ಸ್ವೀಟ್ ಸಿಕ್ಸಟೀನ್..

ಯಾರನ್ನೂ ಕಣ್ಣೆತ್ತಿ ನೋಡದ ಹುಡುಗಿ ನಾನು. ಅದು ಹ್ಯಾಗ ಬಂದೆಯೊ ಹುಡುಗ ನನ್ನ ಕಣ್ಣೆದುರಿಗೆನೆ. ನಿನ್ನನ್ನ ನೋಡಿದ ಆ ಕ್ಷಣದಿಂದಲೇ ಹಿಡಿಗಾತ್ರದ ನನ್ನ ಹೃದಯವನ್ನೆಲ್ಲ ನೀನೆ ಆಕ್ರಮಿಸಿ ಬಿಡುವುದಾ? ಹ್ಮ.. ಆಗಿನಿಂದ ಶುರುವಾಯಿಗಿದ್ದು ಕಣೋ ನನಗೆ ಕುಂತ್ರು ನಿಂತ್ರು ನಿಂದೆ ಧ್ಯಾನ. ನಾನು ನೀನು ಒಂದೇ ಬಸ್ಸಿನಿಂದ ಕಾಲೇಜಿಗೆ ಹೋಗುತ್ತಿದ್ವಿ. ಉಸಿರುಗಟ್ಟಿಸುವಷ್ಟು ರಶ್ ಇರುವ ಬಸ್ಸಿಗೆ ನಾನು ಒಗ್ಗಿಕೊಳ್ಳಲೇ ಬೇಕಿತ್ತು. ಯಾಕೆ ಗೊತ್ತಾ? ನೀ ಅದೇ ಬಸ್ನಲ್ಲಿ ಅಲ್ವೆನೋ ಬರ್ತಿದ್ದು.. ನೀನಂತೂ ಯಾವಾಗಲೂ ಆ ಬಸ್ಸಿನ ಬಾಗಿಲಿಗೆ ಜೋತು ಬಿದ್ದು ಬರ್ತಾ ಇದ್ದೆ. ಒಂದೊಂದು ಸಾರಿ  ನಿನ್ನ ಆ ಸ್ಥಿತಿ ನೋಡಲು ನನಗೆ ಆಗ್ತಾನೆ ಇರ್ಲಿಲ್ಲ. ಅಷ್ಟೊಂದು ಭೀಡಿರುವ ಜನಗಳ ಗದ್ದಲದಲ್ಲಿ ನೀನು ಬಿದ್ದುಬಿಟ್ಟರೆ? ಅಂತ ಆಗಾಗ ಈ ಹೆಣ್ಣೆದೆ ಢವ ಢವ ಎಂದು ಜೋರಾಗಿ ಹೊಡೆದುಕೊಳ್ತ ಇತ್ತು. ಅದಕ್ಕೇನೇ ಕಣೋ ಯಾವಾಗಲೂ ಆ ನಿನ್ನ ಮುದ್ದಾದ ಮುಖ ಕಾಣುವಂತೆ ನಾನು ಕಿಟಕಿಗಳಿಗೆ ನೇರವಾಗಿ ನಿಲ್ಲುತ್ತಿದ್ದೆ. ಒಂದು ಕ್ಷಣ ಕೂಡ ನಿನ್ನನ್ನ ಕಾಣದೇ ಇದ್ರೆ  ಅದೆಷ್ಟು ತಳಮಳ ನನಗೆ.

