ಸಂಗ್ರಹಗಳು

ಶಾಂತಿ ನಿವಾಸ

ಎಷ್ಟೋ ದಿನಗಳಿಂದ ತೆರೆದುಕೊಂಡಿದ್ದ ಮನೆ-ಕಿಟಕಿ ಬಾಗಿಲುಗಳು ತೆರೆದುಕೊಂಡತೆಯೇ ಇದ್ದವು. ರಭಸವಾಗಿ ಬಿದ್ದ ಮಳೆಗೆ ಮಣ್ಣಿನ ಮೇಲ್ಛಾವಣಿ ಕುಸಿದು ಬಿದ್ದಿತ್ತು. ಕಿಟಕಿ ಬಾಗಿಲುಗಳಲ್ಲಿ ಜೇಡರ ಮಹಾರಾಯ ಸುಖಾಂತವಾಗಿ ತನ್ನ ಸುತ್ತ ಬಲೆಯನ್ನು ಹೆಣೆದುಕೊಂಡು ಮನೆ ತುಂಬಾ ಮುತ್ತಿಗೆ ಎಂಬಂತೆ ತನ್ನ ಸಾಮ್ರಾಜ್ಯ ವಿಸ್ತರಿಸುತ್ತಲೇ ಇದ್ದ. ಮನೆಯ ಪಕ್ಕದಲ್ಲಿ ಇದ್ದ ಬೇವಿನ ಮರದ ಫಲ-ಪುಷ್ಪಗಳು ಮನೆಯ ಮೆಟ್ಟಿಲುಗಳನ್ನು ಶೃಂಗರಿಸಿದ್ದವು. ಸಂಜೆಯಾಗುತ್ತಿದ್ದಂತೆ ಕಟ್ಟೆಗೆ ಕೂತು ಹರಟುತ್ತಿದ್ದ ವಯೋವೃದ್ದರ ಬಾಯಲ್ಲಿ ಎದುರಿನಲ್ಲಿದ್ದ ಹಾಳು ಬಿದ್ದ  ಮನೆಯ ಕತೆಯೇ ವಿಷಯ ವಸ್ತುವಾಗಿರುತ್ತಿತ್ತು. ಆ ಮನೆಯ ಹೆಸರೇ “ಶಾಂತಿ ನಿವಾಸ”.

ಹಳ್ಳಿಯೊಂದರಲ್ಲಿ ಸ್ವಲ್ಪ ದೊಡ್ಡದು ಎನ್ನುವಂತಹುದೇ ಆದ ಹೋಟೆಲೊಂದನ್ನು ಇಟ್ಟುಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದ ಸಂದೇಶ. ಮಡದಿ ಶಾಂತಿ ಜೀವನದುದ್ದಕ್ಕೂ ಜೊತೆಗಿರುವೆ ಎಂದು ಹೇಳುತ್ತಿದ್ದವಳು ಎರಡು ವರುಷಗಳ ಹಿಂದೆಯೇ ಪತಿ-ಸುತರನ್ನು ಅನಾಥರನ್ನಾಗಿ ಮಾಡಿ ಪರಲೋಕ ಯಾತ್ರೆ ಕೈಗೊಂಡಿದ್ದಳು. ಶಾಂತಿ ಇಲ್ಲದೇ “ಶಾಂತಿ ನಿವಾಸ” ಬಿಕೋ ಎನ್ನುತ್ತಿತ್ತು.

೧೫ ನೇ ಪ್ರಾಯದ ಮೇಘನ ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಗಳನ್ನು ಅಪಘಾತವೊಂದರಲ್ಲಿ ಕಳೆದುಕೊಂಡಿದ್ದಳು. ಆಸರೆಗಂತ ಇದ್ದವಳೇ ಆಕೆಯ ಅಜ್ಜಿ ಸಾಕಮ್ಮ. ಈಗಲೋ ಆಗಲೋ ಎನ್ನುತ್ತಿದ್ದ ಸಾಕಮ್ಮನಿಗೆ ಆಗ ತಾನೇ ಮೈನೆರೆದು ನಿಂತ ಮೇಘನಳ ಬಗ್ಗೆಯೇ ಚಿಂತೆ ಕಾಡುತ್ತಿತ್ತು.  ದೂರದಲ್ಲಿದ್ದ ಸಂಬಂಧಿ ಸಂದೇಶನ ನೆನಪಾಗಿ ಹೆಣ್ಣಿಲ್ಲದ, ಕತ್ತಲು ಕವಿದ ಮನೆಗೆ ಬಾಳ ಬೆಳಗೋ ದೀಪವಾಗಿ ಸಂದೇಶನ ಮನೆ ತುಂಬಿದರೆ ಅವಳಿಗೆ ಗಂಡಿನಾಶ್ರಯವೂ ಸಿಕ್ಕಂತಾಗುತ್ತದೆ ಎಂದರಿತ ಸಾಕಮ್ಮ ತರಾತುರಿಯಲ್ಲಿ ಮದುವೆ ಮಾಡಿ ತನ್ನ ಜವಾಬ್ದಾರಿ ಮುಗಿಯಿತೆಂದು ನಿಶ್ಚಿಂತೆಯಿಂದ ಕಣ್ಣು ಮುಚ್ಚಿದ್ದಳು.

