Archive | ಏಪ್ರಿಲ್ 2013

ಕೆಲವೊಮ್ಮೆ ಲವ್ವೆನ್ನುವ ಹೆಸರಿನಲ್ಲಿ….

ಅವನ ವಯಸಿನ ಹುಚ್ಚು
ಅವಳ ಪ್ರೀತಿ ಪಡೆಯುವ
ಹುಚ್ಚಿಗಾಗಿ ಮತ್ತಷ್ಟು ಹೆಚ್ಚಾಯಿತು

ದಿಲ್ಲಿದೆ ಮನಸಿದೆ ಇದೆಲ್ಲ ತಗೋಳೆ
ಅಂತ ದೊಡ್ಡ ಮಜ್ನು ತರ ಲೈಲಾ
ಅವಳೆಂಬಂತೆ ಅವಳ ಹಿಂದೆ ಅಲೆದ

ವಯಸ್ಸಿನ ಅಮಲು ಅವಳಿಗೂ
ಏರಿತ್ತು ಲವ್ವೆನ್ನುವ ಥ್ರಿಲ್‌ನಲ್ಲಿ
ಮಜವಿತ್ತು ಕೂಡಿ ಕಳೆದ ದಿನಗಳಲ್ಲಿ

ಮುಗಿಯಿತು ಆ ಮಂಗನ ವಯಸು
ಕಂಡ ಕಂಡ ಪಾರ್ಕಲೆಯುವುದಕ್ಕೆ
ಒಂದಿನ ಬೀಗವೂ ಬಿದ್ದಾಯಿತು

ಹುಡುಗನಿಗೋ ಭವಿಷ್ಯದ ಚಿಂತೆ
ಹುಡುಗಿಗೆ ಇವನ ಕೈ ಹಿಡಿದು
ಗೃಹಿಣಿಯಾಗಿ ಬಾಳಬೇಕೆಂಬ ಚಿಂತೆ

ಇವರಪ್ಪಮ್ಮರಿಗೋ ತಮ್ಮದೇ ಜಾತಿಯ
ಹುಡುಗ-ಹುಡುಗಿಯನ್ನು ಹುಡುಕಿ
ಸಂಸಾರದ ನೊಗ ಹೊರಿಸುವ ತವಕ

ಇವರಿಬ್ಬರೂ ಆಡಿದ ಕೋತಿಗಳಾಟಕ್ಕೆ
ಅವಳಿಗಿಂದು ಮುಟ್ಟಾಗಲಿಲ್ಲ
ಈಗಿಬ್ಬರೂ ಭಯದಲಿ ವಿಲ ವಿಲ

ತಡಮಾಡದೇ ಓಡಿದರು ದವಾಖಾನೆಗೆ
ಅವಳಿಗೆ ಒಂದಿಷ್ಟು ದವಾ ತಿನಿಸಿ
ಉದರದಲಿ ಫಲಿಯಲಿರುವ ಜೀವ ಕರಗಿಸಲು

ಇವರಿಬ್ಬರೂ ಸೇರಿ ಅಮಾಯಕ ಜೀವ
ಅರಳುವ ಮುನ್ನವೇ ಹೊಸಕು ಹಾಕಿ
ಕೊಲೆಘಾತಕರೆನ್ನುವ ರಹಸ್ಯ ಹೂತಿಟ್ಟರು…

ಇದು ಲವ್ವಲ್ಲ ಶಿವ! ಪಾಪ!

ರುಕ್ಮಿಣಿ ಎನ್.

