ಸಂಗ್ರಹಗಳು

ಪಶ್ಚಾತಾಪ ಮತ್ತು ಕ್ಷಮೆ

ಯಾರಾದರೂ ನಮಗೆ ಕೆಡುಕನ್ನು ಮಾಡಿದಲ್ಲಿ ಅಥವಾ ತಪ್ಪು ರೀತಿಯಲ್ಲಿ ನಮ್ಮೊಂದಿಗೆ ವರ್ತಿಸಿದಲ್ಲಿ, ನಾವವರನ್ನು ಕ್ಷಮಿಸುವುದರಲ್ಲಿ ಒಳಿತಿದೆ. ಕಹಿ ಘಟನೆಯ ಕುರಿತು ಇಲ್ಲವೇ ಕೆಡುಕು ಬಯಸಿದ ವ್ಯಕ್ತಿಯ ಕುರಿತು ಪದೇ ಪದೇ ಯೋಚಿಸಿದರೆ ಸೇಡಿಗೆ ಸೇಡು ತೀರಿಸಿಕೊಳ್ಳಬೇಕೆಂಬ ಪ್ರತಿಕಾರದ ಮನೋಭಾವ ನಮ್ಮಲ್ಲಿ ಹುಟ್ಟುತ್ತದೆ. ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುತ್ತದೆ, ನಮ್ಮ ಸುತ್ತೆಲ್ಲ ಸಂತಸದ ಹೊನಲಿದ್ದರೂ ಅದನ್ನು ನಾವು ಗುರುತಿಸುವುದೇ ಇಲ್ಲ. ಇದಕ್ಕೆಲ್ಲ ಒಂದೇ ಪರಿಹಾರ ಸ್ನೇಹಿತರೆ, ತಪ್ಪು ಮಾಡಿದವರ ಎದುರಲ್ಲಿಯೇ ಕುಳಿತು ಮಾತನಾಡಿ. “ನೀನೆಷ್ಟೇ ತಪ್ಪು ಮಾಡಿದರೂ, ನನಗೆ ಕೆಡುಕು ಬಯಸಿದರೂ, ನಾನು ನಿನ್ನನ್ನು ಕ್ಷಮಿಸಿರುವೆ” ಎಂದು ಮನದಲ್ಲಿ ಅಂದುಕೊಂಡು ಅವರತ್ತ ಹೂವಿನ ನಗೆಯನ್ನು ಬೀರಿ. ಹೀಗೆ ಮಾಡಿದಲ್ಲಿ ಸಂತಸ, ಸಮಾಧಾನ, ಶಾಂತಿ, ನೆಮ್ಮದಿ ಎಲ್ಲಿದ್ದರೂ ನಿಮ್ಮ ಜೋಳಿಗೆಯಲ್ಲಿ ಬಂದು ಬೀಳುತ್ತವೆ. ತಿಳಿದೋ ತಿಳಿಯದೆನೋ ಮಾಡಿದ ತಪ್ಪನ್ನು ಕ್ಷಮಿಸುವುದರಿಂದ ಕೆಡುಕು ಬಯಸುವವರು ಕೂಡ ಮನ ಪರಿವರ್ತನೆ ಹೊಂದಬಹುದು. ದ್ವೇಷ, ರೋಷ, ಕ್ಲೇಷ ಇವುಗಳಿಂದ ವೈರತ್ವ ಬೆಳೆಯುವುದೇ ಹೊರತು ಪ್ರೀತಿ ನೆಲೆಸಲಾರದು. ಅಲ್ಲದೇ, ಯಾರಲ್ಲಿಯೂ ಶಾಂತಿ ಉಳಿಯುದಿಲ್ಲ. ಉದಾಹರಣೆಗೆ ನಾನೊಂದು ನೈಜ ಘಟನೆಯನ್ನು ತಮ್ಮ ಮುಂದಿಡಲು ಇಷ್ಟ ಪಡುತ್ತೇನೆ.
ಮುಂಬೈ ಎಂಬ ಬೃಹತ್ ಮಾಯಾನಗರಿಯ ಅಂಜನಾ ಎನ್ನುವ ಹುಡುಗಿ, ಚಿಕ್ಕ ವಯಸ್ಸಿನಲ್ಲಿಯೇ ತಾಯಿಯ ಕಿರುಕುಳಕ್ಕೆ ಒಳಗಾಗಿದ್ದಳು. ಆಂಜನಾ ಕಾಲೇಜಿನಿಂದ ಬರುವುದು ೫ ನಿಮಿಷ ತಡವಾದರೂ; ಅವಳೆಲ್ಲೋ ಯಾರೊಬ್ಬ ಹುಡುಗನ ಜೊತೆ ಲಲ್ಲೆ ಹೊಡೆಯುತ್ತಿದ್ದಳು ಎಂಬಂತೆ ಕೆಂಗಣ್ಣಿನಿಂದ ನೋಡುತ್ತ ಬಾಯಿಗೆ ಬಂದಂತೆ ಬೈದು, ಬಡಿದು, ಕೊರೆವ ಮಳೆ-ಚಳಿಯನ್ನು ಲೆಕ್ಕಿಸದೆ ಬೆಳೆಯುತ್ತಿರುವ ಹೆಣ್ಣು ಮಗುವನ್ನು ಬಾಗಿಲು ಹೊರಗಡೆಯೇ ನಿಲ್ಲಿಸಿ ದಢಾರ್ ಎಂದು ಮುಚ್ಚಿದ ಬಾಗಿಲು ರಾತ್ರಿ ೧೨ರವರೆಗೂ ಮುಚ್ಚಿಯೇ ಇರುತ್ತಿತ್ತು. ಮುಗ್ಧ ಆಂಜನಾಳ ಆರ್ತನಾದ ನೆರೆಮನೆಯವರ ಮನ ತಲುಪಿತೆ ವಿನಃ ಹೆತ್ತ ತಾಯಿಗಲ್ಲ. ಅತೀವ ಸುಂದರವಿದ್ದ ಆಂಜನಾ ಕೊಂಚ ಶೃಂಗಾರ ಮಾಡಿಕೊಂಡರೂ ಅವಳ ತಾಯಿ ಅಸಹನೆಯಿಂದ, “ಯಾರೊಡನೆ ಮೆರೆಯಲು ಹೊರಟಿರುವೆ”, ಎಂದು ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದಳು.

ಇತ್ತ ಮನೆಯಲ್ಲಿ ಅಮ್ಮನ ಮಮತೆ ಪ್ರೀತಿಯನ್ನ ಕಾಣದಿರುವ ಅಂಜನಾ, ಹೊರಗಿನ ಜನರಿಂದ ಸಹಜವಾಗಿಯೇ ಆ ನಿರೀಕ್ಷೆಯಲ್ಲಿ ಇದ್ದಳು, ಹೀಗೆಯೇ ಪ್ರೀತಿಯ ಅರಸುತ್ತ, ತಾಯಿಯ ಹಿಂಸೆಯಲ್ಲಿ ಬಿದ್ದು ಒದ್ದಾಡುತ್ತಿರುವ ಅಂಜನಾ ಹುಡುಗನೊಬ್ಬನ ಪ್ರೇಮ ಬಂಧನದಲ್ಲಿ ಸೆರೆಯಾದಳು. ತಾಯಿಯ ಚಿತ್ರಹಿಂಸೆಯಿಂದ ಬೇಸತ್ತ ಅಂಜನಾ ಮನೆ ತೊರೆಯಲು ತುದಿಗಾಲಲ್ಲೇ ಇದ್ದಳು. ಮನಸನ್ನು ಕನ್ನಡಿಯಂತೆ ಅರಿವ ಹುಡುಗ ಸುಂದರ, ಸುಶೀಲ ಹಾಗೂ ಆಗರ್ಭ ಕುಟುಂಬದವನಾಗಿದ್ದ. ತಡಮಾಡದೆ, ಮಿಡಿದ ಮನಗಳೆರಡೂ ಸಪ್ತಪದಿಯನ್ನು ತುಳಿದು ಮಿಲನ ಮಹೋತ್ಸವಕ್ಕೆ ನಾಂದಿ ಹಾಡಿದವು. ಅಂಜನಾ ಹೊಸದೊಂದು ಪ್ರಪಂಚಕ್ಕೆ ಕಾಲಿಟ್ಟಿದ್ದಳು. ಮದುವೆಯಾಗಿ ತವರು ಮನೆ ತೊರೆದ ಅಂಜನಾ ೩ ವರುಷದವರೆಗೂ ಆ ಕಡೆ ತಲೆ ಕೂಡ ಹಾಕಲಿಲ್ಲ. ಮುತ್ತಿನಂತ ಗಂಡ, ಮುದ್ದಾದ ಗಂಡು ಮಗು, ದೇವರಂತ ಅತ್ತೆ-ಮಾವ ಸಿಕ್ಕಿದ್ದು ಆಕೆಯ ಪಾಲಿಗೆ ಸ್ವರ್ಗವೇ ಈ ಪ್ರೀತಿಯ ಹೊನ್ನರಸಿಯನ್ನ ಅರಸಿ ಬಂದಂತಿತ್ತು.

ಬೇಕು-ಬೇಡಗಳ, ಇಷ್ಟ-ಕಷ್ಟಗಳ ಅರಿತು ನಡೆಯುವ ಗಂಡನ ಪ್ರೀತಿಯ ಮಹಲಿನಲ್ಲಿದ್ದರೂ ಅಂಜನಾಳ ಮುಖದಲ್ಲಿ ಮಾತ್ರ ನಗುವೊಂದಿರಲಿಲ್ಲ. ಅವಳು ಮನಸ್ಸು ಅದೇನನ್ನೂ ಗಾಢವಾಗಿ ಚಿಂತಿಸುತ್ತಲೇ ಇರುತ್ತಿತ್ತು. ಕಾರಣವಿಲ್ಲದೇ ತನ್ನ ಹೆತ್ತ ತಾಯಿ ತನ್ನನ್ನು ಏಕೆ ಹಿಂಸೆಗೆ ಒಳಪಡಿಸುತ್ತಿದ್ದಳು? ಆ ಕೆಂಗಣ್ಣಿಗೆ ಅದೇನು ಕಾರಣ? ಎಂದು ತನ್ನಲ್ಲಿಯೇ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಳು. ಮಾನಸಿಕವಾಗಿ, ದೈಹಿಕವಾಗಿಯೂ ಶೋಷಣೆಗೆ ಒಳಗಾದ ಅಂಜನಾಳ ಮನದಲ್ಲಿ ದ್ವೇಷದ ಜ್ವಾಲೆ ದಿನೇ ದಿನೇ ಹೆಚ್ಚುತ್ತಲೇ ಹೋಯಿತು. ಮನದ ನೆಮ್ಮದಿಯನ್ನೇ ಕಳೆದುಕೊಂಡು ಆ ನೋವಿನಲ್ಲಿ ಬಿದ್ದು ಒದ್ದಾಡುತಿರುವ ಸದ್ದು ಬಹುಶ ಯಾರಿಗೂ ಕೇಳದೇ ಹೋಯಿತೇನೋ. ಅಸಮಾಧಾನ ಅವಳ ಮನದ ಸ್ವಾಸ್ಥ್ಯವನ್ನು, ನೆಮ್ಮದಿಯನ್ನು ಕಸಿದು ಹಗಲಿರುಳು ತಾಯಿಯ ಉಗ್ರ ಕೋಪದ ಮುಖವನ್ನೇ ಅವಳ ಕಣ್ಣ ಮುಂದೆ ತಂದಿಟ್ಟು ಅವಳನ್ನು ಪ್ರತಿ ಕ್ಷಣ ಕೊಲ್ಲುತ್ತಲಿತ್ತು. ಈ ಸ್ಥಿತಿ, ನರಕ ಯಾತನೆಗೆ ಕಾರಣಳಾದ ಅಮ್ಮನನ್ನು ಜೀವಮಾನದಲ್ಲಿ ಕ್ಷಮಿಸುವುದಿಲ್ಲ, ಅಲ್ಲದೇ ಆಕೆ ಸತ್ತರೇ ಮುಖ ಕೂಡ ನೋಡುವುದೇ ಇಲ್ಲ ಎಂಬ ಮಟ್ಟಿಗೆ ಅಂಜನಾಳನ್ನು ತಂದಿತ್ತು.

ಜೀವನದುದ್ದಕ್ಕೂ ನೆಮ್ಮದಿ, ಶಾಂತಿಯನ್ನು ಹುಡುಕುವುದೇ ಅವಳ ಕಾಯಕವಾಗಿ ಬಿಟ್ಟಿತ್ತು. ಬಲ್ಲವರೊಡನೆ ಆ ಬಗ್ಗೆ ಚರ್ಚಿಸಿ ಸಲಹೆ ಪಡೆಯ ಹೋಗಿ, ಮನಶಾಸ್ತ್ರಜ್ಞೆಯೊಬ್ಬಳ ಸಲಹೆ ಮೇರೆಗೆ, ತಾಯಿಯನ್ನು ಕಂಡು, “ಅಮ್ಮ, ನೀನೆಷ್ಟು ತಪ್ಪು ಮಾಡಿದ್ದರೂ ನಾನದೆಲ್ಲವನ್ನೂ ಮನ್ನಿಸಿ ಬಿಡುತ್ತೇನೆ” ಎಂದು ಹೇಳಲು ೪ ವರುಷಗಳ ನಂತರ ತವರು ಮನೆಗೆ ಹೊರಟಳು. ಮನೆಗೆ ಹೋಗಿ ಅಮ್ಮನ ಕೋಣೆಗೆ ಕಾಲಿಡುತ್ತಿದ್ದಂತೆ ಅಂಜನಾಳ ಅಮ್ಮನ ಕಣ್ಣಲ್ಲಿ ಕಣ್ಣೀರ ಕೋಡಿ ಹರಿಯುತ್ತಿತ್ತು. ಮನೆಗೆ ಬಂದ ಮಗಳನ್ನು ತನ್ನೆರಡೂ ಬಾಹುಗಳನ್ನು ವಿಶಾಲವಾಗಿ ಚಾಚುತ್ತ, ಮಗಳನ್ನು ತಬ್ಬಿ ಬಿಕ್ಕಳಿಸಿ ಅಳುತ್ತ ನುಡಿದಳು, “ನನ್ನ ಮಗಳೆ, ನನ್ನನ್ನು ಕ್ಷಮಿಸಿಬಿಡು, ನಿನ್ನನ್ನು ಮಾನಸಿಕವಾಗಿ ತುಂಬ ಕಾಡಿದೆ. ನನ್ನಿಂದ ದೂರ ಹೋಗಬೇಡಮ್ಮ” ಎಂದಿತು ನೊಂದ ಜೀವ.