ಕಾಲೇಜಿನಲ್ಲಿ ನಾನ್ ಯಾವಾಗಲೂ ಫಸ್ಟ್ ಬೆಂಚಿನಲ್ಲಿ ಕೂಡುತ್ತಿದ್ದೆ. ನೀನೋ.. ಲಾಸ್ಟ್ ಬೆಂಚರ್. ನಿನ್ನ ನೋಡಬೇಕು ಅಂತ ಅನ್ಸಿದಾಗಲೆಲ್ಲ ಅದೇನೇನೋ ನೆಪ ಹುಡುಕಿ ನಿನ್ನ ಕಡೆಗೆ ಬರುತ್ತಿದ್ದೆ. ಹೀಗೆ ಒಂದು ಸಾರಿ ನಿನ್ನ ನೋಡೋಕೆ ಅಂತಾನೆ ನೀನಿರುವ ಕಡೆ ಬಂದಾಗ ನಿನ್ನ ಕೈ ನನ್ನ ಕೈಗೆ ಅಚಾನಕಾಗಿ ತಾಕಿತ್ತು. ಆಗ ನನ್ನ ಎದೆಯಲ್ಲಿ ಮಿಂಚಿನ ವೇಗವೊಂದು ಸುಂಯೆಂದು ಹರಿದಿತ್ತು. ಎದೆಬಡಿತ ಪಕ್ಕದಲ್ಲಿರೋರಿಗೂ ಕೇಳಿಸಿರಬೇಕು ಅಷ್ಟು ಜೋರಾಗಿ ಹೊಡೆದುಕೊಳ್ತ ಇತ್ತು ಕಣೋ. ಕೆಲವೊಮ್ಮೆ ನಿನ್ನನ್ನೇ ಹುಡುಕುತ್ತಿದ್ದ ನನ್ನ ಕಣ್ಣುಗಳಿಗೆ ಆಗಾಗ ನಿನ್ನ ಕಣ್ಣುಗಳು ನೇರವಾಗಿ ಕೂಡುವಾಗ ಸಿಕ್ಕಹಾಕೊಂಡೇನಾ? ಥತ್ತೇರಿ… ಅಂತ ನಾಲಿಗೆ ಕಚ್ಚಿದವಳೇ ತಡ ನೋಡು ನನ್ನ ಕಣ್ಣೆವೆಗಳು ನೆಲ ನೋಡುತ್ತಿದ್ದವು. ನಿನಗಾಗ ಈ ಪ್ರೀತಿ ಪ್ರೇಮದ ಘಮಲು ಹಿಡಿದಿರಲೇ ಇಲ್ಲ ಬಿಡು. ನೀನು, ನಿನ್ನ ಗೆಳೆಯರು ನಿನ್ನ ಪ್ರಪಂಚವೇ ಬೇರೆ ಇತ್ತು. ನೀನು ನಿನ್ನದೇ ಆದ ಹುಡುಗರ ಗ್ಯಾಂಗನಲ್ಲಿ ಬಾದಶಹನಾಗಿ ಮೆರಿತಿದ್ದೆ.

ಒಂದು ಕ್ಲಾಸ್ ಮುಗೀತು ಅಂತ ಅಂದ್ರೆ ಸಾಕು, ಹೊರನಡೆದು ಗೆಳೆಯರೊಡನೆ ಬೊಬ್ಬೆ ಹೊಡೆಯುವ ಚಾಳಿ ನಿನಗೆ. ಆವಾಗೆಲ್ಲ ನನ್ನ ಮನಸಲ್ಲಿಯೇ ನಿನ್ನ ಅದೆಷ್ಟು ಹಳಿತಿರ್ಲಿಲ್ಲ ನಾನು. ಕಣ್ಣೆದುರು ನೀನು ಇಲ್ವಲ್ಲ ಅಂತ ಕೋಪ ಬರ್ತಿತ್ತು ಅಷ್ಟೇ. ಆ ಕೋಪ ನಿಂಗಷ್ಟೆ ಮೀಸಲು ಕಣೋ. ಹೋದರೇನು ಹುಡುಗ. ಆ ದೊಡ್ಡದಾದ ಕಿಟಕಿಯಲ್ಲಿ ನಿನ್ನ ತುಂಟತನ ಯಾವ ಕಷ್ಟವಿಲ್ಲದೆಯೂ ನನಗೆ ಕಾಣ ಸಿಗುತ್ತಿತ್ತು. ಅದೇನ್ ಹುಡುಗ್ರಪ್ಪ ನೀವು… ಅದೇನ್ ಮಾತಾಡ್ತಿದ್ರಿ ಅಷ್ಟೊಂದು? ಹೊಟ್ಟೆ ಹುಣ್ಣಾಗುವ ಹಾಗೆ ನಗ್ತಿದ್ರಲ್ಲ. ಕೆಲವು ಸಂಭಾಷಣೆಗಳನ್ನ ನಾನು ಕೂಡ  ಕೇಳಿಸ್ಕೊಂಡು ಅದೆಷ್ಟು ಬಾರಿ ಒಳಗೊಳಗೆ ಮುಸಿ ಮುಸಿ ನಕ್ಕಿಲ್ಲ.. ಅದಕ್ಕೆ ಲೆಕ್ಕನೇ ಇಲ್ಲ ಬಿಡು ಹುಡುಗ. 