ನನ್ನ ಗೆಳೆಯ ಮುಂಬೈ

ಪರಿಚಯವಾದ ಮೊದಲ
ದಿನದಿಂದಲೇ ನನ್ನ ಮೇಲೆ
ಒಲವು ಶುರುವಾಯಿತು ನಿನಗೆ

ಒಂಟಿ ನಾನೆಂದು ನೆಲೆಸಲೊಂದು
ನಿನ್ನ ಹೃದಯದಿ ಜಾಗ ಕೊಟ್ಟೆ
ಕಣ್ಣ ರೆಪ್ಪೆಯಾಗಿ ನೀ ಕಾವಲಾದೆ

ನಿನ್ನ ಜನರನೆನಗೆ ಪರಿಚಯಿಸಿದೆ
ನನ್ನ ಒಂಟಿತನವ ನೀ ಮರೆಸಿದೆ
ನಿನ್ನ ಹೃದಯ ಸಿರಿಯ ಮೆರೆಸಿದೆ

ನನ್ನ ಭವಿಷ್ಯದ ಕಣ್ಣು ನೀನಾದೆ
ಕನಸು ಕಾಣುವುದನ್ನು ಹೇಳಿಕೊಟ್ಟೆ
ಆ ಕನಸುಗಳಿಗೆ ಸ್ಪೂರ್ತಿ ನೀನಾದೆ

ಮನಸಿಲ್ಲದ ಮನಸಿಗಾಗಿ ಅತ್ತು
ನಿದಿರೆಗೆಟ್ಟಾಗ ಹೃದಯ ತೊಟ್ಟಿಲಲಿ
ತೂಗಿ ಹಾಯಾಗಿ ನನ್ನ ಮಲಗಿಸಿದೆ

ಗೊತ್ತು ನಾನೆಂದರೆ ನಿನಗೆ ಪ್ರಾಣ
ಯಾವ ಷರತ್ತುಗಳಿಲ್ಲದೆ ನೀ ನನ್ನ
ಹುಚ್ಚನಂತೆ ಮೋಹಿಸುತಿರುವೆ

ನಿನ್ನನ್ನೆಂದಿಗೂ ನಾ ಪ್ರೀತಿಸಲಾರೆ
ನನ್ನವನ ಜಾಗದಲ್ಲಿ ನಿನ್ನ ನೋಡಲಾರೆ
ಮನಸಾರೆ ನನ್ನ ಕ್ಷಮಿಸುಬಿಡು ಗೆಳೆಯ

ಎರಡು ವರುಷಗಳಿಂದ ನನ್ನವನು
ನನಗಾಗಿ ಹಾತೊರೆದು ಕಾದಿಹೆನು
ಸೇರಬೇಕಿದೆ ಅವನ ಬಾಹುಭುಜಗಳನು

ಕಾಯಿಸಿ ಸತಾಯಿಸಿ ವಿರಹ ವೇದನೆ ನೀಡಿ
ಮನ ನೋಯಿಸಿದೆ ಈಗ ಹೋಗಲೇಬೇಕು
ಅವನಿಗೆ ನನ್ನ ಅವಶ್ಯಕತೆ ತುಂಬ ಇದೆ

ನೀ ನೀಡಿದ ಮಧುರ ಕ್ಷಣಗಳೆಲ್ಲವನ್ನೂ
ನಾ ಕಾದಿಡುವೆ ನಿನ್ನ ನೆನಪಿಗಾಗಿ
ಅಚ್ಚಳಿಯದ ನಮ್ಮ ಸ್ನೇಹದ ಕುರುಹಾಗಿ

ನನ್ನವರು ನನಗಾಗಿ ಕಾಯುತಿರುವರು
ಹೋಗಿ ಬರುವೆ ಗೆಳೆಯ ನಸೀಬಿದ್ದರೆ
ಮತ್ತೆ ಸಿಗೋಣ ಮಿಸ್ ಯೂ ಮುಂಬೈ

ಇಂತಿ ನಿನ್ನ ಕನ್ನಡ ಗೆಳತಿ
ರುಕ್ಮಿಣಿ ಎನ್.

ಹೃದಯ ವೀಣೆ

ಮಿಡಿದು ಬಂದ
ಒಲವನ್ನು ಧಿಕ್ಕರಿಸಿ
ಬೇಡೆಂದು ಬಿಸುಡಿ
ಮತ್ತೆ ಮಿಡಿಯದಂತೆ
ಹೃದಯ ವೀಣೆಯ
ತಂತಿಯನ್ನೇ ಕಿತ್ತೊಗೆದು
ಹೋದ ನೀನು ಈಗ
ಮತ್ತೊಮ್ಮೆ ಮಿಡಿಯೆಂದರೆ
ಎಲ್ಲಿಂದ ಮಿಡಿದೀತು
ಹೃದಯ ಗೆಳೆಯ..??

ರುಕ್ಮಿಣಿ ಎನ್.