ಗಂಡನ ಮನೆಗೆ ಬಂದ ಮೇಘನಳಿಗಿನ್ನೂ ಆಡೋ ವಯಸ್ಸು, ಸಂಸಾರದ ಜವಾಬ್ದಾರಿಗಳು ಗೊತ್ತಿರದ ಮುಗ್ಧ ಹಸುಳೆ ಆಗಿದ್ದರೂ, ಮನೆಗೆಲಸ ಅಡುಗೆ ಎಲ್ಲವನ್ನು ಅಚ್ಚು-ಕಟ್ಟಾಗಿ ಮಾಡುವದನ್ನು ಕಲಿತಿದ್ದಳು. ಹೊಸದಾಗಿ ಬಂದ ಮೇಘನ ಬಹುಬೇಗನೆ ಹೊಸ  ವಾತಾವರಣಕ್ಕೆ ಹೊಂದಿಕೊಂಡಿದ್ದಳು. ಗಂಡ ಹೆಂಡಿರಲ್ಲಿ ವಯೋಮಾನದ ವ್ಯತ್ಯಾಸ ಕಂಡು ಬಂದಿದ್ದರೂ ಅವರಿಬ್ಬರ ಪ್ರೀತಿ  ವ್ಯತ್ಯಾಸದ ಸಮತೋಲನವನ್ನು ಕಾಯ್ದುಕೊಂಡಿತ್ತು. ಓರಗೆಯವರಾದ ಕಾರಣ, ೧೭ ವರುಷದ ವಿನಯನೊಂದಿಗೆ ತಾಯಿ- ಮಗನ ಸಂಬಂಧ ಎನ್ನುವುದಕ್ಕಿಂತ ಸ್ನೇಹಿತರು ಎಂಬ ಭಾವನೆ ಬೆಳೆಯತೊಡಗಿತ್ತು. ಅಲ್ಪ ಸ್ವಲ್ಪ ಓದಿದ್ದ ಮೇಘನಳಿಗೆ ಓದಿನಲ್ಲಿ ಅತೀವ ಆಸಕ್ತಿ ಇದ್ದುದ್ದರ ಪರಿಣಾಮಾಗಿ ಸಹಜವಾಗಿಯೇ ಓರಗೆಯ ವಿನಯ ಮತ್ತು ಮೇಘನ ಜೊತೆ ಜೊತೆಗೆ ಓಡತೊಡಗಿದರು ಇದು ಅವರಲ್ಲಿ ಗಾಢವಾದ ಸ್ನೇಹ ಬೆಳೆಯಲು ಕಾರಣವಾಯಿತು.

ಇತ್ತ ಗಂಡನನ್ನು ಕಳೆದುಕೊಂಡು ವಿಧವೆಯಾಗಿದ್ದ ಸುಗಂಧಳಿಗೆ (ಸಂದೇಶ ತಂಗಿ) ಮೇಘನಳ ಸುಖೀ ಸಂಸಾರ ನೋಡಲಾಗದೇ ಹೋಯಿತು. ತಾನು ಕಾಣದಿರುವ ಸುಖ-ಸಂತೋಷಗಳು ಮೇಘನಳಿಗಷ್ಟೇ ಮೀಸಲೇ ಎಂದು ಮನದಲ್ಲಿ ಅಸೂಯೆ ಪಡಲು ಶುರು ಮಾಡಿದಳು. ಆ ಅಸೂಯೆಯ ಮೊತ್ತವೇ ಅಸಹನೆಗೆ ಕಾರಣವಾಗಿ ಒಂದಿನ ಜ್ವಾಲಾಮುಖಿಯಾಗಿ ಸ್ಪೋಟಗೊಂಡಿತು. ಕೆಲಸದಲ್ಲಿ ನಿರತನಾಗಿದ್ದ ಅಣ್ಣ ಸಂದೇಶನನ್ನು ಕಾಣುವ ನೆಪ ಮಾಡಿ ವಿನಯ್ ಮತ್ತು ಮೇಘನಳ ನಡುವೆ ಅನೈತಿಕ ಸಂಬಂಧ ಇರುವುದಾಗಿ ಸುಳ್ಳು ಆರೋಪ ಹೊರಿಸಿ ಅಣ್ಣನ ಕಿವಿ ತುಂಬಿ ಬಂದಳು. ಆ ವಿಷಯ ಕೇಳಿ ಹಿಂದೆ ಮುಂದೆ ವಿಚಾರಿಸಿದ ಸುಗಂಧ ಹೇಳಿದ್ದು ಸತ್ಯವಿರಬಹುದೆಂದು ಸಂದೇಶ ನಂಬಿ ಬಿಟ್ಟ. ಅಲ್ಲಿಗೆ ಶುರುವಾಗಿತ್ತು ಸಂದೇಶನ ವಾಸಿಯಾಗದ ಮನೋವ್ಯಾಧಿ. ಎಂದಿನಂತೆ ಮನೆಗೆ ಬಂದಾಗ ಕಾಣುತ್ತಿದ್ದ ಹೆಂಡತಿ ಮಗನ ಸಂತಸ, ಅವರ ಚೆಲ್ಲಾಟ, ಮಕ್ಕಳಾಟ, ನಗು ಮೊಗ ಕಂಡಾಗಲೆಲ್ಲ ಸುಗಂಧ ಹೇಳಿದ ಮಾತುಗಳೇ ನೆನಪಿಗೆ ಬಂದು ಇಲ್ಲ ಸಲ್ಲದ ಕಲ್ಪನೆಗಳು ಕೂಡ ಸಂದೇಶನ ಮೆದುಳಲ್ಲಿ ಶಾಶ್ವತ ಎಂಬಂತೆ ಠಿಕಾಣಿ ಹೂಡಿ ಸಂದೇಶನ ಮಾನಸಿಕ ಅಸ್ವಸ್ತಕ್ಕೆ ಮತ್ತಷ್ಟು ಕಾರಣವಾಗತೊಡಗಿದವು.

ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಹೆಚ್ಚಿನ ವಿದ್ಯಾಭ್ಯಾಸದ ನೆಪ ಹೂಡಿ ಮಗ ವಿನಯನನ್ನು ದೂರದ ಶಹರೊಂದಕೆ ಕರೆದೊಯ್ದು ತಾನು ಮೇಘನ ಮತ್ತು ವಿನಯ್ ವಿಷಯದಲ್ಲಿ ಮಾನಸಿಕ ಅಸ್ವಸ್ತ್ಯದಿಂದಾಗಿ ಬಳಲುತ್ತಿರುವುದಾಗಿ, ಅವರಿಬ್ಬರ ನದುವೆ ಅನೈತಿಕ ಸಂಬಂಧ ಇರುವುದೆಂದು ಹೇಳಿ ಅದು ತನ್ನಿಂದ ಸಹಿಸಲಾಗುತ್ತಿಲ್ಲವಾದ್ದರಿಂದ ವಿನಯ್ ಮತ್ತೆ ಯಾವತ್ತೂ ಮನೆ ಕಡೆಗೆ ತಿರುಗಿ ನೋಡಬಾರದು, ಎಷ್ಟು ದುಡ್ಡು ಬೇಕಾದರು ಕೇಳಿ ಪಡೆ ಇನ್ನು ಮೇಲೆ ನಿನ್ನ ಜೀವನ ನೀನೇ ನೋಡಿಕೋ ಎಂದು ಹೇಳಿ ಬೆನ್ನು ತೋರಿಸಿ ನಡೆದು ಬಂದಿದ್ದ ಸಂದೇಶ. ಹೃದಯವಿದ್ರಾವಕ ಮಾತುಗಳನ್ನು ಮೂಕನಂತೆ ಕೇಳುತ್ತಿದ್ದ ವಿನಯಗೆ ಇದು ಕೇಳಿ ಶಾಕ್ ಜೊತೆಗೆ ಹೃದಯಾಘಾತವೂ ಆಗಿತ್ತು. ತನ್ನ ಮತ್ತು ತಾಯಿ ಸ್ಥಾನದಲ್ಲಿರುವ ಮೇಘನಳ  ನಡುವೆ ಇದ್ದ ಸ್ನೇಹವನ್ನು ಒಂದು ಸಾರಿಯೂ ತಮ್ಮೊಂದಿಗೆ ವಿಚಾರಿಸದೇ  ಅಪ್ಪ ತಪ್ಪು ತಿಳಿದುಕೊಂಡರಲ್ಲ ಅಲ್ಲದೇ ಅಂತಹ ಹೊಲಸು ವಿಚಾರನ್ನು ಎಂದಿಗೂ ಊಹಿಸಿಕೊಳ್ಳಲಾಗದ ವಿನಯ್ ಅದನ್ನೇ ಹಗಲಿರುಳು ನೆನೆಯುತ್ತ ಕಣ್ಣೀರಿಡುತ್ತ ಸಲ್ಲದಿರುವ ಮಾತುಗಳು ಅವನ ಮಾನಸಿಕ ಆರೋಗ್ಯವನ್ನೇ ಹಾಳುಮಾಡಿ ಕೇವಲ ೨ ವರ್ಷಗಳಲ್ಲಿ ವಿನಯ್  ಇಹಲೋಕ ತ್ಯಜಿಸಿದ.