ಅಂಜನಾಳಿಗೆ ಇದೆಲ್ಲವೂ ಅಚ್ಚರಿಯಾಗಿ ಕಂಡಿತು. ಬಿಟ್ಟ ಕಣ್ಣು ಬಿಟ್ಟಂತೆ, “ಇದೆಲ್ಲ ಏನಮ್ಮಾ, ಅಲ್ಲದೇ ನನ್ನನ್ನು ಗೋಳಾಡಿಸಿಕೊಂಡದ್ದು ಯಾಕೆ?” ಎಂದಾಗ ಆಕೆಯ ತಾಯಿ ಹೇಳಿದರು, “ನನಗೂ ಕೂಡ ಚಿಕ್ಕವಳಿದ್ದಾಗ, ಚೆನ್ನಾಗಿ ಓದಿ ಕ್ಲಾಸಿನಲ್ಲಿಯೇ ಮುಂಚೂಣಿಯಾಗಿರಬೇಕು, ಎಲ್ಲರೂ ನನ್ನನ್ನೇ ಪ್ರೀತಿಸಬೇಕು, ಎಲ್ಲದಕ್ಕೋ ನಾನೇ ಯೋಗ್ಯಳಾಗಿರಬೇಕು ಎಂದು ಅಂದುಕೊಂಡದ್ದೇನೂ ನೆರವೇರಲಿಲ್ಲ. ಅದೆಲ್ಲವೂ ನನಗೆ ಅಸಮಾಧಾನವನ್ನೇ ತಂದಿತ್ತು, ನನ್ನಲ್ಲಿರದ ಅದೆಲ್ಲ ಗುಣಗಳು ನಿನ್ನಲ್ಲಿ ಇರುವುದು ಕಂಡು ನನ್ನ ಬಾಲ್ಯ ನೀಡಿದ ಕಹಿ ತುತ್ತು ಪದೇ ಪದೇ ನಿನ್ನನ್ನು ಕಂಡಾಗ ಬರುತ್ತಿತ್ತು. ಆ ಅಶಾಂತಿಯ, ಅಸಹನೆಯ ಮೊತ್ತವೇ ನಾನು ನಿನಗೆ ನೀಡುತ್ತಿದ್ದ ಅಮಾನುಷ ಕಿರುಕುಳ ಮಗಳೆ; ನೀನು ಗಂಡನ ಮನೆಗೆ ಹೋದ ಮೇಲೆಯೇ ನನಗದರ ಅರಿವಾಗಿದ್ದು. ನಾನು ದೊಡ್ಡ ತಪ್ಪು ಮಾಡಿದ್ದೆನೆಂಬ ಅರಿವು ನನಗಿದೆ, ನನ್ನನ್ನು ಕ್ಷಮಿಸಿಬಿಡು ಮಗಳೆ” ಎಂದು ಮತ್ತೊಮ್ಮೆ ತಬ್ಬಿ ಕಣ್ಣೀರಿಟ್ಟಳು. ಆ ಪಶ್ಚಾಟಾಪದ ಕಣ್ಣೀರು ಮತ್ತು ಅಮ್ಮನ ಅಪ್ಪುಗೆ ಆಕೆ ನೀಡಿದ ಚಿತ್ರಹಿಂಸೆ ಕಣ್ಣೀರಿನ ಜೊತೆಗೆ ಅಂಜನಾಳ ಮನಸ್ಸಿನಿಂದ ಜಾರಿ ಹೋಯಿತು.

ಚಿತ್ರಹಿಂಸೆಯೆಂಬ ಭಾರವಾದ ಮೂಟೆಯನ್ನು ಬೆನ್ನಿಗೆ ಕಟ್ಟಿಕೊಂಡು ನರಳುತ್ತಿದ್ದ ಅಂಜನಾಳ ಹೃದಯ ಹಗುರಾಯಿತು. ನೆಮ್ಮದಿಯೆಂಬ ಹಕ್ಕಿ ನೀಲಾಗಸದಲಿ ಹಾರುತ್ತ ಅಂಜನಾಳ ಮನದ ಗೂಡನ್ನು ಸೇರಿತ್ತು. ತಾಯಿ ಮಗಳ ಆ ಮುಖಾಮುಖಿ ಭೇಟಿ, ಆಲಿಂಗನ, ಪಶ್ಚಾತಾಪಪಟ್ಟು ಕ್ಷಮೆ ಕೇಳಿದ ಅಮ್ಮ, ಅಂಜನಾಳ ಕ್ಷಮಿಸುವ ವಿಶಾಲ ಮನೋಭಾವ, ಇವುಗಳು ಮಾತ್ರ ಮನಸ್ತಾಪಗೊಂಡು ಬಿರುಕು ಬಿಟ್ಟ ಕರುಳ ಕೊಂಡಿಯನ್ನು ಮತ್ತೆ ಬೆಸೆಯುವಂತೆ ಮಾಡಿದವು.

ಘಟನೆ ಇಷ್ಟೇ ಇತ್ತು ಸ್ನೇಹಿತರೆ, ಈ ಬರಹದೊಂದಿಗೆ ನನ್ನ ಪುಟ್ಟ ಸಂದೇಶ, “ತಪ್ಪು ದೊಡ್ಡದೆಂದು ಪರಿಗಣಿಸುತ್ತ ಹೋದರೆ, ಮನದ ನೆಮ್ಮದಿಯನ್ನು ನಾವು ದಿನೇ ದಿನೇ ಕಳೆದುಕೊಂಡಂತೆ; ಮಾಡಿದ ತಪ್ಪನ್ನು ತಪ್ಪು ಮಾಡಿದವರಿಗೆ ಮನವರಿಕೆ ಮಾಡಿಕೊಟ್ಟು ಕ್ಷಮಿಸುವ ವಿಶಾಲ ಮನೋಭಾವ ಹೊಂದಿದ್ದಲ್ಲಿ ಕಡಿದು ಹೋದ ಸಂಬಂಧಗಳು ಕೂಡ ಮಿಡಿದು ಬಂದು ನಿಮ್ಮ ಹೃದಯಗಳನ್ನು ಮತ್ತೆ ಬೆಸೆಯುದರಲ್ಲಿ ಸಂದೇಹವೇ ಇಲ್ಲ ಸ್ನೇಹಿತರೆ”.

ಇಂತಿ ನಿಮ್ಮ ಮನೆ ಮಗಳು
ರುಕ್ಮಿಣಿ ಎನ್.

ಇದೇ ಲೇಖನವನ್ನು ನೀವು ಪಂಜುವಿನಲ್ಲಿ ಕಾಣಲು ಕ್ಲಿಕ್ಕಿಸಿ: http://www.panjumagazine.com/?p=1033

Advertisements

ನಿರ್ಮಲ

ಬಡತನ, ಅಸಮಾನತೆ, ಅತ್ಯಾಚಾರ, ಜಾತೀಯತೆ, ರಾಜಕೀಯ ಅರಾಜಕತೆಯಿಂದ ತುಂಬಿ ತುಳುಕುತ್ತಿದ್ದ ಕೆಸರಿನಲ್ಲಿ ಬಿರಿಯಿತೊಂದು ನೈದಿಲೆ ನಿರ್ಮಲ. ನಿರ್ಮಲ ತಾಯಿಗೆ ಒಬ್ಬಳೇ ಮಗಳು. ವರದಕ್ಷಿಣೆಯ ಕಿರುಕುಳದಿಂದ ಗಂಡನಿಂದ ಬೇರೆಯಾದ ನಿರ್ಮಲಳ ತಾಯಿ ಶಾರದೆಗೆ ತಾಯಿಯ ಮನೆಯಲ್ಲಿ ಆಶ್ರಯ ಕೂಡ ಸಿಕ್ಕಲಿಲ್ಲ. ಎಷ್ಟಾದರೂ ಹೆತ್ತ ಹೆಣ್ಣು ಕುಲಕ್ಕೆ ಹೊರಗೆ ಅನ್ನೋ ಕಾಲ ಅದು. ಕಣ್ಮರೆಯಲ್ಲಿ ಇದ್ದರೆ ಗಾಳಿಮಾತುಗಳನ್ನು ಸೃಷ್ಟಿಸುವರು ಎಂದರಿತ ಶಾರದೆ ಜನರ ಮಾತುಗಳಿಗೆ ಗ್ರಾಸವಾಗಕೂಡದು ಎಂದು ಹುಟ್ಟೂರಲ್ಲೇ ಬಾಡಿಗೆಯ ಮನೆಯೊಂದನ್ನ ಮಾಡಿಕೊಂಡು ಜೀವನ ಎಂಬ ರಣರಂಗದಲ್ಲಿ ಇಳಿದುಬಿಟ್ಟಳು. ಆ ಶಟಿ ದೇವಿಗೆ ಶಾರದೆ ಮೇಲೆ ಅದ್ಯಾವ ವಿಷಯದಲ್ಲಿ ಮನಸ್ತಾಪವಿತ್ತೋ ಏನೋ ಶಾರದೆ ಹಣೆಬರಹದಲ್ಲಿ ಎಳ್ಳಷ್ಟೂ ಸುಖ ಬರೆದಿರಲಿಲ್ಲ. ಶಾರದೆ ಅಂತ ಹೆಸರು ಮಾತ್ರ, ಈಕೆ ಶಾಲೆಯ ಮುಂದಾಗಲಿ ಹಿಂದಾಗಲಿ ಹೋದವಳೆ ಅಲ್ಲ. ಅಕ್ಷರ ಜ್ಞಾನವಿಲ್ಲದಿದ್ದರೂ ಜೀವನ ಹೇಳಿಕೊಟ್ಟ ಪಾಠವನ್ನು ಚೆನ್ನಾಗಿ ಕಲಿತವಳು ಹಳ್ಳಿಯ ಗರತಿ ಶಾರದೆ.

ಒಂಟಿ ಹೆಣ್ಣಿಗೆ ತಲೆಗೊಂದು ಮಾತು ನಮ್ಮ ದೇಶದಲ್ಲಿ, ಅವರನ್ನ ಅವರ ಪಾಡಿಗೆ ಬಿಟ್ಟರೆ ಇವರಿಗೆ ಆಡ್ಕೊಳ್ಳೋಕೆ ಬೇರೆ ವಿಷಯವಾದರೂ ಎಲ್ಲಿಂದ ಬಂದೀತು. ಗಂಡ ಇದ್ದ ಹೆಂಗಸಿಗೆ ಸಲ್ಲದ ಮಾತು ಹೇಳಿದ್ರೆ ಬಂದು ಸೊಂಟ ಮುರಿದು ಬಿಟ್ಟಾರು ಅನ್ನೋ ಭಯ ಜನಕ್ಕೆ, ಅಬಲೆಯರ ಮೇಲೆ ಶೋಷಣೆ ಮಾಡಿದಲ್ಲಿ ಮಾತ್ರ ತಿಂದ ಹೊಟ್ಟೆ ತಣ್ಣಗಿರುತ್ತೇನೋ. ಇಂತಹ ಗೊಡ್ಡು ಗಾಳಿಮತುಗಳಿಗೆ ಶಾರದೆ ಬೆದರಲಿಲ್ಲ, ಬೆಚ್ಚಲಿಲ್ಲ ಗಂಡೆದೆಯ ಗುಂಡಿಗೆ ಅಕೆಯದು ಎಂದು ಹೇಳಬಹುದು. ಎಲ್ಲವನ್ನೂ ಸವಾಲಾಗಿ ತೆಗೆದುಕೊಂಡ ಶಾರದೆಗೆ ಒಂದೇ ಒಂದು ಗುರಿ, ತಾನೆಷ್ಟು ಕಷ್ಟ ಪಟ್ಟರೂ ಸರಿ, ತನ್ನ ಮಗಳಿಗೆ ಒಳ್ಳೆಯ ವಿದ್ಯೆ ಕೊಡಿಸಿ, ಓದಿಸಿ, ಒಂದೊಳ್ಳೆಯ ಹಂತಕ್ಕೆ ತರಬೇಕು ಎಂದು. ತಂದೆಯಿಲ್ಲದ ಕೊರಗು ಆಕೆಗೆ ಯಾವ ಸಂದರ್ಭದಲ್ಲೂ ಬರಕೂಡದು ಎಂದು ಕಂಡ-ಕಂಡವರ ಹೊಲದಲ್ಲಿ ಕಳೆ ತೆಗೆದು, ರಾಶಿ ಮಾಡಿ, ಕಟ್ಟಡ ಕೆಲಸಗಲ್ಲಿ ಗಂಡಾಳಿಗೆ ಸರಿ ಸಮ ಕೆಲಸ ಮಾಡಿ, ಮದುವೆಯ ಕಾರ್ಯಗಳಲ್ಲಿ ಸೋಬಾನೆ ಪದ ಹಾಡಿ ಮಗಳ ಉಜ್ವಲ ಭವಿಷಯಕ್ಕಾಗಿ ದುಡ್ಡು ಕೂಡಿಡುತ್ತಿದ್ದಳು ಶಾರದೆ.

ನಿರ್ಮಲ, ಕೆಸರಿನ ಕೊಳದಲ್ಲಿ ಬಿರಿದ ನೈದಿಲೆಯಷ್ಟೇ ನಿರ್ಮಲ ಆಕೆಯ ಮನಸ್ಸು. ನೋಡಲು ಸಾಧಾರಣವಾಗಿಯೇ ಕಂಡರೂ, ನಕ್ಷತ್ರದಂತೆ ಮಿನುಗುವ ಆಕೆಯ ಕಣ್ಣುಗಳಲ್ಲಿ ಅದ್ಯಾವುದೋ ಅದ್ಭುತ ಶಕ್ತಿ ಆ ನಯನಗಳಲ್ಲಿ ಎದ್ದು ತೋರುತ್ತಿತ್ತು. ಬೊಗಸೆಯಷ್ಟು ನಗು ಬೀರಿದರೆ ಸಾಕು ಸಂತಸದ ಹೊನಲು ತನ್ನ ವಿಳಾಸವ ಮರೆತು ಇವಳ ಕಾಲಡಿ ಬಿದ್ದು ಹೊರಳಾಡುತ್ತಿತ್ತು. ಸದಾ ನಗುತ್ತಿರುವ ನಿರ್ಮಲಳನ್ನು ಕಂಡರೆ ಎಲ್ಲರಿಗೂ ಪ್ರೀತಿ ಅಕ್ಕರೆ, ಆಕೆಯ ಮುಗುಳು ನಗೆಯಲ್ಲಿ ಅಡಗಿದ್ದ ಅವಳ ಮನದ ನಿರ್ಮಲತೆ ಮತ್ತು ಮುಗ್ಧತೆ ಕಾರಣವಿರಬಹುದೇನೋ.

