Archive | ಅಕ್ಟೋಬರ್ 2013

ಈ ಹೂವು, ಆ ದುಂಬಿ

ನಿನ್ನೆ ಮೊನ್ನೆಯಷ್ಟೇ
ತುಂಡು ಲಂಗದಲ್ಲಿ ಕಾಣುತ್ತಿದ್ದ
ನಮ್ಮ ವಠಾರದ ಹೈದ್ಲೀಗ ಮೈನೆರೆದು ಬಿಟ್ಟವಳೆ..

ಸಪೂರವಾದ ನೀಳ ಕಾಯದ ಅವಳು
ಹಸಿರು ಸೀರೆಯಲಿ ಇನ್ನೂ ಚೆಲುವೆ
ಇವಳ ಅಂದಕ್ಕೆ ಬೆರಗಾಗುವ ಆ ಭ್ರಮರನಿಗಂತೂ ಲಜ್ಜೆಯೇ ಇಲ್ಲ..

ನನ್ನ ಉಪಸ್ಥಿತಿಯಲ್ಲಿ ಅದೆಂತ ಅವಸರ ಅವನಿಗೆ
ಕೆಂಪಾದ ಅವಳಧರಗಳ ಮೇಲೆ ಕೂತು ಮಧು ಹೀರುತ್ತ
ರೆಕ್ಕೆಗಳ ಮೇಲೇರಿಸುತ್ತ ಸಂತೃಪ್ತಿ ವ್ಯಕ್ತಪಡಿಸುವನಲ್ಲ……

ರುಕ್ಮಿಣಿ ಎನ್
೨೭/೧೦/೨೦೧೩

ಮಳೆಯಲಿ… ನಿನ್ನ ನೆನಪುಗಳ ಜೊತೆಯಲಿ…

ಆಫೀಸಿನಿಂದ ಮನೆಗೆ ಬರುವಾಗ
ಶುರುಗೊಂಡ ಆ ಜಿಟಿ ಜಿಟಿ ಮಳೆ
ಬೀಳತೊಡಗಿತು ಸ್ವಲ್ಪ ಜೋರಾಗಿಯೇ..

ಬ್ಯಾಗ್ನಲ್ಲಿದ್ದ ಕೊಡೆ ತೆಗೆದು
ತಲೆಗೆ ಹಿಡಿದೆ
ಗಕ್ಕನೆ ನೆನಪಾಗಿದ್ದೇ ನೀನು..

ಕೊರೆವ ಮಳೆ ಚಳಿಗಳಲೂ
ಮೈ ಒಡ್ಡಿ ಮಲಗಿರುವೆ ಮಗುವಿನ ಹಾಗೆ
ಅದೆಷ್ಟಂತ ನಿನ್ನ ಸಂಬಾಳಿಸೋದು..?

ನೀ ನೆನೆದು, ನಾ ಬೆಚ್ಚಗಿರುವುದೇ?
ಅಪಾರವಾಗಿ ಕಾಡಿತು
ಇಳಿಸಿದೆ ಏರಿಸಿ ತಲೆಗಿಡಿದ ಕೊಡೆಯನ್ನು..

ಆಕಾಶವಾಣಿಯಂತೆ ತೇಲಿಬಂತು
ಆ ದಿನಗಳಲಿ ನೀನುಲಿದ ಮಾತು
ಮತ್ತೆ ಹಿಡಿದೆ ತಲೆಗೆ ಕೊಡೆಯನ್ನು..

ದಿಟ್ಟಿಸಿದೆ ಆಕಾಶವನ್ನೊಮ್ಮೆ ತುಂಬಿ ತಂದು ಕಣ್ಣುಗಳೆರಡನ್ನೂ
“ಧೋ” ಎಂದು ಮತ್ತೆ ಜೋರಾಯಿತು
ಮಳೆಯೂ ಕಣ್ಣೀರ ಕೋಡಿಯೂ…

ಬಿಗಿದಿಡಿದಷ್ಟು ಅಲುಗಾಡುತಿರುವ ತುಟಿಗಳ ಮೇಲೆ
ಮುಗ್ಧ ಪ್ರಶ್ನೆ ಒಂದಿತ್ತು
ಎಲ್ಲಿ ಹೋದೆ ನೀ ಕಣ್ಮರೆಯಾಗಿ..?