ನಿನ್ನ ಮುಖ ನೋಡಿದಾಗಲೆಲ್ಲ ನನ್ನ ಹೂ ಮನಸು ಅರಳಿ ನಿಲ್ಲೋದು.. ನೀ ನಗುವಾಗಲೆಲ್ಲಾ ಆ ನಿನ್ನ ಹವಳದ ಕಣ್ಣುಗಳು ಇನ್ನಷ್ಟು ಹಿಗ್ಗಿ ನೀನು ಮತ್ತಷ್ಟು ಮುದ್ದಾಗಿ ಕಾಣುತ್ತಿದ್ದೆ. ಅದನ್ನ ನೋಡೋದೆ ನನ್ನ ಕಂಗಳಿಗೆ ಸೊಗಸು. ಎಲ್ಲೂ ಕಾಣದ ಬೆವರು, ನಿನ್ನ ಕುಡಿಮೀಸೆಗಳ ಮಧ್ಯವೇ ಸೂರ್ಯರಶ್ಮಿಗೆ ವಜ್ರದ ಹರಳಂತೆ ಫಳ ಫಳ ಹೊಳೆಯುತ್ತಿತ್ತು. ಜೊತೆಗೆ ನೀನು ನಗೋವಾಗಲೆಲ್ಲ ನಿನ್ನ ಎಡಗಲ್ಲದ  ಮೇಲೆ ಡಿಂಪಲ್ ಬೀಳೋದು. ಆಗೆಲ್ಲ ನನಗ್ ಅನಿಸೋದು. ನನ್ನ ಕಿರುಬೆರಳನ್ನು ನಿನ್ನ ಆ ಗಲ್ಲದ ಮೇಲೆ ಒಮ್ಮೆ ಹೊರಳಾಡಿಸಬೇಕು ಅಂತ. ಹುಡುಗ, ನಿನ್ನನ್ನು ನೋಡುವ ಪ್ರತಿ ಕ್ಷಣವೂ ಎಲ್ಲಿಲ್ಲದ ಪುಳಕ ನನ್ನಲ್ಲಿ. ಆಗೆಲ್ಲ ನಾನು ನಿನ್ನೊಟ್ಟಿಗೆ ಕಲ್ಪನಾ ಲೋಕಕ್ಕೆ ಜಾರಿದ್ದೂ ಇದೆ.

