Archive | ಮಾರ್ಚ್ 2013

ರಂಗೇರಿಸಿ ಆಲಂಗಿಸುವಾಸೆ

ಉದರಲ್ಲಿ ನೀ ನನ್ನ ಒಂಭತ್ತು
ತಿಂಗಳು ಹೊತ್ತು ಹೆತ್ತು
ಬಣ್ಣದ ಜಗತ್ತಿಗೆ ತಂದೆ
ಬಿಳಿ ಹಾಳೆಯಂತಿದ್ದ ನನ್ನ
ನಿನ್ನ ನಿರ್ಮಲ ಕರಗಳಿಂದ
ಚಿತ್ರಿಸಿ ಅದಕ್ಕೊಂದರ್ಥ
ತುಂಬಿ ನಿನ್ನ ಬದುಕ ಸವೆದು
ಬದುಕಿಗೆನ್ನ ರಂಗು ನೀಡಿದೆ
ಅಮ್ಮ, ನಿನ್ನ ವದನವನನಿಂದು
ನಗುವುವಿನ ಬಣ್ಣದಿಂದೊಮ್ಮೆ
ರಂಗೇರಿಸಿ ಆಲಂಗಿಸುವಾಸೆ
ಕೈ ಚಾಚಿದ ನನ್ನ ಬಾಹುಗಳಿಗೆ..

ರುಕ್ಮಿಣಿ ಎನ್.

ಮನಸಿಲ್ಲದ ಮನಸಿಂದ (ಎರಡು ದೋಣಿಗಳ ಪಯಣ)

ಹೊರ ದೇಶಕ್ಕೆ 
ಹೋಗುತ್ತಿರುವ ಹುಡುಗಿ
ಮನದಲ್ಲೇ ಕಣ್ಣೀರಿಟ್ಟಳು
ಅವನಿಗಾಗಿ ಮರುಗಿ,
ಸ್ನೇಹಿತರೆಲ್ಲರೂ ಹಾಜರಿದ್ದರು 

ಬಿಳ್ಕೊಡಲು,
ಅವನಿಲ್ಲದ ನೆಪ ಬೇರೊಂದಿತ್ತು

ಅವಳು ಅಳಲು,
ನಕ್ಕರು ನಗಿಸಿದರು 

ಸ್ನೇಹಿತರೆಲ್ಲ ಹರಟೆಯಿತ್ತರು
ಅವಳ ಕಂಗಳಲ್ಲಿ ಮಾತ್ರ 

ಅವನ ಪ್ರೀತಿಯೇ ಎತ್ತರು,
ಇನ್ನೇನು ಲಗ್ಗೇಜ್ ಎಲ್ಲ 

ತೆಕ್ಕೊಂಡು ಹರಟೆ ಬಿಟ್ಟಳು
ದೂರದಲ್ಲಿ ಅವನ ಬರುವಿಕೆಯ 

ಕಂಡು ಮಂದಹಾಸವ ಬೀರಿದಳು,
ನೃತ್ಯದಲ್ಲಿ ಹೆಸರು ಗಳಿಸಬೇಕೆಂಬ 

ಆಸೆ ಹೊತ್ತು ಅವಳು
ಧರ್ಮ-ಪತ್ನಿಗೆ ಇನ್ನಾದರೂ 

ಧರ್ಮ ನೀಡುವೆನೆಂದು ಅವನು,
ಇಲ್ಲಿಗೆ ಅವರಿಬ್ಬರ ದಾರಿ 

ಬೇರೆಯೇ ಆಗಿತ್ತು
ಮುಂದೆ ಏನಾಗುವುದೋ? 

ವಿಧಿ-ಬರಹ ಯಾರಿಗೆ ಗೊತ್ತು??
 
– ರುಕ್ಮಿಣಿ ಎನ್.