ಬಾಲ್ಯದಿಂದ ಜ್ಞಾನಿಗಳ ಜೀವನ ಚರಿತ್ರೆಗಳನ್ನೆಲ್ಲ ಓದಿ, ಅದರಿಂದ ಪ್ರಭಾವಿತಗೊಂಡು, ಅವರು ಹಾಕಿ ಕೊಟ್ಟ ಚೌಕಟ್ಟಿನಲ್ಲಿ ನಡೆಯುವುದನ್ನು ರೂಢಿಸಿಕೊಂಡ ನಿರ್ಮಲಳಿಗೆ ಯಾವುದೋ ದಿವ್ಯ ಚೇತನವೊಂದು ಕೈಬೀಸಿ ಕರೆಯುತ್ತಿದ್ದಂತೆ ಕಾಣಿಸಿತ್ತು. Teacher is future ಎನ್ನುವ ಮಾತಲ್ಲಿ ಗಾಢವಾದ ನಂಬಿಕೆ ಹೊಂದಿದ್ದ ನಿರ್ಮಲ ತಾನು ಕೂಡ ಶಿಕ್ಷಕಿಯಾಗಿ, ತನ್ನೂರಿನ ಮಕ್ಕಳಿಗೆ ಮೌಲ್ಯಗಳಿಂದ ತುಂಬಿದ ಶಿಕ್ಷಣ ಕೊಟ್ಟು ದೇಶಕ್ಕೆ ಉತ್ತಮ ಪ್ರಜೆಗಳನ್ನು ಕೊಡುವ ರೂಪದಲ್ಲಿ, ಅಲ್ಲದೇ ತನ್ನ ತಾಯಿಯಂತೆ ಒಂಟಿಯಾಗಿರುವ ಅಬಲೆ ಸಶಕ್ತೀಕರಣ ಕಾರ್ಯದಲ್ಲಿ ತೊಡಗಿಸಿಕೊಂಡು ತನ್ನ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಬೇಕೆಂದು ಕನಸು ಕಂಡವಳು ಆಕೆ. ದೇಶಕ್ಕಾಗಿ ತಾನು ತನ್ನ ಕೈಲಾದಷ್ಟು ಅಳಿಲು ಸೇವೆ ಮಾಡುವುದೇ ಈಶ ಕಾರ್ಯ ಎಂದು ತಿಳಿದು ಭವ್ಯ ಕನಸಿನ ಮೂಟೆಯೊಂದನ್ನು ಹೆಗಲಿಗೆ ಹೊತ್ತು ಅದನ್ನು ನನಸಾಗಿಸುವ ಅತ್ಯಾಕಾಂಕ್ಷೆಯಲ್ಲಿ ಡಿ.ಎಡ್ ಮಾಡಲು ಶಹರೊಂದಕೆ ಕಾಲಿಟ್ಟಳು.

ಅಂದುಕೊಂಡಂತೆಯೇ ಹಗಲಿರುಳು ಅತೀವ ಶ್ರಮದಿಂದ ಅಭ್ಯಾಸದಲ್ಲಿ ನಿರತಳಾಗಿದ್ದಳು. ಅಚಾನಕಾಗಿ ಕೂಡ ಆಕೆಗೆ ಆಯಾಸವಾದರೂ ಕೂಲಿ ಮಾಡಿ ಬೆಳೆಸಿದ ಆಕೆಯ ತಾಯಿಯ ಮುಖ, ಆಕೆ ಪಟ್ಟ ಪರಿಶ್ರಮ, ಜನರ ಚುಚ್ಚು ಮಾತುಗಳು ಆಕೆಯ ಕಣ್ಣ ಮುಂದೆ ಬಂದು ಅದೇ ನೆನಪಲ್ಲಿ ಒಂದೆರಡು ಕಂಬನಿ ಮಿಡಿದು ಮತ್ತೆ ತನ್ನ ಓದಿನಲ್ಲಿ ತನ್ನನ್ನು ತೊಡಗಿಸಿಕೊಂಡು ಡಿಸ್ಟಿಂಕ್ಶನ್ ನಲ್ಲಿ ಪಾಸಾಗಿ ಕನಸು ಸಕಾರಗೊಳ್ಳುವ ನಿಟ್ಟಿನಲ್ಲೇ ಸಾಗುತ್ತಾ ಇದ್ದೇನೆ ಎಂದು ನಿಟ್ಟುಸಿರು ಬಿಟ್ಟು ಸಂತಸಗೊಂಡಿದ್ದಳು ನಿರ್ಮಲ.

ತಾಯಿ ಮಗಳಿಗೆ ಹತ್ತಿರವಾದ ಜೀವವೆಂದರೆ ಅವರದೇ ಹಳ್ಳಿಯಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಗುರು. ನಿರ್ಮಲಳ ಜೀವನ ಕಂಡು ಮರುಕಪಟ್ಟು ಆರ್ಥಿಕ ನೆರವು ನೀಡಲು ಮುಂದಾದ ಗುರು. ಬಡವಾಳಾದರೂ ಏನಂತೆ ಶಾರದೆಯ ಸ್ವಾಭಿಮಾನ ಅದಕ್ಕೆ ಒಪ್ಪಲಿಲ್ಲ. ತುಂಬಾ ಅಡಚಣೆ ಕಂಡು ಬಂದಾಗಿ ಸಾಲದ ರೂಪದಲ್ಲಿ ಗುರುವಿನ ಹತ್ತಿರ ಹಣ ತೆಗೆದುಕೊಂಡಿದ್ದಳು. ಅಕ್ಕ ಅಕ್ಕ ಎಂದು ಶಾರದೆಗೆ ತಮ್ಮನಾಗಿಬಿಟ್ಟಿದ್ದ ಗುರು ಅಲ್ಲದೇ ಅವರ ಹಳ್ಳಿಯ ಶಾಲೆಗೆ ಅವನೊಬ್ಬ ಆದರ್ಶ ಶಿಕ್ಷಕನಾಗಿದ್ದ. ಶಹರಿನಲ್ಲಿ ಓದುತ್ತಿದ್ದ ನಿರ್ಮಲಳಿಗೆ ವಾರಕ್ಕೊಮ್ಮೆ ಕಾಲ್ ಮಾಡಿ ಮಾತಾಡುತ್ತಿದ್ದ ಗುರು ನಿರ್ಮಲಳಿಗೆ ಒಬ್ಬ ಒಳ್ಳೆಯ ಸ್ನೇಹಿತ ಹಾಗೂ ಶಿಕ್ಷಕ ಕೂಡ ಆಗಿಬಿಟ್ಟಿದ್ದ.

ಇತ್ತ ಓದು ಮುಗಿಸಿ ಮನೆಗೆ ಬಂದ ನಿರ್ಮಲಳನ್ನು ಕಾಣಲು ಫ್ಯಾಮಿಲಿ ಸ್ನೇಹಿತ ಗುರು ಮನೆಗೆ ಬಂದರು. ಗುರು ಜೊತೆ ಮಾತನಾಡುತ್ತಾ ಅವರಿಗಿಷ್ಟವಾದ ಭಜ್ಜಿ ಮತ್ತು ಚಹಾ ಮಾಡಿಕೊಡಲು ನಿರ್ಮಲ ಅಡುಗೆ ಮನೆಗೆ ನುಗ್ಗಿ ತಯಾರಿ ನಡೆಸಿದಳು. ಶಹರಿನ ಅನುಭವಗಳನ್ನು ಕೇಳುತ್ತ ಗುರು ಕೂಡ ಅವಳ ಹಿಂದಿಂದೆ ಅಡುಗೆ ಕೋಣೆಗೆ ನಡೆದ. ಮಾತುಕತೆಗಳ ಭರದಲ್ಲಿ ನಿರ್ಮಲಳ ಕೆಲಸವೂ ಸಾಗುತ್ತಲೇ ಇತ್ತು. ಭಜ್ಜಿ ತಿನ್ನಲು ಕೊಟ್ಟು ಚಹಾ ಒಲೆಯ ಮೇಲಿಡುವಷ್ಟರಲ್ಲಿ ಹಿಂದಿನಿಂದ ಗಟ್ಟಿಯಾಗಿ ಗುರು ಅವಳನ್ನು ತಬ್ಬಿ ನಿಂತಿದ್ದ. ನಿರಾತಂಕವಾಗಿ ಮಾತಿನ ಭರದಲ್ಲಿದ್ದ ನಿರ್ಮಲಳ ಎದೆ ಒಡೆದಂತಾಯಿತು ಇದೆಂಥ ಅವಘಡ ಎಂದು ಅವನ ಕೈಗಳನ್ನು ಬಿಸುಡಿ ಸರಕ್ಕನೆ ಜೆರೆದು ದೂರದಲ್ಲಿ ನಿಂತುಕೊಂಡು, ಏನಿದು ಎಂದು ಏರು ದನಿಯಲ್ಲಿ ಕೇಳಿದಳು.

ನಿರ್ಮಲಳನ್ನು ಕಂಡರೆ ತನಗೆ ಪ್ರೇಮವೆಂದು ಹೇಳುತ್ತ ಮತ್ತೆ ಅವಳ ಸನಿಹ ಬಯಸಿ ನಡೆದು ಏನು ಆಗಲ್ಲ ತನ್ನೊಡನೆ ಕೋ-ಆಪರೇಟ್ ಮಾಡುತ್ತ ತನ್ನ ಜೊತೆ ಯಾವತ್ತೂ ಹೀಗೆಯೇ ಇರು ಎನ್ನುತ್ತ ಹೆಜ್ಜೆಯನ್ಣ ಮತ್ತೆ ನಿರ್ಮಲಳತ್ತ ಇಟ್ಟ. ಮೊದಲೇ ಅವನ ವಿಕೃತ ಕೃತ್ಯದಿಂದ ನಿರ್ಮಲಳ ಕೋಪ ನೆತ್ತಿಗೇರಿತ್ತು. ವಿವಾಹಿತರು ಪರ ಸ್ತ್ರೀ ಸಹವಾಸ ಮಾಡಿದರೆ ಅದನ್ನು ಪ್ರೇಮವಲ್ಲ ವ್ಯಭಿಚಾರ ಎನ್ನುತ್ತಾರೆ, ತನ್ನ ಬಾಳ ಸಂಗಾತಿಯ ಬಗೆಗೆ ಅವನಿಗಿರುವ ನಿಷ್ಠೆ ಇಷ್ಟೇನ ಎಂದು ಕೇಳುತ್ತಾ ಗುರು ಮೇಲಿದ್ದ ಎಲ್ಲ ಗೌರವವೂ ಇಂದು ನೆಲಸಮವಾಯಿತು ಎಂದು ಖಡಖಡನೆ ನುಡಿದು ಬಿಟ್ಟಳು ನಿರ್ಮಲ. ಮತ್ತೇನೋ ಹೇಳಲಿಕ್ಕೆ ಎಂದು ಗುರು ಒಂದು ಹೆಜ್ಜೆ ಮುಂದೆ ಇಡುವಷ್ಟರಲ್ಲಿ ಜ್ವಾಲೆಯಂತೆ ಧಗಧಗಿಸುತ್ತಿದ್ದ ನಿರ್ಮಲ, ತಾವಿನ್ನು ಒಂದು ಹೆಜ್ಜೆ ಮುಂದಿಟ್ಟರೂ ತಾನು ರಂಪ ಮಾಡಿ ಊರ ಜನರನ್ನು ಸೇರಿಸುವುದಾಗಿ ಹೇಳಿದಳು. ಇಷ್ಟು ದಿನ ತನಗೆ ತೋರಿದ ಕಾಳಜಿ ತನ್ನನ್ನು ಕಟ್ಟಿ ಹಾಕುತ್ತಿರುವುದರಿಂದ ಅಲ್ಲಿಂದ ತಕ್ಷಣ ನಡೆದು ಬಿಡುವಂತೆ, ಮತ್ತೆ ಯಾವತ್ತೂ ಅವರ ಮನೆಯ ಹೊಸ್ತಿಲು ತುಳಿಯದಂತೆ ತಾಕೀತು ಮಾಡಿ ಭಾರವಾದ ಹೃದಯದಿಂದ ಕಂಬನಿ ಮಿಡಿಯುತ್ತಾ ನಿರ್ಮಲ ನೆಲಕ್ಕೆ ಕುಸಿದು ಬಿದ್ದಳು.

ಮುಖಭಂಗ ಮಾಡಿಸಿಕೊಂಡ ಗುರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಜನರ ಮುಂದೆ ಮೂರು ಕಾಸಿಗೆ ಹರಾಜಾಗುವ ಮಾನ ತನ್ನಲ್ಲೇ ಉಳಿದು ಪುನರ್ಜನ್ಮ ಬಂತು ಎಂಬಂತೆ ಗುರು ಹೊರ ನಡೆದ. ಅವರ ಮೇಲೆ ಇಟ್ಟಿದ್ದ ನಂಬಿಕೆ ವಿಶ್ವಾಸ ಚೂರುಚೂರಾಗಿ ಅವನ ವಿಕೃತ ನಡುವಳಿಕೆಗೆ ತಾನು ಬಲಿಪಶುವಾಗಿ ಬಿಡುತ್ತಿದ್ದೇನಲ್ಲ ಎಂದು ಬಿಕ್ಕಳಿಸಿ ಅಳತೊಡಗಿದಳು. ಅವಳ ನಂಬಿಕೆ ಮತ್ತು ವಿಶ್ವಾಸ ಒಲೆ ಮೇಲೆ ಇಟ್ಟಿದ್ದ ಚಹಾ ಹೆಚ್ಚಳ ಬೆಂಕಿಯಿಂದಾಗಿ ಸೀದಿಹೋದಂತೆ, ಗುರು ಮಾಡ ಹೊರಟಿದ್ದ ನೀಚ ಕೃತ್ಯಕ್ಕೆ ನಿರ್ಮಲಳ ನಂಬಿಕೆ ಕಮರಿ ಹೋಗಿತ್ತು.