ಮಗ ತೀರಿ ಹೋದ ನಂತರ ಅವನು ಸಂದೇಶನಿಗಾಗಿ ಬರೆದಿಟ್ಟ ಪತ್ರಗಳನ್ನು ಓದಿ, ಅನ್ಯಾಯವಾಗಿ ತನ್ನ ಮಗನನ್ನು ಮನೆಯಿಂದ, ಮನದಿಂದ ದೂರ ಮಾಡಿದ್ಡಲ್ಲದೇ ಈ ದಿನ ಇಹಲೋಕದಿಂದಲೇ ದೂರವಾಗಲು ತಾನೇ ಕಾರಣ. ಸಲ್ಲದ ಮಾತಾಡಿ ಇಲ್ಲವಾದ ಮಗನ ಪರಿಸ್ಥಿತಿಗೆ ತಾನೇ ಕಾರಣ, ಸಂದೇಹ ಅನ್ನೋ ಸುಳಿಯಲ್ಲಿ ಸಿಲುಕಿ ಮಗನ ಬಲಿ ಕೊಟ್ಟ ಪಾಪಿ ತಾನೆಂದು ಕೊರಗುತ್ತ ಕೆಲವೇ ದಿನಗಳಲ್ಲಿ ಸಂದೇಶ ಕೂಡ ಮೇಘಗಳ ಮರೆಯಲ್ಲಿ ಮರೆಯಾಗಿ ಹೋದ.

ವಿನಯ್ ತೀರಿ ಹೋದ ನಂತರವೇ ಸಂದೇಶ ತನ್ನ ಮತ್ತು ವಿನಯ್ ಮೇಲೆ ಸಂದೇಹ ಪಟ್ಟು ವಿನಯ್ ನನ್ನು ಮನೆಯಿಂದ ದೂರವಿಟ್ಟ ವಿಷಯ ತಿಳಿದು ಬಂದಿತ್ತು. ಕುಳಿತು, ಚರ್ಚಿಸಿ ಮಾತನಾಡಿ ಸತ್ಯ ಬೆಳಕಿಗೆ ತರುವ ವೇಳೆಗಾಗಲೇ ಕಾಲ ಮೀರಿ ಹೋಗಿತ್ತು. ಪರಮ ದೈವ ಪತಿ ಎಂದು ಆರಾಧಿಸಿದ ಸಂದೇಶ ಹಾಗೂ ಸ್ನೇಹಿತನಂತೆ ಕಂಡ ಮಗ ವಿನಯ್ ಆಗಲೇ ಸ್ವರ್ಗವಾಸಿಗಳಾಗಿದ್ದರು. ಎಲ್ಲವನ್ನೂ ಕಳೆದುಕೊಂಡಿದ್ದ ಮೇಘನಳಿಗೆ ಕಣ್ಣೀರ ಹೊರತು ಬೇರೇನೂ ಇರಲಿಲ್ಲ.

ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದ ನತದೃಷ್ಟೇ ಮೇಘನಳಿಗೆ ಅಲ್ಪ ಸುಖವಾದರೂ ಕಂಡಿದ್ದರೆ ಅದು ಗಂಡನ ಮನೆಯಲ್ಲಿ ಮಾತ್ರ. ಈಗ ಆ ಸುಖವೂ ಕ್ಷಣಿಕಗೊಂಡು ಬರಿದಾಗಿ ಹೋಗಿತ್ತು. ಇತ್ತ ಸುಗಂಧ, ನಡೆದುದೆಲ್ಲದಕ್ಕೂ ಮೇಘನಳೇ ಕಾರಣವೆಂದು ಆಕೇನ ಅಮಂಗಲವೆಂದು ಹಳಿಯುವುದಕ್ಕೆ ಶುರು ಹಚ್ಚಿಕೊಂಡಳು. “ಚಿಕ್ಕವಳಿದ್ದಾಗ ತಂದೆ-ತಾಯಿನ ನುಂಗಿ, ಗಂಡನ ಮನೆಗೆ ಬಂದು ತಂದೆ-ಮಗನ ನಡುವೆ ಬಿರುಕು ತಂದು ಅವರನ್ನ ದೂರ ಮಾಡಿದ್ದು ಅಲ್ಲದೇ ಅವರನ್ನು ನುಂಗಿ ನೀರು ಕುಡಿದೆ” ಎನ್ನುವ ಸುಗಂಧಳ ಚುಚ್ಚು ಮಾತುಗಳು ಮೇಘನಗಳ ಮನದ ಹಸಿ ಗಾಯದ ಮೇಲೆ ಉಪ್ಪೆರೆಚಿದಂತಿತ್ತು. ಮೊದಲೇ ಗಂಡನನ್ನು ಕಳೆದುಕೊಂಡು ಏಕಾಂಗಿಯಾದ ಜೀವ ಅನುದಿನ ಸುಗಂಧಳ ಚುಚ್ಚುಮಾತಿಗೆ ಮಗದಷ್ಟು ನೊಂದು ಹೋಯಿತು. ಆಕೆ ಇರುವಷ್ಟು ದಿನ ಮೇಘನ ಕಣ್ಣೀರಲ್ಲೇ ಕೈ ತೊಳೆದಿದ್ದಳು.