ಎಲ್ಲೆಲ್ಲೂ ನೀನೆ

ಹೂದೋಟದಿ ಕುಳಿತ
ಅಜ್ಜನ ಮೊಗದಲ್ಲಿ
ನಿನ್ನ ನಗುವ ಕಂಡೆ

ಕೈಬಿಟ್ಟು ಆಡುತ್ತಿರುವ
ಮಗುವಿನ ವದನದಲಿ
ನಿನ್ನ ಮುಗ್ಧತೆಯ ಕಂಡೆ

ಸಂಜೆ ಅರಳಿದ
ಸಾವಿರ ಮಲ್ಲಿಗೆಯಲಿ
ನಿನ್ನ ಸುಗುಣವ ಕಂಡೆ

ಕೊನೆಗೆ, ಒಂಟಿಯಾಗಿ
ಕುಳಿತ ನನ್ನಲ್ಲಿ
ಗೆಳೆಯ, ನಿನ್ನನ್ನೇ ಕಂಡೆ!

ರುಕ್ಮಿಣಿ ಎನ್

ಸ(ಅಸ)ಹನೀಯ?

ಮಾತಿಲ್ಲ ಕಥೆಯಿಲ್ಲ ನಿನ್ನ ಕುಶಲದ
ಸುಳಿವೂ ಸಹ ಇಲ್ಲ
ಕೆಲಸದ ಭರದಲ್ಲಿದ್ದ ನಿನಗೆ
ನನ್ನೊಲವಿನ ಚೆಲ್ಲಾಟದಿಂದ
ಚೂರು ತಲೆಬಿಸಿ ಮಾಡಿದೆನೆಂಬ
ಒಂದೇ ಒಂದು ಸಣ್ಣ ತಪ್ಪಿಗೆ
ಮಾತೇ ಆಡದಿರುವಂತಹ
ದೊಡ್ಡ ಸಜೆಯೇಕೆ ಸಾಜನಾ
ನಾ ನಿನಗೆ ಅಸಹನೀಯವೆ?

ರುಕ್ಮಿಣಿ ಎನ್.

ಪಾಪಿ ಪ್ರೇಮಿ

ಎಂತಹ ಪಾಪ
ನೀ ಮಾಡಿ ಬಿಟ್ಟೆ
ಗೆಳೆಯ

ಹೇಳದೇ ಕೇಳದೇ
ಸೆಳೆದು ಬಿಟ್ಟೆಯಲ್ಲ
ಹೃದಯ

ನಿನ್ನ ನೆನಪುಗಳು
ಕದ್ದೊಯ್ಯುತ್ತಿವೆಯಲ್ಲ
ನಿದ್ರೆಯ

ನಿನ್ನ ಕಂಗಳು
ಘಾಸಿಗೊಳಿಸಿವೆಲ್ಲ ನನ್ನ
ಹರೆಯ

ನಿನ್ನ ನಗು ಇರಿದು
ತಿವಿದಿದೆಯಲ್ಲ ಹಿಡಿದೊಲವಿನ
ಕತ್ತಿಯ

ಎಂತಹ ಪಾಪ
ನೀ ಮಾಡಿ ಬಿಟ್ಟೆ
ಗೆಳೆಯ

ರುಕ್ಮಿಣಿ ಎನ್.

ಪ್ರೇಮ ಖೈದಿ

ಹೃದಯ ಕದ್ದೆಯೆಂಬ ಆಪಾದನೆಯ ಮೇರೆಗೆ
ಲವ್ ಪ್ರೊಸೀಜರ್ ಕೋಡ್ ೨೦೧೩
ಸೆಕ್ಷನ್ ೧೪೩ ಮೇರೆಗೆ
ವಾರಂಟ್ ಕೇಸ್ನಲ್ಲಿ ಕೊಗ್ನಿಜಿಬಲ್ ಒಫೆನ್ಸ್ ಎಂದು
ನಿನ್ನ ಅಪರಾಧವನ್ನು ಪರಿಗಣಿಸಿ
ಜೀವಾವಧಿ ಶಿಕ್ಷೆ ಕೊಡಲೆ ಗೆಳೆಯ..

ರುಕ್ಮಿಣಿ ಎನ್.