ಜಾತಿ

ಜಾತಿ, ಜಾತಿ, ಜಾತಿ, ಜಾತಿ..
ಯಾಕೆ ದೇಶದಲ್ಲೆಲ್ಲ ಇದರದೇ ಗಂಭೀರ ಸ್ಥಿತಿ?
ಇರಬೇಕು ಗಂಡು-ಹೆಣ್ಣು ಒಂದೇ ಜಾತಿ
ಆಗ ಮದುವೆಗೆ ನೀಡುವರಿವರು ಅನುಮತಿ.

ಅನಾದಿಕಾಲದಿಂದಲೂ ಪಡೆದಿದೆ ಇದು ಮನ್ನಣೆ,
ಪ್ರೇಮಿಗಳಿಗೆ ಮಾತ್ರ ಇದು ತರುತಿದೆ ಹುಣ್ಣನೆ,
ತಲೆಮಾರಿನಿಂದ ಕೊಡುತ್ತ ಬರುತಿಹರು ಮೇಲು-ಕೀಳೆಂಬ ಪ್ರೇರಣೆ,
ಯಾಕಿಲ್ಲ ಎಲ್ಲರಲ್ಲಿಯೂ ನಾವೆಲ್ಲಾ ಒಂದೆಂಬ ಸದ್ಭಾವನೆ???

ರುಕ್ಮಿಣಿ ಎನ್

ಯಾರೇ ಆ ದೊರೆ

“ಯಾರಿಗಾಗಿ ಹೇಳೇ…………………………………
ಚಂದ್ರನನ್ನು ನಾಚಿಸುವಂತಿರುವ ನಿನ್ನ ಮುಗುಳು ನಗೆ,
ಆ ಬ್ರಹ್ಮನಿಗೂ ಹಾಕುವಂತಿದೆಯಲ್ಲೇ ಹೊಗೆ,
ಕಣ್ಣಂಚಲ್ಲೇ ಸಂದೇಶ ನೀಡುವ ಆ ನಿನ್ನ ಬಗೆ,
ಆ ನಿನ್ನ ಕಂಗಳ ಬಗೆಗೆ ನಾಚಿ ಕುಂತಲ್ಲೇ ಸೋಗೆ,
ಯಾರವ ಚೋರ, ಈ ನಾರಿ-ಮನಸ ಕದ್ದ ಪೋರ,
ಲೇ ಹುಡುಗಿ, ಇಂಪಾಗಿ ಅವನ ಹೆಸರೊಮ್ಮೆ ಕೂಗೆ.”
                                 – ರುಕ್ಮಿಣಿ ಎನ್.

ರವಿತೇಜ

 

ಬರುವೆ ನೀ ಇಳೆಗೆ ತಬ್ಬಿರುವ ಇಬ್ಬನಿ ಮುಸುಕಿನಲಿ,
ಕೋಟಿ-ಕಿರಣಗಳ ನೆರವಿಂದ ನನ್ನ ಆಲಂಗಿಸುವ ಆಸೆಯಲಿ,
ಪುಳಕಿತಗೊಂಡವು ನನ್ನ ಅಧರಗಳು ನಿನ್ನ ಸುಖ-ಸ್ಪರ್ಶದಲ್ಲಿ,
ಚುಂಬನದ ಮರುಕ್ಷಣವೇ ಕೆಂಪಾಗಿ ನೀ ಓಡಿದೆ ನಾಚಿಕೆಯ ನೆಪದಲಿ.

ಹಲುಬುವರು ಜನ ನಿನ್ನನ್ನು ಮೊಸಗರನೆಂದು,
ಉಷಾ, ಕಿರಣ, ಸಂಧೆಯರನ್ನ ಸಂಧಿಸುವೆ ನೀನೆಂದು,
ಹೇಗೆ ಮರೆಯಲಿ ಆ ಉಷೆಯಿಂದಲೇ ನನ್ನ ಉಗಮವೆಂದು,
ಮರುಳ ಜನ ಹೇಗರಿತಾರು ಅದು ನಮ್ಮಿಬ್ಬರ ಮಿಲನವೆಂದು.