ದಿನ ೪ ಘಂಟೆಯವರೆಗೂ ಕ್ಲಾಸ್ ಇರೋದು. ನೀನ್ ಮಾತ್ರ ೨ ಘಂಟೆಯವರೆಗೂ ಮಾತ್ರ ಕ್ಲಾಸ್ ಅಟೆಂಡ್ ಮಾಡ್ತಿದ್ದೆ. ನೀನಿಲ್ಲದ ಉಳಿದೆರಡು ಕ್ಲಾಸ್ ಅಟೆಂಡ್ ಮಾಡೋಕೆ ನನಗೆ ಅದೆಷ್ಟ್ ಬೋರ್ ಹೊಡಿಯೋದು ಹುಡುಗ. ಮಧ್ಯಾಹ್ನ ಆದ್ರೆ ನನ್ನ ಮುಖ ಆಲ್‌ಮೋಸ್ಟ್ ಬಾಡಿಯೇ ಹೋಗೋದು. ಕೆಲವೊಮ್ಮೆ ಅಪ್ಪಿ ತಪ್ಪಿ ನೀನು ಕಾಲೇಜಿಗೆ ಬರದೇ ಇದ್ದಾಗ ನನಗೆ ಕ್ಲಾಸ್ ಎಲ್ಲ ಖಾಲಿ ಖಾಲಿ ಅನಿಸಿದ್ದೂ ಉಂಟು ಕಣೋ. ನೀನಿಲ್ಲದ ಆ ಒಂದು ದಿನ ನನಗೆ ವರುಷಗಳ ಅಂತರ ಅನಿಸ್ತಾ ಇತ್ತು. ನಿನ್ನನ್ನು ಇಷ್ಟೊಂದು ಹಚ್ಚಿಕೊಂಡೆನಾ ಅಂತ ಒಮ್ಮೊಮ್ಮೆ ನನಗೆ ಆಶ್ಚರ್ಯ ಅನಿಸೋದು.

ಈ ನನ್ನ ಬಟ್ಟಲು ಕಂಗಳ ತುಂಬ, ನೆನಪುಗಳ ತುಂಬ ಹಾಗೂ ನನ್ನ ಮನಸಿನ ತುಂಬಾ ನೀನೇ ಇದ್ದೆಯೊ ಹುಡುಗ. ಅದು ಯಾವಾಗ ನಿನ್ನ ಪ್ರೀತ್ಸೋಕೆ ಶುರು ಮಾಡಿದೆನೋ ನನ್ನ ಅರಿವಿಗೆ ಇಂದು ಬಂದಿಲ್ಲ. ಆದ್ರೆ ಆ ಎರಡು ವರುಷಗಳಿಂದ ನನ್ನ ದಿನಚರಿ ನಿನ್ನ ನೆನಪಿನಿಂದ ಶುರುವಾಗಿ ನಿನ್ನ ನೆನಪಿನಲ್ಲಿಯೇ ಕೊನೆಗೊಳ್ಳುತ್ತಿತ್ತು. ನನ್ನ ಉಸಿರಿಗೆ ನಿನ್ನ ಹೆಸರೇ ಬೆರೆತು ಹೋಯಿತು.

ಎರಡು ವರುಷ ಅದ್ ಹ್ಯಾಗ್ ಕಳೆಯಿತೋ ಅಂತ ಗೊತ್ತಾಗ್ಲೇ ಇಲ್ಲ ನೋಡು ಹುಡುಗ. ಈ ಎರಡು ವರುಷ ನನ್ನ ಉಸಿರೇ ನೀನಾಗಿದ್ದೆ. ಇನ್ನು ಮುಂದೆ ನೀನೆಲ್ಲೋ ನಾನೆಲ್ಲೋ..  ಇನ್ನು ನಿನ್ನ ನೋಡದೆ ಹೇಗಿರಲಿ ಅನ್ನೋ ಚಿಂತೆ ಕೂಡ ನನ್ನಲ್ಲಿ ಮನೆ ಮಾಡಿತ್ತು. ಮೊನ್ನೆ ನಿನ್ನ ಆಟೋಗ್ರಾಫ್ ಕೇಳಿದಾಗ ಅದ್ರಲ್ಲಿ ನಿನ್ನ ಸೆಲ್ ನಂಬರ್ ಮೆನಷನ್ ಮಾಡಿದ್ದೀಯ. ಥ್ಯಾಂಕ್ಸ್ ಕಣೋ ಹುಡುಗ. ಅಟ್ ಲೀಸ್ಟ್ ಆಗಾಗ ಕಾಲ್ ಮಾಡಿ ನಿನ್ನ ಧ್ವನಿ ಕೇಳುವ ಭಾಗ್ಯವಾದರೂ ನನಗೆ ದೊರಕಿತಲ್ಲ ಅನ್ನೋ ಖುಸಿ ನನಗೆ. ಐ ಆಡ್‌ಮೈರ್ ಯೂ ಅಂತ ಇದ್ದಲ್ಲಿ ಐ ಲೈಕ್ ಯುವರ್ ನೇಚರ್ ಬಿಕಾಸ್ ಯೂ ಆರ್ ಸೊ ಸ್ವೀಟ್ ಅಂಡ್ ಕ್ಯೂಟ್ ಅಂತ ನೀನು ಬರೆದಿದ್ದೆ. ಅದನ್ನ ನೋಡಿ ನನಗೆ ಎಲ್ಲಿಲ್ಲದ ಸಂಭ್ರಮ. ಇಡೀ ದಿನ ಜಂಪ್ ಮಾಡಿ ಕುಣಿದು ಕುಪ್ಪಳಿಸಿದೆ ಕಣೋ.

