Archive | ಜುಲೈ 2013

ಭಾವಚಿತ್ರ (೧)

374316_555444724501050_1972961305_n

ಕಾರ್ಮೋಡ ಕವಿದ ಆ
ಆಗಸದತ್ತ ದೃಷ್ಟಿ ನೆಟ್ಟು
ತೊರೆದೆನ್ನ ಹೊರಟು
ಹೋದೆಯಲ್ಲೆನುತ
ತನ್ನೆರಡೂ ಕೈಗಳನ್ನು
ಚಾಚಿ ಬಿಕ್ಕಿ ಬಿಕ್ಕಿ
ಅವಳು ಅಳುತಿರಲು
ಆ ಮೋಡಗಳೆದೆಯನ್ನು
ಸೀಳುತ ಬಂದನು ಹುಡುಗ
ತನ್ನವಳ ಕಣ್ಣೊರೆಸಲು…

ರುಕ್ಮಿಣಿ ಎನ್.

ಚಿತ್ರಕೃಪೆ: ಅಂತರ್ಜಾಲ

ಜೇನ ಹನಿ

೧. ಕನಸು

ನಿದಿರೆಗಷ್ಟೇ ಸೀಮಿತವಾಗದಿರು
ಓ ನನ್ನ ಕನಸೆ
ನಿನಗಾಗಿ ಇಡೀ ಬದುಕೇ
ಹಾತೊರೆಯುತ್ತಿರುವಾಗ.

೨. ನೆಪ

ಮಳೆ ಚಳಿಗಳ ನೆಪಗಳೇ ಸಾಕು
ಹಾಳಾದ ನೆಗಡಿಗೆ
ನನ್ನ ಅರಸಿ ಆಲಂಗಿಸಲು.

೩. ಮೀನು

ಅವನ ವಾರೆನೋಟದ ಬಲೆಗೆ
ಸಿಲುಕಿಬಿದ್ದ ಅವಳೀಗ ವಿಲವಿಲನೆ
ಹೊರಳಾಡುತಿರುವ ಮೀನು.

೪. ಹನಿ ಹನಿ

ಜೊತೆ ನೀನಿರದ ನನ್ನ
ಮನದ ತುಮುಲಗಳೇ ಇಂದು
ಹನಿ ಹನಿಯಾಗಿ ಜಿನುಗುತಿವೆ ಗೆಳೆಯ.

ರುಕ್ಮಿಣಿ ಎನ್.

ನನ್ನ ಮನಸೆಂಬ ಆಗಸದಲ್ಲಿ

ಇಹುದೊಂದು ಆಗಸ ನನ್ನ ಮನದಲೂ
ಬದಲಿಸುವುದದು ಬಣ್ಣಗಳ ಪ್ರತಿ ದಿನವೂ

ಕೆಲವೊಮ್ಮೆ ದುಃಖದ ಮೋಡಗಳು ಹನಿ ಹನಿಯಾಗಿ ಭುವಿಗಿಳಿದರೆ
ಮತ್ತೆ ಕೆಲವೊಮ್ಮೆ ಸಂತಸದ ತಾರೆಗಳು ಜಗಮಗಿಸುವವು

ಕೆಲವೊಮ್ಮೆ ದೂರ ದೂರದಿ ಬರಡು ಭಾವನೆಗಳು ಹರಡಿದರೆ
ಮತ್ತೆ ಕೆಲವೊಮ್ಮೆ ಎಲ್ಲ ದಿಶೆಯಿಂದ ಭರವಸೆಗಳು ಅಚ್ಚು ಹಾಕುವವು

ಕೆಲವೊಮ್ಮೆ ಬಯಕೆಗಳ ಹಕ್ಕಿ ಗರಿ ಬಿಚ್ಚಿ ಸ್ವಚ್ಚಂದವಾಗಿ ಹಾರಿದರೆ
ಮತ್ತೆ ಕೆಲವೊಮ್ಮೆ ಎಲ್ಲದರಲೂ ಆಕಾಸ್ಮಿಕಗಳ ಸೂತಕ ಆವರಿಸುವವು

ಕೆಲವೊಮ್ಮೆ ತಿಂಗಳ ಚಂದ್ರನು ಹಾಲಬೆಳದಿಂಗಳಲಿ ನಗೆಯಾಡಿದರೆ
ಮತ್ತೆ ಕೆಲವೊಮ್ಮೆ ಅಮವಾಸ್ಯೆಯ ಇರುಳುಗಳು ಕಪ್ಪುಕೊಡೆ ಹಿಡಿಯುವವು