ಹೇ ಭಾಸ್ಕರ! ನಾ ಅರಿಯೆ ನೀ ಅಂಬರದ ರಾಜ,
ಮರೆಯದಿರು ನಾ ನಿನಗಾಗಿಯೇ ಬಿರಿದ ಕೆಸರಿನ ಜಲಜ,
ನಿನ್ನ ಬರು-ಹೋಗುವಿಕೆಗಳೇ ಈ ಭಾನುಪ್ರೀಯೆಗೆ ಉಗಮ-ಅಸ್ತಮಾನಗಳು,
ಹೇಗೆ ಸಲ್ಲಿಸಲಿ ಆದಿತ್ಯ! ನನ್ನ ಕೋಟಿ-ಕೋಟಿ ನಮನಗಳು.

 ರುಕ್ಮಿಣಿ ಎನ್

ಬಂಧಿಯಾಗಿರಿಸು ಬಾ ನನ್ನ

ಒಮ್ಮೊಮ್ಮೆ ತಂಗಾಳಿಯಂತೆ ತಂಪನೆರೆವೆ
ಮರುಚಣದಲಿ ಬಿರುಗಾಳಿಯಂತೆ ಮತ್ತಷ್ಟು
ಮಗದಷ್ಟು ಬೆಂದ ಒಡಲ ಉರಿಸುವೆ
ಹೇಳದಷ್ಟು ದುರ್ಬಲೇ ನಾ ಭಾವನೆಗಳ ಹರಿಬಿಡಲು
ಮತ್ತಷ್ಟು ಏಕಾಂತಳು ನಾ ನೀ ಇಲ್ಲದ ಪ್ರತಿ ಕ್ಷಣಗಳು
ನನಗೆ ನೀನು ನಿನಗೆ ನಾನಿರುವಾಗ
ಜರೂರಿ ಏಕಾಗಿದೆ ಪರರ ಗೊಡವೆ?
ಮುಗ್ಧೆ ನಾನಿಲ್ಲಿ ಏನೊಂದೂ ಅರಿಯದಿರಲು
ಸರಿ ತಪ್ಪುಗಳ ವ್ಯತ್ಯಾಸ ತಿಳಿಯದಿರಲು,
ಹದ್ದಿನಂತೆ ಕಾಯುತಿದೆ ಮತ್ತೊಂದು ಭಾವ
ಚಿತ್ತ ಚಂಚಲಗೊಳುವಲಿ ನಿಂತಿದೆ ಮನದ ವೇಗ,
ಎಲ್ಲವೂ ಸುಸೂತ್ರದಂತೆ ಕಾಣುತಿದೆಯಲ್ಲ
ಕದಡಿ ಮಲೀನಗೊಂಡರು ಪ್ರಶಾಂತ ನದಿಯ ನೀರು,
ಮನದಮಂದಿರ ನೀನಿಲ್ಲದೇ ವಿಚಲಿತಗೊಳ್ಳುವುದು
ನನ್ನದಲ್ಲದಿರುವುದನ್ನ ವಿಪರೀತ ಬಯಸುವುದು,
ನೀನಿಲ್ಲದೇ, ನಿನ್ನ ಪ್ರೀತಿಯಿಲ್ಲದೇ ನಾ ಅಪೂರ್ಣಳು
ಚಂಚಲಗೊಂಡ ಮನಸನ್ನು ಅತ್ತಿತ್ತ ಹರಿಯದಂತೆ ನಿನ್ನ 
ಪ್ರೀತಿಯ ಭದ್ರಕೋಟೆಯಲ್ಲಿ ಬಂಧಿಯಾಗಿರಿಸು ಬಾ  ನನ್ನ..
 
ರುಕ್ಮಿಣಿ ಎನ್.