ಅತ್ತ ಮನೆಗೆ ಬಂದ ಮಗಳಿಗೆ ಇಷ್ಟವಾದ ತಿನಿಸು ಮಾಡಿಕೊಡಬೇಕೆಂದು ದಿನಸಿ ಅಂಗಡಿದೆ ಹೋದ ಶಾರದೆಗೆ ಹಬ್ಬದ ಸಡಗರ ಎಂಬಂತೆ ಖುಷಿ ಆಗಿತ್ತು. ಅದೇ ಸಡಗರದಲ್ಲಿ ಮನೆಗೆ ತೆರಳಿದ ಅಮ್ಮನಿಗೆ ನಡೆದ ವಿಷಯ ಹೇಳಿದಾಗ ದಂಗು ಬಡಿದವರಂತೆ ಮಾತೇ ಆಡಲಿಲ್ಲ. ಅಕ್ಕ ಅಕ್ಕ ಎಂದು ತಿರುಗುತ್ತಿದ್ದ ಗುರುವನ್ನು ಮಗನ ರೂಪದಲ್ಲಿ ನೋಡಿದ್ದ ಶಾರದೆ ಅವನು ಇಂತಹ ಕೆಲಸ ಮಾಡಿಬಿಟ್ಟನೇ ಎಂದು ಅಶ್ರುಧಾರೆ ಹರಿಸಿದಳು. ಸಂತಸದ ಹೊನಲೇ ತುಂಬಿ ತುಳುಕುತ್ತಿದ್ದ ಮನೆಯಲ್ಲಿ ಆ ದಿನ ಕರಾಳ ಅಮಾವಾಸ್ಯೆಯ ಕತ್ತಲು ಆವರಿಸಿದರೆ ಮೌನ ಅವರ ಮಾತುಗಳನ್ನೇ ಕಸಿದುಕೊಂಡಿತ್ತು. ಆ ದಿನ ರಾತ್ರಿ ಶಾರದೆ ಮತ್ತು ನಿರ್ಮಲ ನಂಬಿಕೆ ದ್ರೋಹದ ಪಾಠವನುಂಡು, ಕಣ್ಣೀರಲ್ಲಿ ಕೈ ತೊಳೆದು, ಮೌನವೆಂಬ ನಿದ್ರೆಯಲ್ಲಿ ಜಾರಿ ಹೋಗಿದ್ದರು.

ಕಾಯ-ವಾಚಾ-ಮನಸಾ ಪರಿಶುದ್ದಳಿದ್ದ ನಿರ್ಮಲಳ ಕಣ್ಣೀರು ಸಮಾಜವನ್ನು ಪ್ರಶ್ನಿಸುತ್ತಿದ್ದವು: “ನಾವು ಅಬಲೆಯರೆಂದ ಮಾತ್ರಕ್ಕೆ ನೀವು ನಮ್ಮನ್ನು ಹೇಗೆ ಬೇಕಾದರೂ ನಡೆಸಿಕೊಳ್ಳಬಹುದೇ? ಸಹಾಯ ಮಾಡುವ ಕುಂಟು ನೆಪ ಹೂಡಿ ಸಮಾಜದಲ್ಲಿನ ನಮ್ಮನ್ನು ಭೋಗದ ವಸ್ತುವೆಂದು ತಿಳಿಯುವುದು ಸರಿಯೇ? ಮನೆಗೆ ನೆರಳಾಗಿ ನಿಲ್ಲುವ ಗಂಡಿನ ಆಶ್ರಯ ಇಲ್ಲವೆಂದ ಮಾತ್ರಕ್ಕೆ ಸಲ್ಲದ ಮಾತುಗಳನ್ನು ನಾವು ಸಹಿಸಿಕೊಳ್ಳಬೇಕೆ ? ಸ್ನೇಹ ಬಯಸಿದ ಮಾತ್ರಕ್ಕೆ ನಮ್ಮನ್ನು ಕೆಟ್ಟ ದೃಷ್ಟಿಯಿಂದ ನೋಡುವುದೇಕೆ ?

ಹೌದು ಸ್ನೇಹಿತರೆ, ಇದು ಕೇವಲ ಒಬ್ಬ ನಿರ್ಮಲಳ ಕಥೆಯಲ್ಲ. ಇಂತಹ ಎಷ್ಟೋ ನಿರ್ಮಲ ಮನಸುಗಳ ನಿರ್ಮಲರು ಕಾಮಿಗಳ ಬಲೆಗೆ ಬಲಿಯಾದ ನಿದರ್ಶನಗಳು ಕೂಡ ಹಲವುಂಟು. ಒಂಟಿ ಹೆಣ್ಣು, ವಿಧವೆ, ವಿಚ್ಛೇದನಗೊಂಡವಳು, ವೃದ್ಧೆ ಹಲವರು ಇಂತಹ ಕಿರುಕುಳಕ್ಕೆ ಒಳಗಾಗಿದ್ದಾರೆ. ಅವರೆಡೆಗೆ ಇರುವ ನಮ್ಮ ಮನೋಭಾವನೆಯನ್ನು ಬದಲಿಸಿಕೊಂಡು ಅವರನ್ನು ಸಾಮಾನ್ಯರಂತೆ ಕಂಡು ಗೌರವಿಸಿದರೆ ಅಬಲೆಯರ ಹೃದಯದಲ್ಲಿ ನಮಗೆ ಗೌರವ ಇಮ್ಮಡಿಯಾಗುತ್ತೆ. ಬನ್ನಿ ಎಲ್ಲರೂ ಸೇರಿ ಅಬಲೆಯರ ಮುಖದಲ್ಲಿ ಸಂತಸದ ಹೊನಲು ಕಾಣಲು ಇಷ್ಟ ಪಡೋಣ.

ರುಕ್ಮಿಣಿ ಎನ್.

ಇದೇ ಲೇಖನವನ್ನು ನೀವು ಪಂಜುವಿನಲ್ಲಿ ಕಾಣಲು ಕ್ಲಿಕ್ಕಿಸಿ: http://www.panjumagazine.com/?p=1189

ಅಪರಿಚಿತ

ಆಗ ಸಮಯ ಅಪರಾಹ್ನದ ೩ ಘಂಟೆ ೨೦ ನಿಮಿಷಗಳು. ದಾದರ್ ನಿಂದ ಧಾರವಾಡಕ್ಕೆ ಹೋಗುವ ಮುಂಬೈ-ಧಾರವಾಡ ಎಕ್ಸ್‌ಪ್ರೆಸ್ ಟ್ರೈನ್ ಹೊರಡುವುದು ಕೇವಲ ೫ ನಿಮಿಷಗಳು ಮಾತ್ರ ಬಾಕಿ ಇತ್ತು. ಅತ್ತಲಿಂದ ಒಬ್ಬ ತರುಣೆ ಟ್ರೈನ್ ತಪ್ಪಿ ಹೋಗಬಹುದೆಂಬ ಭೀತಿಯಲ್ಲಿ, ಅಕ್ಕ-ಪಕ್ಕದವರನ್ನು ಲೆಕ್ಕಿಸದೇ ಎದುರಿಗೆ ಬಂದವರನ್ನು ನೂಕುತ್ತ, ಮತ್ತೆಲ್ಲೋ ಕಣ್ಣಾಡಿಸುತ್ತ ಓಡುತ್ತಲೇ ಇದ್ದಳು. ಟ್ರೈನ್ ಹಸಿರು ನಿಶಾನೆ ತೋರಿಸಿ ಕೊನೆಗೊಮ್ಮೆ ಹಾರ್ನ್ ಹಾಕಿ ಇನ್ನೇನು ಹೊರಟೆ ಬಿಟ್ಟಿತು ಅನ್ನೋವಷ್ಟರಲ್ಲಿ ಅವಳು ಟ್ರೈನ್ ಹತ್ತಿಬಿಟ್ಟು, ಸ್ವಲ್ಪ ತಡವಾಗಿದ್ದರೂ ಟ್ರೈನ್ ತಪ್ಪಿ ಬಿಡುತ್ತಿತ್ತು; ಥ್ಯಾಂಕ್ ಗಾಡ್ ಎನ್ನುತ್ತ ನಿಟ್ಟುಸಿರು ಬಿಡುತ್ತಾಳೆ. ತುಸು ವಿರಾಮದ ನಂತರ ಲಗ್ಗೆಜ್ ಎಲ್ಲ ಎತ್ತಿಕೊಂಡು ತನ್ನ ಸೀಟ್ ಹುಡುಕುತ್ತ ನಡೆಯುತ್ತಾಳೆ.

ನೀಳ ಕಾಯದ, ಸಂಪಿಗೆ ಮೂಗಿನ, ಬಟ್ಟಲು ಕಣ್ಣಿನ, ಪಿಂಕು ಚೂಡಿ ಧರಿಸಿದ, ೨೨ ವರುಷದ ಕೃಷ್ಣ ಸುಂದರಿ ವರುಣಾ, ಹಂಸನಡಿಗೆಯಲಿ ಬರುವುದನ್ನು ಕಾಣುತ್ತಲೇ ಎದುರಿನ ಸೀಟ್ನಲ್ಲಿ ಕುಳಿತಿದ್ದ ಯುವಕನೊಬ್ಬ ಆಕೆಯ ರೂಪರಾಶಿಗೆ ಮೋಹಿತನಾಗಿ ಆಕೆಯತ್ತ ನೋಟ ಹರಿಸುತ್ತಾನೆ. ನೀರು ಕೇಳುವ ನೆಪದಲ್ಲಿ ಆಕೆಯೊಂದಿಗೆ ಮಾತನಾಡಲು ಶುರು ಮಾಡುತ್ತಾನೆ. ಅವಳಿಗೆ ಕಥೆ ಕಾದಂಬರಿಗಳ ಮೇಲೆ ಆಸಕ್ತಿ ಇರುವುದೆಂದು; ಬಂದಾಗಿನಿಂದ ಒಂದೇ ಸವನೆ ಓದುತ್ತಿರುವ ಕಾದಂಬರಿಯೊಂದನ್ನು ಕಂಡು ಗಮನಿಸಿದ ಪ್ರಕಾಶ್ ತನಗೂ ಕೂಡ ಅದೆಲ್ಲ ತುಂಬಾ ಹಿಡಿಸುವ ವಿಷಯ ಎಂದು ಹೇಳಿ ಬೇರೆ ಬೇರೆ ಕಾದಂಬರಿಗಳ ಬಗ್ಗೆ ಚರ್ಚಿಸುತ್ತಾನೆ. ಬೇರೆ ಬೇರೆ ಟಾಪಿಕ್ ಎಲ್ಲ ಎತ್ತಿಬಿಟ್ಟು ಆಕೆಯೊಂದಿಗೆ ಮಾತನಾಡುತ್ತ ಕೂಡುತ್ತಾನೆ. ಜಂಕ್ಷನ್ ನಡುವೆ ಅವನು ತರುತ್ತಿದ್ದ ಚಿಪ್ಸ್, ತಂಪು ಪಾನೀಯಗಳು ಅವರ ಮಾತಿಗೆ ಮತ್ತಷ್ಟು ಉತ್ತೇಜನ ನೀಡುತ್ತವೆ.

ಕೆಲವೇ ಕ್ಷಣಗಳಲ್ಲಿ ಅವರಿಬ್ಬರ ನಡುವೆ ಒಳ್ಳೆಯ ಸಂಬಂಧ ಏರ್ಪಡುತ್ತದೆ. ಧಾರವಾಡ ತಲುಪುವವರೆಗೂ ಇಬ್ಬರ ನಡುವೆ ಮಾತಿನ ಜಡಿಮಳೆ ಭರದಿಂದ ಸುರಿಯುತ್ತಲೇ ಇರುತ್ತದೆ. ಟ್ರೈನ್ ಜರ್ನೀ ಅವರಿಬ್ಬರನ್ನೂ ತುಂಬ ಸನಿಹ ತಂದಿದ್ದರೆ, ಲೈಫ್ ಲಾಂಗ್ ಸ್ನೇಹಿತರಾಗಿವುದಕ್ಕೆ ಸೆಲ್ ಫೋನ್ ನಂಬರ್ ತುಂಬ ನರವಾಗುತ್ತದೆ. ಪರಿಚಿತರಾದ ಸಂತಸದೊಂದಿಗೆ ಸ್ನೇಹದ ಹೊಳೆಯಲ್ಲಿ ಈಜಾಡ್ತಾ ತಮ್ಮ ತಮ್ಮ ಮನೆಗೆ ತೆರಳುತ್ತಾರೆ.

ಚಿಕ್ಕಪ್ಪನ ಮನೆಗೆ ಬಂದಿದ್ದ ವರುಣಾ ಹೊಸದೊಂದು ಪರಿಸರಕ್ಕೆ ಕಾಲಿಟ್ಟ ಸಂಭ್ರಮದಲ್ಲಿದ್ದಳು. ಟ್ರೈನ್ ಜರ್ನಿಯಲ್ಲಿ ಪರಿಚಯಗೊಂಡ ಹುಡುಗ ಪ್ರಕಾಶ್ ನಿಂದ ಕಾಲ್, ಮೆಸೇಜ್ ಗಳ್ ನಿರೀಕ್ಷೆಯಲ್ಲಿದ್ದ ವರುಣಾ ಅವನ ಯಾವೊಂದು ಸುಳಿವಿಲ್ಲದಿರುವುದನ್ನು ಕಂಡು ಕೊಂಚ ನಿರಾಶಿತಳಾಗಿದ್ದಳು. ಜರ್ನೀಯಲ್ಲಿ ನಡೆದ ಮಾತುಗಳನ್ನ ಮತ್ತೆ ಸಿಂಹಾವಲೋಕನ ಮಾಡಿಕೊಳ್ಳುತ್ತ, ಕನ್ನಡಿಯ ಮುಂದೆ ನಿಂತು ತನ್ನ ದೇಹ ಸೌಂದರ್ಯವನ್ನೇ ನೋಡಿಕೊಳ್ಳುತ್ತ, ಮಂದಹಾಸ ಬೀರುತ್ತಾಳೆ. ಮುಂಗುರುಳಲ್ಲಿ ಬೆರಳಾಡಿಸುತ್ತ, ಆ ದಿನ ಪ್ರಕಾಶ ತನ್ನನ್ನು ಕದ್ದು ಮುಚ್ಚಿ ನೋಡುತ್ತಿರುವುದನ್ನು ಕಂಡರೂ ತನಗೇನೂ ಅರಿವಿಲ್ಲವೆಂಬಂತೆ ನಟಿಸಿದ್ದನ್ನ ನೆನೆದು ಗೊಳ್ಳೆಂದು ನಕ್ಕಿಬಿಟ್ಟಿದ್ದಳು ಕೃಷ್ಣಸುಂದರಿ.