ಒಂಟಿಯಾಗಿದ್ದ ಜೀವ ಪಕ್ಕದ ಅಂಗಣವಾಡಿಯ ಮಕ್ಕಳೊಡನೆ ಕುಳಿತು, ಮಕ್ಕಳನ್ನು ಆಟವಾಡಿಸುತ್ತ, ನಗಿಸುತ್ತ, ನಗುತ್ತ ದಿನಕಳೆದರೆ, ರಾತ್ರಿಯೆಲ್ಲ ಸಂದೇಶನ ನೆನಪಲ್ಲಿ ಕಳೆಯುತ್ತಿದ್ದಳು. ಸಂದೇಶ, ತನ್ನ ಜೊತೆಗೆ  ಆ ಒಂದು ವಿಷಯದ ಬಗ್ಗೆ ತನ್ನೊಡನೆ ಚರ್ಚಿಸಿದ್ದರೆ ಎಲ್ಲ ಅನಾಹುತಗಳನ್ನು ತಪ್ಪಿಸಬಹುದಿತ್ತು ಎಂದು ತನ್ನಲ್ಲೇ ಕೊರಗಿದ್ದರೆ ಮತ್ತೊಮ್ಮೆ ತನ್ನ ವಿಧಿ ಬರಹದಲ್ಲಿ ಇಷ್ಟೇ ಇತ್ತೇನೋ ಎಂದು ವಿಧಿಯನ್ನು ಹಳಿಯುತ್ತಾ, ಶಟಿದೇವಿಯನ್ನು ಶಪಿಸುತ್ತ ತನ್ನ ೬೦ ರ ಇಳಿವಯಸ್ಸಿಗೆ ವಿಧಿವಶಳಾಗುತ್ತಾಳೆ. ಎಲ್ಲವನ್ನೂ ಕಳೆದುಕೊಂಡ “ಶಾಂತಿ ನಿವಾಸ” ಬಿಕೋ ಎನ್ನುತ್ತಿತ್ತು.

ಹೌದು ಸ್ನೇಹಿತರೇ, ಸಂದೇಹ ಎಂಬ ಕೀಡೆ ಒಮ್ಮೆ ನಮ್ಮನ್ನ ಹೊಕ್ಕರೆ ಅದರಿಂದಾಗುವ ಪರಿಣಾಮಗಳು ಹಲವು. ಪರಿಣಾಮಗಳ ಪರಿವು ಕೂಡ ನಮಗಿರುವುದಿಲ್ಲ. ಯಾವುದೇ ವಿಷಯವಿದ್ದರೂ ಸಂಬಂಧಪಟ್ಟ ವ್ಯಕ್ತಿಗಳೊಡನೆ ಚರ್ಚಿಸುವುದರಿಂದ ಅಪನಂಬಿಕೆಗಳಿಗೆ ಆಸ್ಪದ ಇಲ್ಲದಂತಾಗಬಹುದು. ಅಲ್ಲದೇ ಆರೋಗ್ಯಕರ ಚರ್ಚೆ, ಸಂಬಂಧಗಳು ಇನ್ನೂ ಬಲವಾಗಿ ಬೆಳೆಯಲು ಸಹಕಾರಿಯಾಗುತ್ತದೆ. ಕೆಲವು ಸಲ ನಮ್ಮ ಸಂತಸವನ್ನು ಕಾಣದೆ ಸುಗಂಧಳಂತೆ ನಿರ್ಮಲವಾಗಿರುವ ಸುಖೀ ಸಂಸಾರದಲ್ಲಿ ಹುಳಿ ಹಿಂಡುವ ಜನರು ಕೂಡ ಇರುತ್ತಾರೆ. ಆದ್ದರಿಂದ ಅಂತಹವರ ಮಾತು ಕೇಳಿ ಅನಾಹುತಗಳಿಗೆ ನಮ್ಮ ಜೀವನ ಆಹುತಿ ಆಗದಂತೆ ನಾವು ಎಚ್ಚರ ವಹಿಸುವ. ನಂಬಿಕೆ ಇದ್ದಲ್ಲಿ ಸಂತಸ, ಸಂತಸ ಇದ್ದಲ್ಲಿ ಜೀವನ, ಜೀವನ ಇದ್ದಲ್ಲಿ ಸಂಬಂಧ ಎಲ್ಲವೂ ಒಂದಕ್ಕೊಂದು ಸಂಬಂಧಿಸಿದವುಗಳು. ಎಲ್ಲವೂ ಸಸೂತ್ರವಾಗಿ ನಡೆದರೆ ಚೆನ್ನ ಇಲ್ಲದಿದ್ದರೆ ಜೀವನವೆಂಬ ಗಾಡಿ ಹಳಿ ತಪ್ಪುವುದು ಖಂಡಿತ.  ಅದಕ್ಕೆ ಅಲ್ಲವೇ ನಮ್ಮ ಹಿರಿಯರು ಹೇಳಿದ್ದು ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂದು.

ಇಂತಿ ನಿಮ್ಮ ಮನೆ ಮಗಳು

ರುಕ್ಮಿಣಿ ಎನ್.

ಇದೇ ಲೇಖನವನ್ನು ನೀವು ಪಂಜುವಿನಲ್ಲಿ ಕಾಣಲು ಕ್ಲಿಕ್ಕಿಸಿ: http://www.panjumagazine.com/?p=1343

ಮಳೆಯಲಿ…….