ಕೆಲವೊಮ್ಮೆ ಕಾಮನಬಿಲ್ಲಿನ ಸಪ್ತ ರಂಗುಗಳು ಸಂಗೀತ ನುಡಿಸಿದರೆ
ಮತ್ತೆ ಕೆಲವೊಮ್ಮೆ ಸ್ವರ ತಾಳ ಲಯಗಳೆಲ್ಲ ಮೌನರಾಗ ಹಾಡುವವು

ಕೆಲವೊಮ್ಮೆ ಸಂಜೆಯ ಸಿಹಿ ತಂಗಾಳಿ ಹಿತವಾಗಿ ಸೂಸಿದರೆ
ಮತ್ತೆ ಕೆಲವೊಮ್ಮೆ ಗುಡುಗು ಮಿಂಚುಗಳ ಭಯದ ಕಥೆ ಹೇಳುವವು

ಕೆಲವೊಮ್ಮೆ ಮುಂಜಾನೆಯ ಹೂವುಗಳಂತೆ ಅರಳಿ ನಲಿದರೆ
ಮತ್ತೆ ಕೆಲವೊಮ್ಮೆ ಮುಸ್ಸಂಜೆಯ ಇರುಳ ಸಂಗಡ ಮುದುಡುವವು

ಇಹುದೊಂದು ಆಗಸ ನನ್ನ ಮನದಲೂ
ಬದಲಿಸುವುದದು ಬಣ್ಣಗಳ ಪ್ರತಿ ದಿನವೂ…

ರುಕ್ಮಿಣಿ ಎನ್.

ಪ್ರೇರಣೆ: ಹಿಂದಿ ಕವಿತೆ

ಹೃದಯವೀಣೆ ಮಿಡಿಯುವಾಗ

ವ್ಯಾಮೋಹ

ಕುಡಿಮೀಸೆಯ
ಹುಡುಗನ ಕಿರುನೋಟ
ನನ್ನ ಮೇಲೆ ಬಿದ್ದಾಗಲೇ
ಕನ್ನಡಿಯ ಮೇಲೆ
ನನಗೆ ವ್ಯಾಮೋಹ
ಶುರುವಾಗಿದ್ದು !

ರೂಪಾಂತರ

ಅವನಿಗೆ ಹೇಳದೇ ಉಳಿದಿಹ
ಮನದ ಅನಾಥ ಭಾವನೆಗಳು
ಇಂದು ಕವಿತೆಯಾಗಿ
ರೂಪಾಂತರಗೊಳ್ಳುತಿವೆ!

ಮನದ ಭ್ರಮೆ

ಕವಲೊಡೆದ ದಾರಿಯಲಿ
ನಾ ಒಬ್ಬಳೇ ನಡೆದರೂ
ಮನ ನುಡಿಯುತಿದೆ ನಲ್ಲ
ನೀನಿಲ್ಲೇ ಇರುವೆ
ಸುಳಿ ಗಾಳಿಯಾಗಿ
ನಾ ನಡೆವ ದಾರಿಯಾಗಿ!

ರುಕ್ಮಿಣಿ ಎನ್.

ನೆನಪಿನ ದೋಣಿಯಲಿ (೧)

ಹಳೆ ಡೈರಿಯ ಕೊನೆಯ
ಮೂಲೆಯಲಿ ಹೊಸದಾಗಿ ಸೇರಿಸಿದ
ನಿನ್ನ ಹಳೆ ನಂಬರ್ ಮೇಲೆ
ಕಣ್ಣಾಡಿಸಿದಾಗ
ಬತ್ತಿ ಹೋದ ನಿನ್ನೆಯ
ನಿನ್ನ ನೆನಪುಗಳೆಲ್ಲ
ಮತ್ತೆ ಹಸಿರಾಗಿ
ಮಿಂಚುವ ಕಣ್ಣಂಚಲಿ
ಕಂಬನಿ ಹೆಪ್ಪುಗಟ್ಟಿತು!

ಮನಸ್ಸು ಒಂಟಿಯಾಗಿ (೨)

ಅಂದು ಪ್ರಪಂಚವಾದವರು
ಇಂದು ಶೂನ್ಯರೆನಿಸಿಹರು
ಎಲ್ಲ ನಾಟಕೀಯ ಜನರು
ಮನಸ ದಾಳವಾಗಿಸಿ
ಆಟ ಮುಗಿಸಿಹರು
ಯಾರನಿಲ್ಲಿ ಯಾರು ಬಲ್ಲರು…