ಲಕ್ಷಣವಾದ ಅವನ ನೋಟ, ಮಾತಲ್ಲಿ ಕಂಡ ಅವನ ಜಾಣತನ, ಮನಸೂರೆಗೊಳ್ಳುವ ಅವನ ಮಾತಿನ ಧಾಟಿ ಅವಳಿಗೆ ತುಂಬ ಹಿಡಿಸಿತ್ತು. ಅದೇ ಕಲ್ಪನಾ ಲೋಕದಲ್ಲಿ ವಿಹರಿಸುತ್ತ ಕೇವಲ ಜರ್ನಿಯಲ್ಲಿ ತನಗೆ ಇಷ್ಟೊಂದು ಕಾಳಜಿ ತೋರಿದ ಹುಡುಗ ಲೈಫ್ ಲಾಂಗ್ ತನ್ನ ಜೀವನದಲ್ಲಿದ್ದರೆ ಮಗುವಂತೆ ತನ್ನನ್ನು ನೋಡಿಕೊಳ್ಳವನು ಎಂದು ಮನದಲ್ಲಿ ದುರಾಸೆ ಪಟ್ಟಳೆನೋ. ಒಂದು ಕ್ಷಣಕ್ಕೆ ಅವನು ತನ್ನ ಸ್ವಂತದವನೆಂಬ ಭಾವನೆ ಅವಳಲ್ಲಿ ಕಾಣುತ್ತಿತ್ತು. ಇದೆಂತ ಹುಚ್ಚು ಈ ಪೆದ್ದು ಮನಕೆ ಎಂದು ತನ್ನ ತಲೆಯನ್ನು ತಾನೇ ತಿವಿದುಕೊಂಡು ಮತ್ತೆ ತನ್ನ ಕೆಲಸದಲ್ಲಿ ನಿರತಳಾಗಿದ್ದಳು.

ಸಂಜೆ, ತಂಗಾಳಿಯ ಸವಿಯುತ್ತ, ಟರ್ರಸ್ ಮೇಲೆ ನಿಂತು ಹಕ್ಕಿಗಳ ಇಂಚರ ಕೆಳುತ್ತ ದೂರಕ್ಕೆ ಕಣ್ಣಾಡಿಸಿದಳು. ಬಾನಂಗಳದಲಿ ಉಷಾ, ಕಿರಣಾ, ಸಂಧ್ಯಾರೊಂದಿಗೆ ಮುಂಜಾವಿನಿಂದ ಮುಸ್ಸಂಜೆಯವರೆಗೂ ಮುದ್ದಾಡಿ, ಬಾನ ರಂಗೇರಿಸಿ, ಆಟ ಸಾಕೆಂಬಂತೆ ಪಡುವನದ ಮನೆಗೆ ತೆರಳುತ್ತಿರುವ ದಿನಕರನನ್ನು ಕಂಡು ತನ್ನಲ್ಲೇ ತಾನು ಮುಗುಳ್ನಕ್ಕು ಕನಸಿನ ಲೋಕಕ್ಕೆ ಜಾರಿ ಪ್ರಕಾಶನ ನೆನಪುಗಳ ಬುತ್ತಿ ಬಿಚ್ಚಿ, ಅದು ನೀಡುವ ಹಿತವಾದ ಮೃದುಲ ಭಾವಗಳನ್ನು ಹೆಕ್ಕಿ ಸವಿಯುತ್ತಿದ್ದಳು ಪ್ರೀತಿಯ ಸವಿಯ.

ಮನದಲ್ಲಿ ನೆನೆಯುವ ಹುಡುಗ ಪ್ರಕಾಶ್, ಧಿಡೀರ್ ಎಂದು ವರುಣಾ ಇನ್‌ಬಾಕ್ಸ್ ಗೆ ಸಂದೇಶವೊಂದನ್ನು ರವಾನಿಸಿದ್ದ. ಮೊಬೈಲ್ ನಲ್ಲಿ ಬೆಳಕು ಬಿದ್ದು ತೆಗೆದುನೋಡಲು ಅದು ಪ್ರಕಾಶ್ ನ ಸಂದೇಶವಾಗಿತ್ತು. ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದ ವರುಣ ತುಂಬಾ ಸಂತಸಪಟ್ಟಿದ್ದಳು ಆಕೆಯ ಹರ್ಷೋದ್ಗಾರಕ್ಕೆ ಅಂದು ಮಿತಿ ಇರಲಿಲ್ಲ. ಪ್ರೀತಿಯ ಮೊದಲ ತುಡಿತವೋ ಏನೋ; ಆ ದಿನ ಅವರಿಬ್ಬರೂ ಬೆಳಗಿನ ೩ ಗಂಟೆಯವರೆಗೂ ಪರಸ್ಪರ ಯೋಗಕ್ಷೇಮ ವಿಚಾರಿಸುತ್ತ ಮೆಸೇಜ್ ಮಾಡುತ್ತಾ ತುಂಬಾ ಹೊತ್ತು ಹರಟಿದ್ದರು.

ಅಂದಿನಿಂದ ಗಾಢವಾಗಿ ಶುರುವಾಗಿಬಿಟ್ಟಿತ್ತು ಅವರ ಒಲವಿನ ಪಯಣ. ನೀವು ನಾವು ಎನ್ನುವ ಪದಗಳು ನೀನು ನಾನುಗಳಲ್ಲಿ ಬದಲಾವಣೆಗೊಂಡಿದ್ದವು. ದೇಹವೆರಡು ಆತ್ಮ ಒಂದೆನ್ನುವ ಭಾವ ಬಂದುಬಿಟ್ಟಿತ್ತು. ಸಾಯಂಕಾಲಕ್ಕೆ ಮೀಸಲಿರಿದ್ದ ಸಂದೇಶಗಳು ದಿನಕ್ಕೆ ಬದಲಾಗಿ ನಂತರ ಮೆಸೇಜ್ ನಿಂದ ಕರೆಗೆ ಪರಿವರ್ತನೆಯಾಗಿ ಪ್ರೇಮದ ನಿತ್ಯೋತ್ಸವ ಅವರ ಹೃದಯಗಳನ್ನು ಶೃಂಗರಿಸಿ ಒಲವಿನ ಭಾವನೆಗಳಿಗೆ ಆಹ್ವಾನ ನೀಡಿತ್ತು. ಚಿಕ್ಕಪ್ಪನ ಮನೆಗೆ ರಜೆಗೆಂದು ಬಂದಿದ್ದ ವರುಣ ತಿಂಗಳಾಗಿ ಹೋಗಿತ್ತು. ಹೊರಡುವ ಮನಸಿಲ್ಲದಿದ್ದರೂ ಓದಿನ ನಿಮಿತ್ತ ಆಕೆ ಮುಂಬೈಗೆ ತೆರಳುವ ಸಮಯ ಬಂದಿತ್ತು. ವಿಷಯ ತಿಳಿದ ಪ್ರಕಾಶ ಹೊರಡುವ ಮುನ್ನ ತನ್ನನ್ನೊಮ್ಮೆ ಭೇಟಿ ಮಾಡುವುದಾಗಿ ವರುಣಾಳಲ್ಲಿ ವಿನಮ್ರದ ನಿವೇದನೆಯೊಂದನ್ನು ಇಟ್ಟಿದ್ದನು.

ಪ್ರಕಾಶನ ಕೋರಿಕೆಯ ಮೇರೆಗೆ ವರುಣಾ ಅವನನ್ನು ಕಾಣಲೆಂದು ಹೊರಟಳು. ಅದಾಗಲೇ ಪ್ರೇಮದ ಮೊಗ್ಗು ಅರಳಿ ನಿಂತು ಸೌರಭವ ಸೂಸಿದ್ದ ಬಂಧನಕ್ಕೆ ಆ ಭೇಟಿ, ಸ್ನೇಹದಿಂದ ಅಧಿಕೃತವಾಗಿ ಪ್ರೀತಿಗೆ ಬದಲಾಗಿತ್ತು. ತನ್ನ ಪ್ರೇತಿಯನ್ನು ವ್ಯಕ್ತ ಪಡಿಸದೇ ಹೋದಲ್ಲಿ ತಾನು ಅವಳನ್ನು ಕಳೆದುಕೊಳ್ಳುತ್ತೇನೆಂಬ ಭಯದಿಂದ ಪ್ರಕಾಶ, ವರುಣಾಳಲ್ಲಿ ತನ್ನ ಪ್ರೀತಿಯನ್ನು ಹೇಳಿಕೊಳ್ಳುತ್ತಾನೆ. ಪ್ರೀತಿಯ ಹೊಳೆಯಲ್ಲಿ ಈಜಾಡಲು ತನ್ನ ಭಾವನೆಗಳೆಂಬ ಬಟ್ಟೆಯನ್ನು ಬಿಚ್ಚಿಡಲು ತುದಿಗಾಲಲ್ಲೇ ನಿಂತಿದ್ದಳೇನೋ ವರುಣಾ. ಅವನ ಮಾತುಗಳನ್ನು ಕೇಳುತ್ತಿದ್ದಂತೆಯೇ ಪ್ರಪಂಚವನ್ನೇ ಮರೆತು ಅವನ ಅಪ್ಪಿ ಮುದ್ದಾಡುತ್ತಾಳೆ.

ವರುಣಾ ಮುಂಬೈಗೆ ಹೋಗುವ ದಿನ ಆಕೆಯನ್ನು ಕಳುಹಿಸಲು ಸ್ಟೇಶನ್ ಗೆ ಬಂದಿದ್ದ ಪ್ರಕಾಶ; ಅಂದೇಕೋ ತುಂಬ ಮಂಕಾಗಿದ್ದನು. ದೂರವಾಗುತ್ತಿರುವ ನೋವಿರಬಹುದೆ? ಇರಬಹುದು. ಅದೇ ನೋವು ವರುಣಾಳ ವದನದಲ್ಲೂ ಕೂಡ ಕಾಣುತ್ತಿತ್ತು. ಆ ಒಂದು ಕ್ಷಣಕ್ಕೆ ಇಬ್ಬರಲ್ಲೂ ಮಾತಿಲ್ಲ ಕಥೆಯಿಲ್ಲ ಅದಿಲ್ಲದಿದ್ದರೂ, ಕಣ್ಣ ಭಾಷೆಯಲ್ಲಿ, ಹೃದಯ ಮಿಡಿತಗಳಲ್ಲಿನ ಭಾವನೆಗಳ ವಿನಿಮಯ ಅದೆಷ್ಟೋ ವಿಷಯಗಳನ್ನು ಅವರಿಬ್ಬರಿಗೂ ತಿಳಿಯಪಡಿಸಿತ್ತು.

ಒಲವಾದ ಪ್ರಥಮಾರ್ಧದಲ್ಲಿ ದಾರಿಯಿಂದ ದೂರವಿದ್ದರೆ ಏನಂತೆ ಹೃದಯಗಳಿಂದ ಸನಿಹವೇ ಇರುವೆವಲ್ಲ ಎಂಬ ಭಾವನೆ ಮೊದ-ಮೊದಲು ಅನ್ನಿಸಿದರೂ ಕ್ರಮೇಣ ಒಬ್ಬರೊನ್ನೊಬ್ಬರು ನೋಡಲೇ ಬೇಕೆಂಬ ಅತೀವ ಉತ್ಕಟತೆ ಇಬ್ಬರಲ್ಲೂ ಕಾಣಿಸತೊಡಗಿತು. ಅದೆಷ್ಟು ದಿನ ಮುಖ ನೋಡದೇ ಹೀಗೆಯೇ ಇರುವುದೆಂದು ಅಂದುಕೊಂಡು ವಿರಹಗಳಂತಿದ್ದ ಇಬ್ಬರೂ ಮುಖಾ–ಮುಖಿ ಭೇಟಿ ಮಾಡಿ, ಅಲ್ಲಿ ಇಲ್ಲಿ ಸುತ್ತಾಡಲು ಪ್ರಾರಂಬಿಸಿದರು. ತಿಂಗಳಿಗೊಮ್ಮೆ ಎಂಬಂತೆ ಮಹಾರಾಷ್ಟ್ರ, ಮುಂಬೈನ ಎಲ್ಲ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದಲ್ಲದೇ ಸಿನೆಮಾ, ಪಾರ್ಕು ಅಂತ ಸುತ್ತಾಡುತ್ತ ಒಲವಿನ ಉದ್ಯಾನದಲ್ಲಿ ಜೋಡಿಹಕ್ಕಿಗಳು ಯಾರ ಹಂಗಿಲ್ಲದೇ ಸ್ವಚ್ಛಂದವಾಗಿ ವಿಹರಿಸುತ್ತಿದ್ದವು.