ಚಿತ್ರಕೃಪೆ: ಅಂತರ್ಜಾಲ

ಗಡಗಡ ಗುಡುಗುವ ಸದ್ದಿಲ್ಲ ಬಾನಿನಲಿ
ಫಳಫಳ ಮಿಂಚುವ ಸಂಚಿಲ್ಲ ಸನಿಹದಿ
ಜಿನುಜಿನುಗಿ ಜಿಯ್ಯಂಗೆ ಜಿನುಗುಡುತ ಸಣ್ಣಗೆ
ಚಿಟಪಟನೆ ಟಪಟಪಿಸುವ ಮಳೆ ಹನಿಗಳನಷ್ಟೆ ನಾ ಕಂಡೆ

ಕೆಂಪು ಹಂಚುಮನೆಯ ಸಣ್ಣ ಕಿಟಕಿಯಲಿ ಇಣುಕಲು
ಗೂಡು ತೊರೆದು ಕೂಳಿಗೆ ಕಾಳರಿಸಿ ನಡೆದು
ಮನೆ ಸೇರದೇ ಮಳೆಯಲಿ ಸಿಲುಕಿ ಚುಮುಚುಮು
ಚಳಿಗೆ ಮೈ ನಡುಕಿಸುತಿಹ ಮರಿ ಹಕ್ಕಿಯ ನಾ ಕಂಡೆ

index

ಅಂಗಳದಿ ಹರಿಯುತಿಹ ಜುಳುಜುಳು ನೀರಲಿ
ಹರಿಬಿಟ್ಟು ಕಾಗದದ ರಂಗುರಂಗಿನ ದೋಣಿಗಳನು
ಮಳೆಚಳಿಯ ಅರಿವಿರದೇ ಆಡುತಿಹ ಪುಟ್ಟ ಕಂದಮ್ಮಗಳ
ನಯನದಲಿ ವರುಷಗಳ ಹಿಂದಿನ ನನ್ನನೇ ನಾ ಕಂಡೆ.

donigalu

ರುಕ್ಮಿಣಿ ಎನ್.

ಬೊಂಬೆಗಳ ಮಾರಾಟ

ಬಣ್ಣದಿ ವದನಗಳ ಬಳಿದು
ಅಧರ ನಯನಗಳ ತಿದ್ದಿ ತೀಡಿ
ಅಂದದ ವಸ್ತ್ರಗಳ ತೊಡಿಸಿ
ಸಜೀವ ಬೊಂಬೆಗಳ ಸಜಿಸಿ
ಶೃಂಗರಿಸಿ ಬಿಕರಿಟ್ಟನು ವ್ಯಾಪಾರಿ

ಅಧಿಕ ಗ್ರಾಹಕರು ಇರುಳು ಕವಿಯಲು
ಕೊಡುತೆಗೆಯುವವರ ಕಣ್ಣಲಿ
ಸಂತಸದ ಹೊನಲು
ಬೊಂಬೆಗಳು ಬಿಕರಿಯಾಗಲು

ಎಳೆ ಇದ್ದಷ್ಟು ತರಕಾರಿ ಬೇಡಿಕೆ
ಭಾರಿ ಬೆಲೆಯು ದುಬಾರಿ
ಪಿಶಾಚಿಗಳ ದಾಹ ನೀಗಲು ಮುಗ್ಧ
ಹಸುಳೆಗಳ ನಿತ್ಯ ಮಾರಾಮಾರಿ

ಆಟ-ಪಾಠದ ಎಳೆ ವಯಸ್ಸು
ಬಾಲ್ಯ ಕಸಿದು ಸಿಗುವ ಒಂದಿಷ್ಟು
ಗರಿ ಗರಿ ನೋಟಿಗೆ ಬಾಯಿತೆರೆದು
ನಿತ್ಯ ಮಾರುವರು ಸಜೀವ ಬೊಂಬೆಗಳನು

ಬೊಂಬೆಗಳದು ವಿಧ ವಿಧದ ಆಟ
ಅಸಂಖ್ಯ ಜನರನು ರಂಜಿಸಲು
ಸುಸ್ತಾದರು ಹರಿದರು ನೆತ್ತರು
ಕೇಳುವವರು ಯಾರು ಇಲ್ಲ

ಕಣ್ಗೊಳ ತುಂಬಿ ಒಡೆದರೂ ಕಟ್ಟೆ
ಉಲಿಯ ಒಲ್ಲವವು ಅಸಹಾಯಕ ಬೊಂಬೆಗಳು
ಕಣ್ಣೀರು ಕೇಳುತಿವೆ ಬದುಕು ಇಷ್ಟು ಅಗ್ಗವೇ?
ಹೇಳುತಿವೆ ಮಕ್ಕಳನು ಕಾಪಾಡಿ
ಮಕ್ಕಳ ಮಾರಾಟ ನಿಲ್ಲಿಸಿ.

ರುಕ್ಮಿಣಿ ಎನ್.