ಪಾಪ! ನಿನಗೆ ನನ್ನ ಪ್ರೀತಿಯ ಬಗ್ಗೆ ಒಂಚೂರು ಕೂಡ ಅರಿವಿಲ್ಲ. ನಿನಗೆ ಗೊತ್ತಿಲ್ಲದೆಯೇ  ನೀ ನನ್ನ ಅದೆಷ್ಟು ಖುಷಿಯಾಗಿ ಇಡುತ್ತಿದ್ದೆ. ಎರಡು ವರುಷಗಳ ಆ ಪ್ರತಿ ಘಳಿಗೆಗಳು ನನ್ನಲ್ಲಿ ಸುರಿಸಿದ ಒಲವ ಮಳೆ ಅಷ್ಟಿಷ್ಟಲ್ಲ ಹುಡುಗ. ಆ ಒಲವ ಮಳೆಯಲಿ ನಾ ದಿನ ಮಿಂದುಹೋದವಳು  ಕಣೋ. ಗುಪ್ತವಾಗಿ ಪ್ರಾಣದಂತೆ ನಿನ್ನನ್ನು ಪ್ರೀತಿಸಿದ ನಾನು ಅದೇಕೋ ನನ್ನ ಪ್ರೀತಿಯನ್ನು ಹೇಳಿಕೊಳ್ಳಲು ಹಿಂಜರಿದು ಬಿಟ್ಟೆ. ಒಂದು ವೇಳೆ ನಿನಗೆ ನನ್ನ ಮೇಲೆ ಪ್ರೀತಿ ಇರದೆ ಹೋದರೆ? ಆ ಆತಂಕ ಬೇಡವೆಂದು. ಹೇಳಿಕೊಳ್ಳದಿದ್ದರೇನು ಹುಡುಗ, ನಿನ್ನ ಪ್ರೀತಿ ಯಾವತ್ತೂ ಹಸಿರು ಈ ನನ್ನ ಮನದಲಿ.

 

ರುಕ್ಮಿಣಿ ನಾಗಣ್ಣವರ

Advertisements

ನೆನಪಿನ ದೋಣಿಯಲಿ (೨)

ಬೇಕಿರುವುದನ್ನು
ನೆನಪಿಡದೆ
ಬೇಡದಿರುವುದನ್ನೇ
ನೆನಪಿಡುತ್ತೇನೆಂದು
ಮನಸಿನ ಜೊತೆ
ಸೆಣಸಾಡುವುದಲ್ಲ
ಈ ಅಧಿಕಪ್ರಸಂಗಿ
ಮೆದುಳು…

ರುಕ್ಮಿಣಿ ಎನ್

ಮನಸ್ಸು ಒಂಟಿಯಾಗಿ (೩)

ಮುಗ್ಧ ಮನಸ್ಸಿಗೆ
ಕೆಲವು ಸತ್ಯಗಳು
ಗೊತ್ತಿದ್ದರೂ
ಸತ್ಯದ ಕಠೋರತೆಯನ್ನು
ಸ್ವೀಕರಿಸಲು
ನಿರಾಕರಿಸಿ
ತನ್ನಲ್ಲೇ ತಾನು
ತೊಳಲಾಡುತ್ತದೆ…

ರುಕ್ಮಿಣಿ ಎನ್.