ಸುತ್ತಾಟ ಶುರುವಾದ ಕೆಲವೇ ತಿಂಗಳುಗಳಲ್ಲಿ ವರುಣಾ ಹೊಟ್ಟೆನೋವು, ವಾಂತಿ ಭೇದಿ ಎಂದು ಆಸ್ಪತ್ರೆ ನಡೆಯುತ್ತಾಳೆ. ಎರಡು ತಿಂಗಳುಗಳಿಂದ ಮುಟ್ಟಾಗದ ವರುಣಾಳಿಗೆ ಭಯ ಗೋಚರಿಸಿದ್ದಲ್ಲದೇ ಯಾವದೋ ದುರ್ಘಟನೆಯ ಮುನ್ಸೂಚನೆಯೂ ಕಂಡಂತಾಗಿ, ಆ ದಿನ ತಾನು ಪ್ರಕಾಶನನ್ನು ತಡೆದಿದ್ದರೆ ಇಂತಹ ಅನಾಹುತ ತಪ್ಪಿಸಬಹುದಿತ್ತು, ತಾನು ಆಗುವುದಿಲ್ಲ ಅಂದಿದ್ದಕ್ಕೆ ಸಣ್ಣ ಮುಖ ಮಾಡುವುದರ ಜೊತೆಗೆ ತನ್ನೊಡನೆ ಕೋಪದಿಂದ ವರ್ತಿಸಿ ಇಗ್ನೊರ್ ಮಾಡತೊಡಗಿದ್ದ ಪ್ರಕಾಶನೊಂದಿಗೆ ನಿರಾಕರಿಸಿ ಹಠ ಸಾಧಿಸಿದರೆ; ಎಲ್ಲಿ ಅವನ ಪ್ರೀತಿಯನ್ನು ಕಳೆದುಕೊಳ್ಳುವೆನೆಂಬ ಅಭದ್ರತೆಯ ಭಯದಿಂದ ವಿರೋಧ ಮಾಡದೇ ನಿರೋಧ ಬಳಸದೇ ಆ ದಿನ ಪ್ರಕಾಶನ ಜೊತೆ ಸಾಂಗತ್ಯ ಬಯಸಿದ್ದನ್ನು ಆಸ್ಪತ್ರೆಯಲ್ಲಿ ನೆನೆದು ಬೆವತಿದ್ದ ಮುಖವನ್ನೆಲ್ಲ ಕರವಸ್ತ್ರದಿಂದ ಒರೆಸಿಕೊಳ್ಳುತ್ತ ಭಾರವಾದ ಮನ ಹೊತ್ತು ವೈದ್ಯರಲ್ಲಿಗೆ ನಡೆಯುತ್ತಾಳೆ. ಅವಳ ಅನುಮಾನ ಸರಿಯಾಗಿತ್ತು ಆಗಾಕೆ 2 ತಿಂಗಳ ಗರ್ಭಿಣಿ. ಗಾಬರಿಗೊಂಡ ವರುಣಾ 2 ದಿನಗಳ ನಂತರ ಪ್ರಿಟೆಸ್ಟ್ ರಿಪೋರ್ಟ್ ತೆಗೆದುಕೊಳ್ಳಲು ಬರುವೆನೆಂದು ಹೇಳಿ ಮನೆಯತ್ತ ಅವಸರದ ಹೆಜ್ಜೆಯನ್ನಿಟ್ಟಿದ್ದಳು.

ಎರಡನೆಯ ಬಾರಿ ವರುಣಾ ವೈದ್ಯರನ್ನು ಕಾಣಲು ಹೋದಾಗ, ವೈದ್ಯರು ಅವಳನ್ನು ಕೂಡಿಸಿ, ಸ್ನೇಹಭಾವದಿಂದ ಮಾತನಾಡಿ, ಅವಳ ಮನಸನ್ನು ಸಮತೋಲನಕ್ಕೆ ತಂದು, ನಡೆದ ವಿಷಯವನ್ನು ಮರೆಮಾಚದೇ ತನ್ನೆದುರು ಹೇಳೆಂದಾಗ ಭಯದ ಬಿಸಿಲಲಿ ವಿಲ-ವಿಲ ಒದ್ದಾಡಿದ ವರುಣಾ ಹೇಗೋ ಧೈರ್ಯ ತಂದುಕೊಂಡು ತನ್ನ ಪ್ರಿಯಕರನೊಂದಿಗೆ ದೈಹಿಕ ಸಂಬಂಧ ಇರುವುದಾಗಿ ಹೇಳುತ್ತಾಳೆ. ನಿಷ್ಠೆ ಒಬ್ಬರೊಡನೆ ಇದೆಯೇ ಎಂದು ಕೇಳಿದ ಪ್ರಶ್ನೆಗೆ ವರುಣಾ ಥಟ್ಟೆನೆ ಹೌದು ಕೇವಲ ಪ್ರಿಯಕರನೊಂದಿಗೆ ಮಾತ್ರ ಎನ್ನುತಾಳೆ.

ಕಸಿ-ವಿಸಿಗೊಂಡು ತಮ್ಮ ಗೊಂದಲದಿಂದ ಹೊರಬರದ ವೈದ್ಯರು ಆಕೆಯನ್ನು ಮತ್ತೆ ಅದೆಲ್ಲಿ ಹೋಗುತ್ತಿದ್ದೀರಿ, ಏನೆಲ್ಲಾ ಮಾಡುತ್ತಿದ್ದೀರಿ ಎನ್ನಲು; ತಾನು ತಿಂಗಳ ಕೋಣೆಯನ್ನು ತನ್ನ ಪ್ರಿಯಕರನಿಗೆ ಮೀಸಲಿಟ್ಟಿರುವುದಲ್ಲದೇ ಅವನ ಜೊತೆಯಲ್ಲಿ ಸ್ಮಾಲ್ ಟ್ರಿಪ್ ಗಳನ್ನ ಮಾಡಿರುವುದಾಗಿ, ಹೋದಲೆಲ್ಲ ಲಾಡ್ಜ್ ಮಾಡುತ್ತಿದ್ದು, ಮಲಗುವ ಮುನ್ನ ಪ್ರಕಾಶ ಮತ್ತೆ ತಾನು ಬದಾಮ್ ಹಾಲು ಕುಡಿದು ಮಲಗುತ್ತಿದ್ದೆವು ಎನ್ನುತ್ತಾಳೆ. ಅದಾದ ನಂತರ ನಿದ್ದೆಗೆ ಜಾರಿದ ತನಗೆ ಬೆಳಗಾಗಿದ್ದಷ್ಟೆ ಗೊತ್ತಿರುತ್ತಿತ್ತು ಎಂದಾಗ, ವೈದ್ಯರ ಸಂದೇಹಗಳಿಗೆ ಪುರಾವೆಗಳು ಸಿಕ್ಕಾಗಿತ್ತು. ಕಾರಣ, ವರುಣಾಳ ಟೆಸ್ಟ್ ರಿಪೋರ್ಟ್ ಹೇಳುತ್ತಿತ್ತು; ಪ್ರಕಾಶ್ ಅಲ್ಲದೇ ಬೇರೆಯವರೊಂದಿಗೂ ವರುಣಳ ದೈಹಿಕ ಸಂಬಂಧ ಇತ್ತೆಂದೆಂಬುದು; ಅಲ್ಲದೇ ವರುಣಾ ಹೆಚ್.ಐ.ವಿ ಪಾಸಿಟಿವ್ ಎನ್ನುವುದು ಕೂಡ ತಿಳಿದು ಬಂತು. ಪ್ರಕಾಶ್ ನನ್ನು ಭೇಟಿ ಮಾಡಿ ವಿಷಯ ಏನೆಂದು ತಿಳಿಯಬೇಕೆನ್ನುವಷ್ಟರಲ್ಲಿ ವರುಣಾಳಿಗೆ ಪ್ರಕಾಶ್ ಒಬ್ಬ ಸೆಕ್ಸ್ ಟ್ರೇಡರ್ ಎನ್ನುವುದು ತಿಳಿದು ಬಂತು. ಇಷ್ಟೆಲ್ಲಾ ವಿಷಯ ತಿಳಿಯುತ್ತಿದ್ದಂತೆಯೇ ಪ್ರಕಾಶ ಪತ್ತೆ ಇಲ್ಲದೇ ನಾಪತ್ತೆಯಾಗಿ ತಲೆಮರೆಸಿಕೊಳ್ಳುತ್ತಾನೆ.

ಹಾಲಿನಲ್ಲಿ ಸುಂದಾಗುವ ಮಾತ್ರೆ ಕೊಟ್ಟು ತನ್ನ ದೇಹವನ್ನು ಬೇರೆಯವರಿಗೆ ಮಾರುತ್ತಿದ್ದ ಎಂಬ ವಿಷಯ ಕೇಳುತ್ತಲೇ ವರುಣಾ ಬೆಚ್ಚಿ, ತತ್ತರಿಸಿ ಹೋಗಿದ್ದಳು. ತನ್ನ ಕೈಹಿಡಿಯುವುದಾಗಿ ಮಾತು ಕೊಟ್ಟು ಪ್ರೀತಿಯಿಂದ ಹಣೆಗೆ ಮುತ್ತಿಟ್ಟು ಮುದ್ದಿಸಿದ ಪ್ರಕಾಶನ ಯಾವ ಮಾತಿಗೂ ವಿರೋಧ ಮಾಡದೇ ಎಲ್ಲದಕ್ಕೂ ಸಮ್ಮತಿ ಇಟ್ಟು ನಂಬಿಕೆಯ ದೀಪ ಹಚ್ಚಿದ್ದ ವರುಣಾ, ಆ ಚಾಂಡಾಲನ ಮಾತೆಲ್ಲಾ ಸುಳ್ಳು ಎಂಬ ಕಟು ಸತ್ಯ ಅರಿವಾಗಿ ದಿಕ್ಕು ತೋಚದೆ ಹುಚ್ಚಿಯಂತೆ ಆಡತೊಡಗುತ್ತಾಳೆ.

ಬಾಳ ಭಾವಗೀತೆಗೆ ದುರಂತದ ಆಹ್ವಾನ ಇತ್ತು ತಾಳ ತಪ್ಪುವಂತೆ ಮಾಡಿದ್ದು ತಾನೇ ಎಂದು ಕಂಬನಿ ಮಿಡಿಯುತ್ತಾಳೆ. ಪೋಸ್ಟ್ ಟೆಸ್ಟ್ ಫಲಿತಾಂಶದಿಂದಾಗಿ ವರುಣಾ ಗ್ರೀಫ್ ಕೌನ್ಸೆಲಿಂಗ್ ಸೇರಿದಂತೆ ಮತ್ತೆ ಕೆಲವು ಕೌನ್ಸೆಲಿಂಗ್ ಗಳಿಗೆ ಒಳಗಾಗುವುದರ ಮೂಲಕ ಆಕೆಯ ಮನಸ್ಥಿತಿಯನ್ನು ಸಾಧಾರಣ ಹಂತಕ್ಕೆ ತಂದು ನಿಲ್ಲಿಸಲಾಗುತ್ತದೆ. ಎ. ಆರ್. ಟಿ ಟ್ರೀಟ್‌ಮೆಂಟ್ ತಪ್ಪದೇ ತೆಗೆದುಕೊಳ್ಳುತ್ತ, ತಿನ್ನುವ ಆಹಾರದಲ್ಲೆಲ್ಲ ನಿಯಂತ್ರಣ ಸಾಧಿಸುತ್ತಾಳೆ. ಕುದಿಸಿ ಆರಿಸಿದ ನೀರು ಕುಡಿಯುವುದು, ನಿತ್ಯ ವ್ಯಾಯಾಮಗಳೆಲ್ಲ ಆಕೆಗೆ ಅನಿವಾರ್ಯವಾಗಿ ಹೋಗುತ್ತದೆ.

ಇವತ್ತೋ ನಾಳೆಯೋ ಎಂದು ದಿನ ಎಣಿಸುತ್ತಾ ಬದುಕುತ್ತಿರುವ ವರುಣಾ ಅಪರಿಚಿತ ವ್ಯಕ್ತಿಯೊಡನೆ ಸ್ನೇಹ ಬೆಳೆಸಿದ ತನ್ನ ಮೂರ್ಖತನಕ್ಕೆ ತಾನೇ ಹೊಣೆ ಎಂದು ಹಣೆ ಚಚ್ಚಿಕೊಳ್ಳುತ್ತಾ ಅಳುತ್ತಾ ಕಾಲ ಕಳೆಯುತ್ತಾಳೆ.

ರುಕ್ಮಿಣಿ ಎನ್.

ಇದೇ ಲೇಖನವನ್ನು ನೀವು ಪಂಜುವಿನಲ್ಲಿ ಕಾಣಲು ಕ್ಲಿಕ್ಕಿಸಿ : http://www.panjumagazine.com/?p=1511

ಅಬಲೆ ಮಂಜುಳಾ

ಸಂಜೆ ಆರೂ ಮುಕ್ಕಲಾಗಿತ್ತು. ಮಂಜುಳಾಳ ಅತ್ತೆ ಟಿ.ವಿಯಲ್ಲಿ ಚರಣದಾಸಿ ಸಿರಿಯಲ್ ನೋಡುತ್ತಿದ್ದಳು. ಮಂಜುಳಾ, ಸಂಜೆಯಾಯ್ತು. ಕಸ ಗುಡಿಸಿ, ಅಂಗಳಕೆ ನೀರು ಹಾಕಿ ದೀಪ ಹಚ್ಚು ಎಂದು ಕೂಗುತ್ತಿದ್ದರು. ಆ ದೊಡ್ಡದಾದ ಧ್ವನಿ ಕೇಳಿ ಕಪ್ಪು ಮೋಡದಂತೆ ಹೆಪ್ಪುಗಟ್ಟಿದ್ದ ಮಂಜುಳಾಳ ದುಃಖದ ಕಟ್ಟೆಯೊಡೆದು ಬಿಟ್ಟಿತ್ತು. ಕಿಟಕಿಯ ಪಕ್ಕ ಕೂತು ಆ ಕಪ್ಪು ಮೋಡವನ್ನೇ ದಿಟ್ಟಿಸುತಿದ್ದ ಅವಳ ಕಣ್ಣುಗಳಿಂದ ಗಂಗೆ ಹರಿಯುತ್ತಲೇ ಇದ್ದಳು. ಗಂಟಲೆಲ್ಲ ಕಟ್ಟಿ ಹೋಗಿತ್ತು. ಕೂಗಿದರೂ ಓಗೊಡದಿರುವಷ್ಟು ಆಕೆ ಕುಗ್ಗಿ ಹೋಗಿದ್ದಳು. ಅಂತಾಹದೇನಾಗಿತ್ತು ಅವಳಿಗೆ ಅಂತೀರಾ? ಬನ್ನಿ, ನಾನಿಂದು ಅವಳ ಕಥೆ ಹೇಳ್ತೀನಿ.