ನಿನ್ನ ನನ್ನ ಅನುರಾಗ

ಇಳಿದಂತೆ ನಾನೀಗ ನಿನ್ನ ಕಣ್ಣಿನಾಳದಲ್ಲಿ
ಕಂಡೆನನುರಾಗ ಹೂತಿಟ್ಟ ಆ ನಿನ್ನ ಒಡಲಾಳದಲ್ಲಿ

ನನ್ನ ಅರಿತು ಅರಿಯದೇ ಇರುವ ಖಾಯಿಲೆ ನಿನಗೆ
ಬಯಸದೇ ಹೇಗಿರಲಿ ನಿನ್ನ ಆದತ್ ಇರುವಾಗ ನನಗೆ
ತೊರೆದು ನಾನಲ್ಲವೋ ಹುಡುಗ ದೂರ ನೀ ನಡೆದಿರುವೆ
ದೂರಿದ್ದರೂ ಉಸುರುತಿರು ಫೋನಲ್ಲಿ ಮರೆಯದೆ

ಮಾತಿನಲೆ ಚುಚ್ಚಿ ನೀಡಿದೆ ಬೆಟ್ಟದಷ್ಟು ತಕಲೀಫು ನಿನಗೆ
ನಗುತಲೆ ಇರುವೆ ಮನದಲಿ ಚಿಂತೆ ಇರಲು ನೂರು ಬಗೆ
ತುಟಿ ಬಿಡದೆ ಮೌನದಲೆ ಒಲವ ನೀ ಸಿಂಪಡಿಸುತಿರುವೆ
ಹಾಳೆಯಲೂ ಗೀಚದೆ ಪದಗಳ ಕಟ್ಟಿ ಹಾಡದೆ

ದೂರವಿರುವೆ ನನ್ನಿಂದ ನೂರೆಂಟು ಮಜಬೂರಿಗಳು ನಿನಗೆ
ತಿಳಿಯದೆ ಹಳಿಯುವೆನು ಸನಿಹ ನೀನಿರದ ಘಳಿಗೆಗೆ
ಸನ್ನೆಯಲೇ ಸಂಧಿಸುವೆ ಸನ್ನೆಯಲೇ ಮನವ ನೀ ತೆರೆದಿಡುವೆ
ಪೆದ್ದು ನಾನಿದ್ದೆ ಸನ್ನೆಯ ಗಂಧವನೆ ಅರಿಯದೆ

ಇಳಿದಂತೆ ನಾನೀಗ ನಿನ್ನ ಕಣ್ಣಿನಾಳದಲ್ಲಿ
ಕಂಡೆನನುರಾಗ ಹೂತಿಟ್ಟ ಆ ನಿನ್ನ ಒಡಲಾಳದಲ್ಲಿ

ರುಕ್ಮಿಣಿ ಎನ್.

ಕೆಲವೊಮ್ಮೆ ಲವ್ವೆನ್ನುವ ಹೆಸರಿನಲ್ಲಿ….

