ಸಂಗ್ರಹಗಳು

ಬಾಗಿಲು ಬಾರಿಸಲಿಲ್ಲ
ಅನುಮತಿ ಪಡೆಯಲಿಲ್ಲ
ಗೂಳಿಯಂಗೆ ನುಗ್ಗಿ
ಕೆನ್ನೆ ರಂಗೇರಿಸಿದನಲ್ಲ
ಪಡುವಣದ ಪೋಲಿ!

Advertisements

1) ನೂರಾರು ಕನಸುಗಳು ಈ ಪುಟ್ಟ ಕಂಗಳಲಿ
ಒಮ್ಮೆ ಕರಗುತ್ತವೆ ಮತ್ತೊಮ್ಮೆ ಬೆಳಗುತ್ತವೆ!

2) ದನಿಯಾಗು ಬಾ ಒಮ್ಮೆ ಹೃದಯದ ಮಾತಿಗೆ
ಅಂತಾದರೂ ನೀ ಅರಿಯುವೆ ಹೃದಯದ ಭಾವನೆಗಳ!

3) ವಸಂತಕಾಲ ನನಗಾಗ ಎದೆಯ ಮಾಮರ ಚಿಗುರುವಾಗ
ಶರತ್ಕಾಲ ನನಗಾಗ ಒಲವ ಮಹಾಪೂರ ನೀ ಹರಿಸುವಾಗ!

4) ಗಾಳಿ ನೀರಿದ್ದರಷ್ಟೇ ಸಾಲದು ನನಗೆ ಬದುಕ ನಡೆಸಲು
ನಿನ್ನ ಒಲವಿನ ತುತ್ತೂ ಬೇಕು!

5) ಕಾಯಿಸುವನವ ಕಾಡಿಸುವನವ
ಕಾಯಿಸಿ ಕಾಡಿಸಿ ಒಲವ ಮಳೆ ಹರಿಸುವವನೂ ಅವ!

6) ನಯನದಿ ತುಂಬಿಕೊಳ್ಳಬೇಕೀಗ ನಿನ್ನನ್ನು ಆದರೆ,
ಕಂಗಳಲ್ಲಿ ಹಾಳಾದ ನಾಚಿಕೆಯೇ ತುಂಬಿ ಹೋಗಿದೆ!

7) ಸಾಗರಕ್ಕೆ ಹೋಲಿಸಲೇ ನನ್ನೀ ಪ್ರೀತಿಯ
ಬೇಡ ಬಿಡು
ನನ್ನ ಪ್ರೀತಿ ಯಾವ ಹೋಲಿಕೆಗೂ ನಿಲುಕದು!

8) ತಂಗಾಳಿ ನೀನು
ನಾ ನಿನ್ನ ನೆನೆಯುವ ಪ್ರತಿಕ್ಷಣ!

9) ವಸುಂಧರೆ ನಾನಾಗುವೆ
ಬಾನಾಗಿ ನೀ ನನ್ನ ಅವರಿಸುವೆಯಾದರೆ!

10) ದೂರವಿದ್ದಾಗ ಸನಿಹ ಇದ್ದವನವ
ಈಗ ಸನಿಹವಿದ್ದರೂ ನಿಲುಕದಷ್ಟು ದೂರ ಇರುವನವ!

11) ಘೆ ಘೆ ರೇ ಘೆ ಎಂದು ಕೊಡಲೊಲ್ಲೆನು ನನ್ನ ಹೃದಯವ
ತಾನಾಗಿಯೇ ಬಂದು ನಿಲ್ಲಲಿ ಹೃದಯದಲಿ
ಬೇಕೆಂದರೆ ಜಾಗ ಮಾಡಿ ಕೊಡುವೆನು!

12) ಲೋಕವೇ ಇಲ್ಲ ಪ್ರೀತಿಯ ಹೊರತು
ಪ್ರೀತಿಯಲಿ ಪ್ರತಿ ದಿನ ಹೊಸತು!

ರುಕ್ಮಿಣಿ ಎನ್.

ಜೇನ ಹನಿ

೧. ಕನಸು

ನಿದಿರೆಗಷ್ಟೇ ಸೀಮಿತವಾಗದಿರು
ಓ ನನ್ನ ಕನಸೆ
ನಿನಗಾಗಿ ಇಡೀ ಬದುಕೇ
ಹಾತೊರೆಯುತ್ತಿರುವಾಗ.

೨. ನೆಪ

ಮಳೆ ಚಳಿಗಳ ನೆಪಗಳೇ ಸಾಕು
ಹಾಳಾದ ನೆಗಡಿಗೆ
ನನ್ನ ಅರಸಿ ಆಲಂಗಿಸಲು.

೩. ಮೀನು

ಅವನ ವಾರೆನೋಟದ ಬಲೆಗೆ
ಸಿಲುಕಿಬಿದ್ದ ಅವಳೀಗ ವಿಲವಿಲನೆ
ಹೊರಳಾಡುತಿರುವ ಮೀನು.

೪. ಹನಿ ಹನಿ

ಜೊತೆ ನೀನಿರದ ನನ್ನ
ಮನದ ತುಮುಲಗಳೇ ಇಂದು
ಹನಿ ಹನಿಯಾಗಿ ಜಿನುಗುತಿವೆ ಗೆಳೆಯ.

ರುಕ್ಮಿಣಿ ಎನ್.