ರುಕ್ಮಿಣಿ ಎನ್.
23/10/2013

ಬಾಗಿಲು ಬಾರಿಸಲಿಲ್ಲ
ಅನುಮತಿ ಪಡೆಯಲಿಲ್ಲ
ಗೂಳಿಯಂಗೆ ನುಗ್ಗಿ
ಕೆನ್ನೆ ರಂಗೇರಿಸಿದನಲ್ಲ
ಪಡುವಣದ ಪೋಲಿ!

1) ನೂರಾರು ಕನಸುಗಳು ಈ ಪುಟ್ಟ ಕಂಗಳಲಿ
ಒಮ್ಮೆ ಕರಗುತ್ತವೆ ಮತ್ತೊಮ್ಮೆ ಬೆಳಗುತ್ತವೆ!

2) ದನಿಯಾಗು ಬಾ ಒಮ್ಮೆ ಹೃದಯದ ಮಾತಿಗೆ
ಅಂತಾದರೂ ನೀ ಅರಿಯುವೆ ಹೃದಯದ ಭಾವನೆಗಳ!

3) ವಸಂತಕಾಲ ನನಗಾಗ ಎದೆಯ ಮಾಮರ ಚಿಗುರುವಾಗ
ಶರತ್ಕಾಲ ನನಗಾಗ ಒಲವ ಮಹಾಪೂರ ನೀ ಹರಿಸುವಾಗ!

4) ಗಾಳಿ ನೀರಿದ್ದರಷ್ಟೇ ಸಾಲದು ನನಗೆ ಬದುಕ ನಡೆಸಲು
ನಿನ್ನ ಒಲವಿನ ತುತ್ತೂ ಬೇಕು!

5) ಕಾಯಿಸುವನವ ಕಾಡಿಸುವನವ
ಕಾಯಿಸಿ ಕಾಡಿಸಿ ಒಲವ ಮಳೆ ಹರಿಸುವವನೂ ಅವ!

6) ನಯನದಿ ತುಂಬಿಕೊಳ್ಳಬೇಕೀಗ ನಿನ್ನನ್ನು ಆದರೆ,
ಕಂಗಳಲ್ಲಿ ಹಾಳಾದ ನಾಚಿಕೆಯೇ ತುಂಬಿ ಹೋಗಿದೆ!

7) ಸಾಗರಕ್ಕೆ ಹೋಲಿಸಲೇ ನನ್ನೀ ಪ್ರೀತಿಯ
ಬೇಡ ಬಿಡು
ನನ್ನ ಪ್ರೀತಿ ಯಾವ ಹೋಲಿಕೆಗೂ ನಿಲುಕದು!

8) ತಂಗಾಳಿ ನೀನು
ನಾ ನಿನ್ನ ನೆನೆಯುವ ಪ್ರತಿಕ್ಷಣ!

9) ವಸುಂಧರೆ ನಾನಾಗುವೆ
ಬಾನಾಗಿ ನೀ ನನ್ನ ಅವರಿಸುವೆಯಾದರೆ!

10) ದೂರವಿದ್ದಾಗ ಸನಿಹ ಇದ್ದವನವ
ಈಗ ಸನಿಹವಿದ್ದರೂ ನಿಲುಕದಷ್ಟು ದೂರ ಇರುವನವ!

11) ಘೆ ಘೆ ರೇ ಘೆ ಎಂದು ಕೊಡಲೊಲ್ಲೆನು ನನ್ನ ಹೃದಯವ
ತಾನಾಗಿಯೇ ಬಂದು ನಿಲ್ಲಲಿ ಹೃದಯದಲಿ
ಬೇಕೆಂದರೆ ಜಾಗ ಮಾಡಿ ಕೊಡುವೆನು!

12) ಲೋಕವೇ ಇಲ್ಲ ಪ್ರೀತಿಯ ಹೊರತು
ಪ್ರೀತಿಯಲಿ ಪ್ರತಿ ದಿನ ಹೊಸತು!

ರುಕ್ಮಿಣಿ ಎನ್.