ಭಾವಚಿತ್ರ (೨)

Bhavachitra

ಮಾರುದ್ದ ಈ ಜೀವನ
ಗುರಿಯ ದಾರಿ ಹಿಡಿದು
ನಡೆಯುತಿರುವೆ ನಾ ಒಂಟಿಯಾಗಿ
ನನ್ನ ಬಾಳ ಭಾರ ಹೊತ್ತು
ನಡೆಯುತಲಿರುವೆ
ಕನಸಿನ ಮಂಜಿಲು
ಇಲ್ಲೆಲ್ಲೋ ಇರುವಂತೆ
ನಡೆದಷ್ಟು ದೂರವೇ ಓಡುತಿದೆ
ಓಡಲಿ
ಛಲ ಬಿಡದ ಹೆಣ್ಣು ನಾನು
ಕಷ್ಟ ಸಂಕಟಗಳ ಮೆಟ್ಟುತ
ನಡೆಯುತಲೇ ಇರುವೆ
ನನ್ನ ಗುರಿ ಮುಟ್ಟುವ ತನಕ

ರುಕ್ಮಿಣಿ ಎನ್.

 

ಚಿತ್ರಕೃಪೆ: ಅಂತರ್ಜಾಲ

ಭಾವಚಿತ್ರ (೧)

374316_555444724501050_1972961305_n

ಕಾರ್ಮೋಡ ಕವಿದ ಆ
ಆಗಸದತ್ತ ದೃಷ್ಟಿ ನೆಟ್ಟು
ತೊರೆದೆನ್ನ ಹೊರಟು
ಹೋದೆಯಲ್ಲೆನುತ
ತನ್ನೆರಡೂ ಕೈಗಳನ್ನು
ಚಾಚಿ ಬಿಕ್ಕಿ ಬಿಕ್ಕಿ
ಅವಳು ಅಳುತಿರಲು
ಆ ಮೋಡಗಳೆದೆಯನ್ನು
ಸೀಳುತ ಬಂದನು ಹುಡುಗ
ತನ್ನವಳ ಕಣ್ಣೊರೆಸಲು…

ರುಕ್ಮಿಣಿ ಎನ್.

ಚಿತ್ರಕೃಪೆ: ಅಂತರ್ಜಾಲ

ಜೇನ ಹನಿ

೧. ಕನಸು

ನಿದಿರೆಗಷ್ಟೇ ಸೀಮಿತವಾಗದಿರು
ಓ ನನ್ನ ಕನಸೆ
ನಿನಗಾಗಿ ಇಡೀ ಬದುಕೇ
ಹಾತೊರೆಯುತ್ತಿರುವಾಗ.

೨. ನೆಪ

ಮಳೆ ಚಳಿಗಳ ನೆಪಗಳೇ ಸಾಕು
ಹಾಳಾದ ನೆಗಡಿಗೆ
ನನ್ನ ಅರಸಿ ಆಲಂಗಿಸಲು.

೩. ಮೀನು

ಅವನ ವಾರೆನೋಟದ ಬಲೆಗೆ
ಸಿಲುಕಿಬಿದ್ದ ಅವಳೀಗ ವಿಲವಿಲನೆ
ಹೊರಳಾಡುತಿರುವ ಮೀನು.

೪. ಹನಿ ಹನಿ

ಜೊತೆ ನೀನಿರದ ನನ್ನ
ಮನದ ತುಮುಲಗಳೇ ಇಂದು
ಹನಿ ಹನಿಯಾಗಿ ಜಿನುಗುತಿವೆ ಗೆಳೆಯ.