ಆಕೆಯ ಹೆಸರು ಮಂಜುಳಾ ವಯಸ್ಸು 30. ಆಕೆಯ ದುರಾದೃಷ್ಟ, ಬಾಲ್ಯದಲ್ಲಿಯೇ ಅಪ್ಪ ಅಮ್ಮನನ್ನು ಕಳೆದುಕೊಂಡು ಅನಾಥಳಾದ ಮಂಜುಳಾ ಬೆಳೆದದ್ದು ಮಾವನ ಮನೆಯಲ್ಲಿ. ಎಸ್.ಎಸ್.ಎಲ್.ಸಿ ಓದಿದ ಮಂಜುಳಾ ಓದಿನಲ್ಲಿ ಆಸಕ್ತಿಯೇ ಇಲ್ಲದ ಕಾರಣ ಮುಂದೆ ಓದುವ ಗೋಜಿಗೆ ಹೋಗುವುದಿಲ್ಲ. ಆದರೆ ಆಕೆ ಒಬ್ಬ ಉತ್ತಮ ಗೃಹಿಣಿ ಆಗಬಲ್ಲಳು ಎಂಬುದರಲ್ಲಿ ಶಕ್ಯವೇ ಇರಲಿಲ್ಲ. ಮನೆಯ ಎಲ್ಲ ಕೆಲಸಗಳನ್ನು ಅಚ್ಚುಕಟ್ಟುತನದಿಂದ ನಿಭಾಯಿಸುತ್ತಾ ಜೀವನೋಪಾಯಕ್ಕೆಂದು ಹೊಲಿಗೆ ತರಬೇತಿ ಪಡೆದಿದ್ದಳು. ಒಂದೊಳ್ಳೆ ಕಡೆ ಸಂಬಂಧ ಬಂದಿದೆ ಎಂದು ಮಂಜುಳಾ ಮಾವ ಹುಡುಗನೊಬ್ಬನಿಗೆ ಅವಳನ್ನು ಗಂಟು ಹಾಕಿ ಜವಾಬ್ಧಾರಿಯಿಂದ ಕೈತೊಳೆದುಕೊಂಡು ಬಿಡುತ್ತಾನೆ.

ಎಲ್ಲ ಹುಡುಗಿಗೂ ತನ್ನ ಮದುವೆ ಆಗುವ ಹುಡುಗ ನೋಡೋಕೆ ಸ್ಮಾರ್ಟ್ ಆಗಿರಬೇಕು. ಸುರಸುಂದರಾಂಗ ಅಲ್ದೆ ಹೋದ್ರು ಅವನ ಮನಸ್ಸು ಮಾತ್ರ ಅಪ್ಪಟ ಬೆಣ್ಣೆಯಷ್ಟು ಮೃದುವಾಗಿರಬೇಕು. ತನ್ನನ್ನು ಚೆನ್ನಾಗಿ ನೋಡಿಕ್ಕೊಳ್ಳುವ ಶಾರೀರಿಕ ಹಾಗೂ ಮಾನಸಿಕ ಪ್ರಭುದ್ಧತೆ ಅವನಲ್ಲಿರಬೇಕು ಅಂತ ಬಯಸಿ ಅದೆಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೋ ಹಾಗೆಯೇ ಮಂಜುಳಾ ಕೂಡ ಬೆಟ್ಟದಷ್ಟು ಆಸೆ ಆಕಾಂಕ್ಷೆಗಳನ್ನು ಹೊತ್ತು ತಂದವಳು. ಆಡುತ್ತಾ ಬೆಳೆಯುತ್ತಾ ವಯಸ್ಸಿಗೆ ಬಂದಂತೆಲ್ಲ ಮನಸಲ್ಲಿ ಬಯಕೆಯ ಬಳ್ಳಿಗಳನ್ನು ಬೆಳೆಸಿಕೊಂಡಿ ಬಂದವಳು. ಆಕೆಯ ಬಯಕೆಯ ಬಳ್ಳಿಗೆ ಮರವಾಗಿ ಆಶ್ರಯ ನೀಡುವವನೇ ತನ್ನ ಕೈಹಿಡಿಯುವ ಗಂಡನೆಂದು ನಂಬಿರುತ್ತಾಳೆ ಮಂಜುಳಾ.

ಮದುವೆಯಾದ ಹೊಸತರದಲ್ಲಿ ಹೆಣ್ಣು ಏನೆಲ್ಲ ಇಚ್ಛಿಸುತ್ತಾಳೆ ಅದ್ರಲ್ಲೂ ತಂದೆ ತಾಯಿ ಇಲ್ಲದ ಪರದೇಸಿ ಹೆಣ್ಣುಮಗಳು ಮಂಜುಳಾ ಗಂಡನೇ ತನ್ನ ಸರ್ವಸ್ವ ಎಂದುಕೊಂಡು ಗಂಡನ ಮನೆಗೆ ಬಲಗಾಲಿಟ್ಟವಳು. ಗಂಡನ ಸನಿಹ, ಅವನು ತೋರುವ ಪ್ರೀತಿ, ಕಣ್ಣ ಭಾಷೆಯಲ್ಲಿಯೇ ಅದಲಿ ಬದಲಿಯಾಗುವ ಆ ಪ್ರೇಮ ಸಂದೇಶಗಳು, ಚೂರು ತುಂಟು ನಗೆ, ಸನ್ನೆಯಲ್ಲಿಯೆ ಕೈ ಮಾಡಿ ಕರೆಯುವ ಆ ರೀತಿ, ಅದು ನೀಡುವ ಮುದ, ಪುಳಕ ಇವೆಲ್ಲ ಒಂದು ಹೆಣ್ಣು ಮದುವೆಯಾದ ಹೊಸತರದಲ್ಲಿ ಬಯಸುವ ಸಹಜ ಬಯಕೆಗಳು.

ಮಂಜುಳಾಳದ್ದು ಕಥೆನೇ ಬೇರೆ ಇತ್ತು. ಮದುವೆಯಾದ ಒಂದು ವಾರದಲ್ಲಿಯೇ ತನ್ನ ಗಂಡ ದೊಡ್ಡ ಕುಡುಕ ಎಂದು ಆಕೆಗೆ ಗೊತ್ತಾಗುತ್ತದೆ. ಕುಡಿತದ ಪರಿಣಾಮವಾಗಿ ಮದುವೆಯಾದ ೬ ತಿಂಗಳಲ್ಲೇ ಕೆಲಸ ಕೂಡ ಕಳೆದುಕೊಂಡ ಆಕೆಯ ಗಂಡ ಬರಿಗೈ ಭಿಕಾರಿಯಾಗುತ್ತಾನೆ. ಆಗ ತಾನೇ ಹೊಸ ಬಾಳಿನ ಸಿಹಿಯ ಸವಿಬೇಕೆಂದಿದ್ದ ಮಂಜುಳಾಳ ಪುಟ್ಟ ಹೃದಯದಲ್ಲಿ ತನ್ನಿನಿಯನಿಗಾಗಿ ಕಟ್ಟಿದ್ದ ಪ್ರೀತಿಯ ತಾಜ್‌ಮೆಹಲ್ ಸದ್ದಿಲ್ಲದೇ ಕಳಚಿ ಬಿದ್ದ ಸದ್ದು ಮಾತ್ರ ಘೋರಾವಾಗಿರುತ್ತದೆ. ಆಕೆಯ ಬಯಕೆಯ ಬಳ್ಳಿ ಕಮರಿ ಕರಕಲಾಗಿ ಹೊಗುತ್ತದೆ.

ಕಂಠ ಪೂರ್ತಿ ಹೆಂಡ ಕುಡಿದು ನಗರದ ಬೀದಿಗಳಲ್ಲೋ ಇಲ್ಲ ತೆಗ್ಗುಗಳಲ್ಲೋ ಬಿದ್ದು ಹೊರಳಾಡುವ ಗಂಡನನ್ನು ಮನೆಗೆ ಕರೆ ತರುವುದೇ ಪತ್ನಿಯ ಧರ್ಮವಾಗಿರುತ್ತದೆ. ಕುಡಿದ ಅಮಲಿನಲ್ಲಿ ಆಕೆಯ ಇಚ್ಛೆ ಇಲ್ಲದಿದ್ದರೂ ಮೈಮೇಲೆ ಮೃಗದಂತೆ ಎರಗಿ ಬರುವ ಗಂಡನ ಶಾರೀರಿಕ ಬಲದ ಎದುರು ಮಂಜುಳಾಳದ್ದು ವ್ಯರ್ಥ ಪ್ರಯತ್ನವಾಗಿರುತ್ತಿತ್ತು. ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಜೀವ- ಭಾವಗಳಿಲ್ಲದ ಬೊಂಬೆಯಂತೆ ಕೇವಲ ಒಂದು ಸಂಭೋಗದ ವಸ್ತುವಾಗಿ ಬಿಡುತ್ತಾಳೆ ಮಂಜುಳಾ.

ಹೀಗೆಯೇ ಅದೆಷ್ಟು ದಿನ ಅಂತ ಬಾಳುವೆ ಮಾಡಿಯಾಳು? ಹೇಗಾದರೂ ಮಾಡಿ ಸಮಸ್ಯೆಯನ್ನು ಬಗೆಹರಿಸಲಿಕ್ಕೆ ನೋಡಿದರೆ, ವಿಧಿ ಇನ್ನೊಂದೆಡೆನೇ ಅವಳನ್ನು ಕರೆದುಕೊಂಡು ಹೋಗುತ್ತಿತ್ತು. ಸಮಸ್ಯೆ ಬಗೆಹರಿಸುವಲ್ಲಿ ಆಕೆ ಮಾಡಿದ ಪ್ರಯತ್ನಗಳೆಲ್ಲ ಸಮಸ್ಯೆಗಳನ್ನು ಮತ್ತಷ್ಟು ಬೆಳೆಸುತ್ತಾ ಹೋಗಿ ಮನೆಯ ಶಾಂತಿಯೆಲ್ಲ ನಶಿಸತೊಡಗುತ್ತದೆ.

ಗಂಡನ ಕುಡಿತದಿಂದ ಬೇಸತ್ತ ಮಂಜುಳಾ ಹೋದಾಳಾದರೂ ಎಲ್ಲಿಗೆ? ಸಮಸ್ಯೆಗಳನ್ನು ಎದುರಿಸುವಷ್ಟು ಗಂಡೆದೆ ಅವಳಿಗಿರಲಿಲ್ಲ. ತಂದೆ ತಾಯಿ ಇಲ್ಲದ ಪರದೇಶಿ ಮಗಳು ತಾನೆಂಬುದೇ ಅವಳನ್ನು ಇನ್ನಷ್ಟು ಅಸಹಾಯಕಳನ್ನಾಗಿ ಮಾಡಿತ್ತು. ತನ್ನ ಕಷ್ಟಗಳನ್ನು ಯಾರೊಟ್ಟಿಗೆ ಹಂಚಿಕೊಳ್ಳುವುದು? ಹುಟ್ಟಿನಿಂದ ತನ್ನನ್ನು ಆಡಿ ಬೆಳೆಸಿದ ಮಾವನಿಗೆ ಇನ್ನೂ ಕಷ್ಟ ಕೊಡಲು ಒಪ್ಪದ ಹುಡುಗಿ ತಾನು ಅಬಲೆ ಎಂಬುದನ್ನು ಒಪ್ಪಿಕೊಂಡು ತನ್ನ ಬದುಕಿನ ಜೊತೆ ಒಪ್ಪಂದ ಎಂಬಂತೆ ಏನಾದರೂ ಆಗಲಿ ಗಂಡನ ಮನೆಯಲ್ಲದೆ ತನಗೆ ಬೇರೆ ಗತಿ ಇಲ್ಲ ಎಂಬ ಹಂತಕ್ಕೆ ಬಂದು ಇದ್ದ ಸ್ಥಿತಿಯೊಂದಿಗೆ ಒಗ್ಗಿಕೊಂಡೇ ಜೀವನ ನಡೆಸಲು ಶುರು ಮಾಡುತ್ತಾಳೆ.

ಇಹಲೋಕ ತ್ಯಜಿಸಿದ್ದ ಮಂಜುಳಾಳ ಮಾವ ಸರ್ವಿಸ್ ಮಾಡುತ್ತಿದ್ದಾಗಲೇ ಕಟ್ಟಿಸಿದ್ದ ದೊಡ್ಡದಾದ ಮನೆ ಇರುವುದಲ್ಲದೇ ಮಾವನ ಅಭಯ ಹಸ್ತ ಎನ್ನುವಂತೆ ಒಂದಷ್ಟು ಪಿಂಚಣಿ ಅತ್ತೆಯ ಕೈ ಸೇರುತ್ತಿತ್ತು. ಸಣ್ಣ ಪುಟ್ಟ ಸಂತೆ, ಕಾಳು ಕಡಿ ಸೇರಿದಂತೆ ಮನೆಯ ಎಲ್ಲ ಕಾರೋಬಾರನ್ನು ಮಂಜುಳಾಳ ಅತ್ತೆಯೇ ನೋಡಿಕೊಳ್ಳುತ್ತಾರೆ. ಒಂದರ್ಥದಲ್ಲಿ ಹಣಕಾಸಿನ ಎಲ್ಲ ವಿಷಯಗಳು ಅವರ ಹಿಡಿತದಲ್ಲಿಯೇ ಇರುತ್ತವೆ. ಹೀಗಾಗಿ ಮಂಜುಳಾಳ ಅತ್ತೆ ಅವಶ್ಯಕತೆಗಿಂತ ತೀರಾ ಕಡಿಮೆ ಎನ್ನುವಷ್ಟು ದುಡ್ಡಿನಲ್ಲಿ ಮನೆ ನಿರ್ವಹಣೆ ಮಾಡಿ ತನ್ನ ಖರ್ಚಿಗೊಂದಿಷ್ಟು ಇಟ್ಟುಕೊಂಡು ಮಿಕ್ಕ ದುಡ್ಡನ್ನೆಲ್ಲ ಇದ್ದೂರಲ್ಲಿಯೇ ಮದುವೆ ಮಾಡಿ ಕೊಟ್ಟಿದ್ದ ತನ್ನ ಹಿರಿ ಮಗಳಿಗೆ ಬಟ್ಟೆ ಒಡವೆ ಅಂತ ಹಣ ವ್ಯಯಿಸುತ್ತ ಬಂದಿರುತ್ತಾಳೆ. ಆದರೆ ಸೊಸೆಗೆ ಮಾತ್ರ ಅದರಲ್ಲಿ ಹಕ್ಕಿಲ್ಲ. ಅಂದರೆ ಮಂಜುಳಾ ಆಗಲಿ ಮಂಜುಳಾ ಮಗ ಕಿರಣ್ ಆಗಲಿ ಖಾಯಿಲೆ ಬಿದ್ದರೆ ಆಕೆ ತನ್ನ ಸ್ವಂತ ದುಡಿದ ದುಡ್ಡಿನಲ್ಲಿಯೇ ದವಾಖಾನೆಯ ಖರ್ಚು ವೆಚ್ಚವನ್ನು ನೋಡಿಕೊಳ್ಳಬೇಕು.