ಅವನ ವಯಸಿನ ಹುಚ್ಚು
ಅವಳ ಪ್ರೀತಿ ಪಡೆಯುವ
ಹುಚ್ಚಿಗಾಗಿ ಮತ್ತಷ್ಟು ಹೆಚ್ಚಾಯಿತು

ದಿಲ್ಲಿದೆ ಮನಸಿದೆ ಇದೆಲ್ಲ ತಗೋಳೆ
ಅಂತ ದೊಡ್ಡ ಮಜ್ನು ತರ ಲೈಲಾ
ಅವಳೆಂಬಂತೆ ಅವಳ ಹಿಂದೆ ಅಲೆದ

ವಯಸ್ಸಿನ ಅಮಲು ಅವಳಿಗೂ
ಏರಿತ್ತು ಲವ್ವೆನ್ನುವ ಥ್ರಿಲ್‌ನಲ್ಲಿ
ಮಜವಿತ್ತು ಕೂಡಿ ಕಳೆದ ದಿನಗಳಲ್ಲಿ

ಮುಗಿಯಿತು ಆ ಮಂಗನ ವಯಸು
ಕಂಡ ಕಂಡ ಪಾರ್ಕಲೆಯುವುದಕ್ಕೆ
ಒಂದಿನ ಬೀಗವೂ ಬಿದ್ದಾಯಿತು

ಹುಡುಗನಿಗೋ ಭವಿಷ್ಯದ ಚಿಂತೆ
ಹುಡುಗಿಗೆ ಇವನ ಕೈ ಹಿಡಿದು
ಗೃಹಿಣಿಯಾಗಿ ಬಾಳಬೇಕೆಂಬ ಚಿಂತೆ

ಇವರಪ್ಪಮ್ಮರಿಗೋ ತಮ್ಮದೇ ಜಾತಿಯ
ಹುಡುಗ-ಹುಡುಗಿಯನ್ನು ಹುಡುಕಿ
ಸಂಸಾರದ ನೊಗ ಹೊರಿಸುವ ತವಕ

ಇವರಿಬ್ಬರೂ ಆಡಿದ ಕೋತಿಗಳಾಟಕ್ಕೆ
ಅವಳಿಗಿಂದು ಮುಟ್ಟಾಗಲಿಲ್ಲ
ಈಗಿಬ್ಬರೂ ಭಯದಲಿ ವಿಲ ವಿಲ

ತಡಮಾಡದೇ ಓಡಿದರು ದವಾಖಾನೆಗೆ
ಅವಳಿಗೆ ಒಂದಿಷ್ಟು ದವಾ ತಿನಿಸಿ
ಉದರದಲಿ ಫಲಿಯಲಿರುವ ಜೀವ ಕರಗಿಸಲು

ಇವರಿಬ್ಬರೂ ಸೇರಿ ಅಮಾಯಕ ಜೀವ
ಅರಳುವ ಮುನ್ನವೇ ಹೊಸಕು ಹಾಕಿ
ಕೊಲೆಘಾತಕರೆನ್ನುವ ರಹಸ್ಯ ಹೂತಿಟ್ಟರು…

ಇದು ಲವ್ವಲ್ಲ ಶಿವ! ಪಾಪ!

ರುಕ್ಮಿಣಿ ಎನ್.

ನನ್ನ ಗೆಳೆಯ ಮುಂಬೈ

ಪರಿಚಯವಾದ ಮೊದಲ
ದಿನದಿಂದಲೇ ನನ್ನ ಮೇಲೆ
ಒಲವು ಶುರುವಾಯಿತು ನಿನಗೆ

ಒಂಟಿ ನಾನೆಂದು ನೆಲೆಸಲೊಂದು
ನಿನ್ನ ಹೃದಯದಿ ಜಾಗ ಕೊಟ್ಟೆ
ಕಣ್ಣ ರೆಪ್ಪೆಯಾಗಿ ನೀ ಕಾವಲಾದೆ

ನಿನ್ನ ಜನರನೆನಗೆ ಪರಿಚಯಿಸಿದೆ
ನನ್ನ ಒಂಟಿತನವ ನೀ ಮರೆಸಿದೆ
ನಿನ್ನ ಹೃದಯ ಸಿರಿಯ ಮೆರೆಸಿದೆ

ನನ್ನ ಭವಿಷ್ಯದ ಕಣ್ಣು ನೀನಾದೆ
ಕನಸು ಕಾಣುವುದನ್ನು ಹೇಳಿಕೊಟ್ಟೆ
ಆ ಕನಸುಗಳಿಗೆ ಸ್ಪೂರ್ತಿ ನೀನಾದೆ

ಮನಸಿಲ್ಲದ ಮನಸಿಗಾಗಿ ಅತ್ತು
ನಿದಿರೆಗೆಟ್ಟಾಗ ಹೃದಯ ತೊಟ್ಟಿಲಲಿ
ತೂಗಿ ಹಾಯಾಗಿ ನನ್ನ ಮಲಗಿಸಿದೆ

ಗೊತ್ತು ನಾನೆಂದರೆ ನಿನಗೆ ಪ್ರಾಣ
ಯಾವ ಷರತ್ತುಗಳಿಲ್ಲದೆ ನೀ ನನ್ನ
ಹುಚ್ಚನಂತೆ ಮೋಹಿಸುತಿರುವೆ

ನಿನ್ನನ್ನೆಂದಿಗೂ ನಾ ಪ್ರೀತಿಸಲಾರೆ
ನನ್ನವನ ಜಾಗದಲ್ಲಿ ನಿನ್ನ ನೋಡಲಾರೆ
ಮನಸಾರೆ ನನ್ನ ಕ್ಷಮಿಸುಬಿಡು ಗೆಳೆಯ

ಎರಡು ವರುಷಗಳಿಂದ ನನ್ನವನು
ನನಗಾಗಿ ಹಾತೊರೆದು ಕಾದಿಹೆನು
ಸೇರಬೇಕಿದೆ ಅವನ ಬಾಹುಭುಜಗಳನು

ಕಾಯಿಸಿ ಸತಾಯಿಸಿ ವಿರಹ ವೇದನೆ ನೀಡಿ
ಮನ ನೋಯಿಸಿದೆ ಈಗ ಹೋಗಲೇಬೇಕು
ಅವನಿಗೆ ನನ್ನ ಅವಶ್ಯಕತೆ ತುಂಬ ಇದೆ

ನೀ ನೀಡಿದ ಮಧುರ ಕ್ಷಣಗಳೆಲ್ಲವನ್ನೂ
ನಾ ಕಾದಿಡುವೆ ನಿನ್ನ ನೆನಪಿಗಾಗಿ
ಅಚ್ಚಳಿಯದ ನಮ್ಮ ಸ್ನೇಹದ ಕುರುಹಾಗಿ

ನನ್ನವರು ನನಗಾಗಿ ಕಾಯುತಿರುವರು
ಹೋಗಿ ಬರುವೆ ಗೆಳೆಯ ನಸೀಬಿದ್ದರೆ
ಮತ್ತೆ ಸಿಗೋಣ ಮಿಸ್ ಯೂ ಮುಂಬೈ

ಇಂತಿ ನಿನ್ನ ಕನ್ನಡ ಗೆಳತಿ
ರುಕ್ಮಿಣಿ ಎನ್.