಚಪ್ಪರಿಸುತ ನಿದಿರೆಗೆ ಜಾರಿಸಿ
ಸಾಂತ್ವನ ಹೇಳಿದಂತಿದೆ ತಲೆದಿಂಬು..
ಭಾರಹೊತ್ತ ಭಾವನೆಗಳ ಮೂಟೆ ಇಳಿಸಿದ ಹೃದಯಕೀಗ
ನವೋದಯದ
ನವಕಲರವದ ನಿರೀಕ್ಷೆ…

ರುಕ್ಮಿಣಿ ಎನ್.

ಅಪ್ಪನ ನೆನಪಾದಾಗಲೆಲ್ಲ

ತುಂಬು ಬಸುರಿಯ
ಹಾಡು ಹಗಲಲ್ಲೇ
ದೂರ ದೇಶದಿ ತೊರೆದು ನಡೆದ
ಆ ಬೇಜವಾಬ್ಧಾರಿ ಗಂಡಸು ನೆನಪಾಗುತ್ತಾನೆ…

ದಿನ ಬೆಳಗಾದರೆ
ಹೊಡೆದು ಬಡಿದು ಕಣ್ಣೀರು ಕುಡಿಸಿ
ರಾತ್ರಿಯಷ್ಟೇ
ತನ್ನ ದೇಹ ತೀಟೆಗೆ
ಅವಳನ್ನ ಬಯಸುತ್ತಿದ್ದ ಕಾಮುಕಿ ನೆನಪಾಗುತ್ತಾನೆ…

ಉಣಬಡಿಸಿದ ಅನ್ನದಲಿ
ವಿಷವಿರಬಹುದೆಂಬ ಮನಸ ಕ್ರಿಮಿಗೆ ಕಿವಿಗೊಟ್ಟು
ಅವಳುಂಡ ನಂತರ ಉಣ್ಣುತ್ತಿದ್ದ
ಆ ಸಂದೇಹಿ ನೆನಪಾಗುತ್ತಾನೆ…

ದುಡಿದು ತಂದು ಹಿರೆತನ ಮಾಡುವ
ಬುದ್ಧಿ ದೂರ ಇರಲಿ
ಸಗಣಿ ಬಾಚಿದರೆ ಕೈ ನಡುಗುತ್ತದೆಂದ
ಆ ಮಹಾ ಸೋಮಾರಿ ನೆನಪಾಗುತ್ತಾನೆ…

ತಾಯಿಯಿಂದ ಮಕ್ಕಳ ಬೇರ್ಪಡಿಸಿ
ಮತ್ಯಾರಿಗೋ ಅವ್ವ ಅಂತನಿಸಿ
ಹೆತ್ತ ಕರುಳ ಹಿಂಡಿದ ಆ ನಿರ್ದಯಿ ನೆನಪಾಗುತ್ತಾನೆ….

ಹೌದು…
ಅಪ್ಪ ಅಂದಾಗೆಲ್ಲ ಇವನೇ ನೆನಪಾಗುತ್ತಾನೆ….

ಇವನ ಭಯಕಂಜಿ
ಕತ್ತಲು ಕೂನೆಯ ಮೂಲೆಯೊಂದರಲಿ
ಅವಿತುಕೊಳ್ಳುತ್ತಿದ್ದ ಆ ಮುಗ್ಧ ಹಸುಳೆಗಳು ನೆನಪಾಗುತ್ತಾರೆ….

ನೂರು ಬಾಯಿಯ ನೂರು ಮಾತನು
ತನ್ನೊಡಲೊಳಗೆ ಅಟ್ಟು
ಬದುಕ ಹುಟ್ಟುಹಾಕಿದ
ಆ ಮಹಾತಾಯಿ ನೆನಪಾಗುತ್ತಾಳೆ….

ರುಕ್ಮಿಣಿ ನ್

ಕಳೆದು ಹೋಗುವ ಬಾ

ನೀ ಹೀಗೆಯೇ
ಗದ್ದಕ್ಕೆ ಕೈಯಿಟ್ಟು ಕುಳಿತು
ನಗುವಾಗಲೆಲ್ಲ
ಪ್ರೀತಿ ಮೂಡುತ್ತದೆ ನಿನ್ನ ಮೇಲೆ…

ಹಾಗೆಯೇ ಇರು,
ನಾನೂ ಕೂರುತ್ತೇನೆ ನಿನ್ನೆದುರಿಗೆ
ಗದ್ದಕ್ಕೆ ಕೈಯಿಟ್ಟು
ಪ್ರೀತಿಸಬೇಕು ತುಸು ಕಣ್ಣಲ್ಲಿ ಕಣ್ಣಿಟ್ಟು…

ಶ್ಹ್…
ತುಂಟಾಟವೆಲ್ಲ ಪಕ್ಕಕ್ಕಿಡು
ಕಳೆದು ಹೋಗಬೇಕು ನಾನೀಗ
ಒಂದಷ್ಟು ಕ್ಷಣ ಮೌನಿಯಾಗು,
ಕಣ್ಣುಗಳಲ್ಲಿ ಕಣ್ಣುಗಳಿರಿಸಿ
ನನ್ನೊಳಗೆ ಬಂಧಿಯಾಗು…

ಆಹಾ! ಅದೆಂಥ ಉನ್ಮಾದ!
ನನ್ನ ನೀನು, ನಿನ್ನ ನಾನು
ಎವೆ ಇಕ್ಕದೆ ನೋಡುತಿರಲು
ಕಾಲವನು ತಡೆಹಿಡಿಯುವ ಆಸೆ ನನಗೀಗ…

ನಿಲ್ಲು ನಿಲ್ಲು ..
ನಿನ್ನ ಗುಳಿ ಕೆನ್ನೆ ಛೇಡಿಸುತಿದೆ ನನ್ನ
ಬೆರಳ ಬುಗುರಿಯಾಡಬೇಕು
ಕೆನ್ನೆ ಓರೆಯಾಗಿಸಿ ಕೊಂಚ ಸಹಕರಿಸು…

ಕಪ್ಪು ತೊಂಡೆದುಟಿಗಳ ಮೇಲೆ
ಕೆಂಪು ಮುದ್ರೆ ಒತ್ತಿಡುವೆ
ಕಳೆದು ಹೋಗುವ ಬಾ ಇನಿಯ
ಪ್ರಣಯದೂರಿಗೆ…

ರುಕ್ಮಿಣಿ ಎನ್.