ಮಂಜುಳಾಳ ಗಂಡನಂತೂ ಕೆಲಸವಿಲ್ಲದ ದಂಡಪಿಂಡ. ಎಂತೆಂಥ ಡಿಗ್ರೀ ಮಾಡಿದವರೇ ಡಿಗ್ರೀಗೆ ತಕ್ಕ ಕೆಲಸವಿಲ್ಲದೆ ಗೋಳಾಡುವ ಈ ಯುಗದಲ್ಲಿ ಬಿ.ಎ ಕೂಡ ಕಂಪ್ಲೀಟ್ ಮಾಡದವನಿಗೆ ಮೇಲಾಗಿ ಕುಡಿದ ಅಮಲಿನಲ್ಲಂತೂ ಅವಾಚ್ಯ ಬೈಗುಳಗಳನ್ನೇ ಧಾರ್ಮಿಕ ಶ್ಲೋಕಗಳೆಂಬಂತೆ ಉಚ್ಛರಿಸುವ ಅವನ ಮಾತುಗಳಿಗೆ ಕೆಲಸ ಕೊಡಲು ಯಾರೂ ಮುಂದಾಗುತ್ತಿರಲಿಲ್ಲ. ಅಪ್ಪಿತಪ್ಪಿ ಯಾರದಾದರೂ ಮನೆಯ ಭಿಟ್ಟಿ ಕೆಲಸ ಮಾಡಿ ಐವತ್ತೋ ನೂರೋ ಕೊಟ್ಟರೆ ಅದೂ ಕೂಡ ಸಾರಾಯಿ ಅಂಗಡಿಯ ಹಣದ ಪೆಟ್ಟಿಗೆಯನ್ನು ತಪ್ಪದೆ ಸೇರುತ್ತಿತ್ತು.

ತಾನೊಬ್ಬ ಸಾಲದೆಂಬಂತೆ ಕುಡುಕನಿಗೆ ಮಹಾ ಕುಡುಕನ ಸಂಗ ಬೇರೆ ಇರುತ್ತದೆ. ಅವನ ಜೊತೆ ಸೇರಿ ಮನೆಯ ಟೆರೇಸ್ ಮೇಲೆ ರಾತ್ರಿಯ ಎರಡೇನೂ ಮೂರೇನೂ ಅದ್ಯಾವುದರ ಹಂಗಿಲ್ಲದೆ ಕುಡಿದು ಎಲ್ಲೊಂದರಲ್ಲಿ ವಾಂತಿ ಮಾಡಿಕೊಂಡು ಜೋರಾಗಿ ಹರಟೆ ಹೊಡೆಯುದು ಈ ಕುಡುಕ ಮಹಾಶಯರ ಕಾರ್ಯವಾಗಿರುತ್ತಿತ್ತು. ಅಕ್ಕಪಕ್ಕದ ಜನ ಈ ಕಿರುಕುಳ ತಾಳದೆ, ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಕೊಟ್ಟ ಹಾಗೆ ಮಂಜುಳಾ ಗಂಡ ಮಾಡುವ ಅವಾಂತರಕ್ಕೆ ಮಂಜುಳಾಗೆ ಟೀಕೆ ಟಿಪ್ಪಣಿ ಹೇಳುತ್ತಿದ್ದರು. ಒಟ್ಟಿನಲ್ಲಿ ಗಲ್ಲಿಯಲ್ಲಿರುವ ಎಲ್ಲ ಜನರು ಕಟ್ಟೆಗೆ ಕೂತು ಮಾತನಾಡಿಕೊಳ್ಳಲು ಮಂಜುಳಾ ಸಂಸಾರ ಒಂದು ಗ್ರಾಸವಾಗಿರುತ್ತಿತ್ತು.

ನೋಡಲಿಕ್ಕಷ್ಟೆ ದೊಡ್ಡದಾದ ಮನೆ, ಶಹರಿನ ಜೀವನ ಮಂಜುಳಾಳದ್ದು. ಆದರೆ ಯಾರ ಮನೆಗೂ ಆಸರಿಕೆ ಬೀಸರಿಕೆ ಎಂದು ಹೋಗುವಂತಿಲ್ಲ. ಅಕ್ಕಪಕ್ಕದವರು ಮಂಜುಳಾ ಮನೆಗೆ ಹೆಜ್ಜೆ ಇಡುವುದಕ್ಕೂ ಭಯ ಪಡುತ್ತಿದ್ದರು. ಕಾರಣ, ಆಕೆಯ ಗಂಡನಿಂದ ಅದೆಂಥ ಬೈಗುಳಗಳು ಹೊರ ಬೀಳುತ್ತಾವೆಯೋ ಏನೋ ಎಂಬ ಭಯ ಅವರಲ್ಲಿರುತ್ತಿತ್ತು. ಕೆಲವೊಮ್ಮೆ ಜ್ಞಾನೋದಯವಾಗಿದೆ ಎಂಬಂತೆ ಮಂಜುಳಾಳ ಗಂಡ, ತನ್ನಿಂದ ಬೈಗುಳ ತಿಂದವರ ಕಾಲಿಗೆ ಬಿದ್ದು ಎಲ್ಲರಿಗೂ ಮುಜುಗರ ತಂದು ಬಿಡುತ್ತಿದ್ದ. ಅಲ್ಲದೇ, ಸಂಬಂಧಿಕರಲ್ಲಿ, ಆಪ್ತರಲ್ಲಿ ದುಡ್ಡಿಗಾಗಿ ಕೈ ದುಡ್ಡಿಗಾಗಿ ಕೈ ಚಾಚುತ್ತಿದ್ದ. ಗಂಡನ ಇಂತಹ ವರ್ತನೆಯಿಂದ ಮಂಜುಳಾ ಎಲ್ಲಿಯೂ ಹೆಮ್ಮೆಯಿಂದ ತಲೆಯೆತ್ತಿ ನಡೆಯದಂತ ಪರಿಸ್ಥಿತಿಯನ್ನು ತಂದೊಗಿಸಿದ್ದ ಮಂಜುಳಾಳ ಗಂಡ.

ಕಿರಣ ಮಂಜುಳಾಳ ಒಂದೇ ಒಂದು ವಂಶದ ಕುಡಿ. ದೇವರು ಮತ್ತೊಂದು ಮಗುವನ್ನು ಅವಳಿಗೆ ಕರುಣಿಸಲೇ ಇಲ್ಲ. ೯ ವರುಷದ ಕಿರಣ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ. ಮಗನಿಂದಲೇ ತನ್ನ ಬಾಳು ಹಸನಾಗುವುದು ಎನ್ನುವ ನಂಬಿಕೆ ಅವಳಿಗಿತ್ತು. ಮಗನೆ ತನ್ನ ಬಾಳಿನ ಆಶಾಕಿರಣ ಎಂದು ಮಗನ ಮುಖ ನೋಡುತ್ತಲೇ ಬಾಳ ನೌಕೆಯನ್ನು ನೂಕುತ್ತಾ ಬಂದಿದ್ದಳು. ಮನೆಯ ಕೆಲಸವನ್ನೆಲ್ಲಾ ಮುಗಿಸಿದ ನಂತರ ಹೊಲಿಗೆ ಕೆಲಸ ಮಾಡುತ್ತಾ ಮಗನ ಉಜ್ವಲ ಭವಿಷ್ಯಕ್ಕೆಂದು ಹಣ ಕೂಡಿಡುತ್ತಿದ್ದಳು. ಆ ಬಡ ಜೀವದ ಸಂಪಾದನೆಯ ಮೇಲೂ ಗಂಡನ ಹದ್ದಿನ ಕಣ್ಣು ಬೀಳದೆ ಇರುತ್ತಿರಲಿಲ್ಲ. ಆಗಾಗಾಗ ಗಂಡ ಹೆಂಡತಿಯ ಮದ್ಯ ಜಗಳ ಆಗುತ್ತಲೇ ಇರುತ್ತಿತ್ತು.

ಇಂತಹ ಭಯಾನಕ ಪರಿಸ್ಥಿತಿಯಲ್ಲಿ ಅವರ ಮಗನ (ಕಿರಣ) ಬೆಳವಣಿಗೆಯಾಗುತ್ತಿತ್ತು. ಕುಡುಕ ಅಪ್ಪನ ಪರಿಸ್ಥಿತಿ, ದಿನ ಬೆಳಗಾದರೆ ಕಣ್ಣೀರಲ್ಲೇ ಕೈ ತೊಳೆಯುವ ಅಮ್ಮ, ತಿಂದುಂಡು ಮಲಗುವ ಹೊತ್ತಿನಲ್ಲಿ ಅಪ್ಪ-ಅಮ್ಮನ ಜಗಳ ಇನ್ನೊಂದೆಡೆ ತನಗೂ ಮನೆಗೂ ಸಂಬಂಧವೇ ಇಲ್ಲವೆಂಬಂತೆ ಇರುವ ಕಿರಣನ ಅಜ್ಜಿ ಎಲ್ಲವೂ ಕಿರಣನ ಬಾಳಿನಲ್ಲಿ ಬೇರೊಂದು ವಾತಾವರಣವನ್ನೇ ಸೃಷ್ಟಿಸಿತ್ತು.

ಎಳೆಯ-ಗೆಳೆಯರ ಜೊತೆ ಕೂಡಿ ಆಡಿ ನಲಿಯುವ ವಯಸ್ಸಿನಲ್ಲಿ ಅಪ್ಪನ ಅವಾಚ್ಯ ಬೈಗುಳ, ಅಸಹಾಯಕ ಅಮ್ಮನ ಪರಿಸ್ಥಿತಿ ಎಳೆ ವಯಸ್ಸಿನ ಮೇಲೆ ಗಾಢವಾದ ಪ್ರಭಾವ ಬೀರಿದ ಪರಿಣಾಮವಾಗಿ ಮಗು ತನ್ನ ವಯಸ್ಸಿಗೂ ಮೀರಿ ವಿವೇಕತನ ಮೆರೆಯುತ್ತಿತ್ತಾದರೂ ಆಗಾಗ ಒಬ್ಬನೇ ಮೂಲೆಯಲ್ಲಿ ಕುಳಿತು ಬೆಚ್ಚಿ ಬೀಳುತ್ತಿದ್ದ. ಬೇರೆಯವರ ಮನೆಗೆ ಹೋದರೆ ಮನೆಯಲ್ಲಾಗುವ ಜಗಳದ ಬಗ್ಗೆ ಕೇಳುವರೆಂದು ಎಲ್ಲಿಯೂ ಹೋಗದೆ ಮನೆಯಲ್ಲಿಯೇ ತಾನಾಯಿತು ತನ್ನ ಮನೆಗೆಲಸವಾಯಿತು (ಅಭ್ಯಾಸ) ಎಂದು ಎಲ್ಲವನ್ನೂ ಮರೆತು ಏನೂ ನಡದೇ ಇಲ್ಲ ಎನ್ನುವಂತೆ ಇರುತ್ತಿದ್ದ. ಮೇಲಿಂದ ಮೇಲೆ ಘಟಿಸುವ ಇಂತಹ ಘಟನೆಗಳಿಂದ ಮಗನ ಮೇಲೆ ದುಷ್ಪರಿಣಾಮ ಬೀರದಿರಲಿ ಅಂತ ಮಗನನ್ನು ತಬ್ಬಿ ಅಳುತ್ತಿದ್ದಳು ಮಂಜುಳಾ.

ಒಂದಿನ, ಮದ್ಯ ಸೇವನೆಯ ದಾಸನಾಗಿ ಹೋಗಿದ್ದ ಮಂಜುಳಾಳ ಗಂಡ ತನಗೆ ದುಡ್ಡು ಕೊಡು ಎಂದು ಪೀಡಿಸಿದ್ದ. ಮಂಜುಳಾ ಕೊಡುವುದಿಲ್ಲವೆಂದು ಖಡಾ- ಖಂಡಿತಾವಾಗಿ ನುಡಿದಾಗ ದೊಡ್ಡ ಜಗಳವನ್ನೇ ಮಾಡಿದ್ದ. ಇವರು ಕೊಡುವುದಿಲ್ಲವೆಂದು ತಿಳಿದು ತನ್ನ ತಾಯಿಯನ್ನು, ಮಗನನ್ನು ಹೆಂಡತಿಯನ್ನು ನೆಲದ ಮೇಲೆ ಕೆಡವಿ ಕುತ್ತಿಗೆಗೆ ಕೊಡಲಿ ಹಿಡಿದು ನಿಂತು ಎಲ್ಲರ ಮನಸ್ಸಿನ ಮೇಲೆ ಭಯದ ಬರೆಯನ್ನೇ ಎಳೆದುಬಿಟ್ಟಿದ್ದ. ಇಷ್ಟು ದಿನ ವಾದಕ್ಕೆ, ಜಗಳಕ್ಕೆ, ಬೈಗುಳಕ್ಕೆ ಮೀಸಲಾಗಿದ್ದ ಅವನ ವರ್ತನೆ ಕೊಡಲಿ ಹಿಡಿದು ಕೊಲ್ಲುವ ಹಂತಕ್ಕೆ ಹೋಗಿದ್ದು ಸಹಜವಾಗಿಯೇ ಅತ್ತೆ ಸೊಸೆಯಲ್ಲಿ ಭಯವನ್ನು ಸೃಷ್ಟಿ ಮಾಡಿತ್ತು. ಮಗ ಹದ್ದುಮೀರಿ ತಪ್ಪು ಮಾಡುತ್ತಿರುವನೆಂದು ಮಂಜುಳಾಳ ಅತ್ತೆ ಏನೋ ಒಂದಿಷ್ಟು ತಲೆ ಓಡಿಸಿ ಮಗನ ವಿರುದ್ದ ಆರಕ್ಷರ ಠಾಣೆಯಲ್ಲಿ ದೂರು ನೀಡಿ ಬಂದಿದ್ದಳು. ವಿಷಯ ತಿಳಿದ ಪೊಲೀಸರು ಮಂಜುಳಾಳ ಗಂಡನನ್ನು ಠಾಣೆಗೆ ಎಳೆದುಕೊಂಡು ಹೋಗಿದ್ದರು.

ಗತಿಸಿದ ಕಹಿ ಘಟನೆಯನ್ನೆಲ್ಲ ನೆನೆದು ಒಂಟಿಯಾಗಿದ್ದ ಮಂಜುಳಾ ಸಂಜೆಯ ಕಪ್ಪು ಮೋಡವನ್ನೇ ನೋಡುತ್ತಾ ದುಃಖಿಸುತ್ತಿದ್ದಳು…

ಇದೇ ಲೇಖನವನ್ನು ನೀವು ಪಂಜುವಿನಲ್ಲಿ ಕಾಣಲು ಕ್ಲಿಕ್ಕಿಸಿ http://www.panjumagazine.com/?p=3277