ರುಕ್ಮಿಣಿ ಎನ್.

ನನ್ನ ಮನಸೆಂಬ ಆಗಸದಲ್ಲಿ

ಇಹುದೊಂದು ಆಗಸ ನನ್ನ ಮನದಲೂ
ಬದಲಿಸುವುದದು ಬಣ್ಣಗಳ ಪ್ರತಿ ದಿನವೂ

ಕೆಲವೊಮ್ಮೆ ದುಃಖದ ಮೋಡಗಳು ಹನಿ ಹನಿಯಾಗಿ ಭುವಿಗಿಳಿದರೆ
ಮತ್ತೆ ಕೆಲವೊಮ್ಮೆ ಸಂತಸದ ತಾರೆಗಳು ಜಗಮಗಿಸುವವು

ಕೆಲವೊಮ್ಮೆ ದೂರ ದೂರದಿ ಬರಡು ಭಾವನೆಗಳು ಹರಡಿದರೆ
ಮತ್ತೆ ಕೆಲವೊಮ್ಮೆ ಎಲ್ಲ ದಿಶೆಯಿಂದ ಭರವಸೆಗಳು ಅಚ್ಚು ಹಾಕುವವು

ಕೆಲವೊಮ್ಮೆ ಬಯಕೆಗಳ ಹಕ್ಕಿ ಗರಿ ಬಿಚ್ಚಿ ಸ್ವಚ್ಚಂದವಾಗಿ ಹಾರಿದರೆ
ಮತ್ತೆ ಕೆಲವೊಮ್ಮೆ ಎಲ್ಲದರಲೂ ಆಕಾಸ್ಮಿಕಗಳ ಸೂತಕ ಆವರಿಸುವವು

ಕೆಲವೊಮ್ಮೆ ತಿಂಗಳ ಚಂದ್ರನು ಹಾಲಬೆಳದಿಂಗಳಲಿ ನಗೆಯಾಡಿದರೆ
ಮತ್ತೆ ಕೆಲವೊಮ್ಮೆ ಅಮವಾಸ್ಯೆಯ ಇರುಳುಗಳು ಕಪ್ಪುಕೊಡೆ ಹಿಡಿಯುವವು

ಕೆಲವೊಮ್ಮೆ ಕಾಮನಬಿಲ್ಲಿನ ಸಪ್ತ ರಂಗುಗಳು ಸಂಗೀತ ನುಡಿಸಿದರೆ
ಮತ್ತೆ ಕೆಲವೊಮ್ಮೆ ಸ್ವರ ತಾಳ ಲಯಗಳೆಲ್ಲ ಮೌನರಾಗ ಹಾಡುವವು

ಕೆಲವೊಮ್ಮೆ ಸಂಜೆಯ ಸಿಹಿ ತಂಗಾಳಿ ಹಿತವಾಗಿ ಸೂಸಿದರೆ
ಮತ್ತೆ ಕೆಲವೊಮ್ಮೆ ಗುಡುಗು ಮಿಂಚುಗಳ ಭಯದ ಕಥೆ ಹೇಳುವವು

ಕೆಲವೊಮ್ಮೆ ಮುಂಜಾನೆಯ ಹೂವುಗಳಂತೆ ಅರಳಿ ನಲಿದರೆ
ಮತ್ತೆ ಕೆಲವೊಮ್ಮೆ ಮುಸ್ಸಂಜೆಯ ಇರುಳ ಸಂಗಡ ಮುದುಡುವವು

ಇಹುದೊಂದು ಆಗಸ ನನ್ನ ಮನದಲೂ
ಬದಲಿಸುವುದದು ಬಣ್ಣಗಳ ಪ್ರತಿ ದಿನವೂ…

ರುಕ್ಮಿಣಿ ಎನ್.

ಪ್ರೇರಣೆ: ಹಿಂದಿ ಕವಿತೆ