ಸಂಗ್ರಹಗಳು

ಅಪರೂಪಕ್ಕೊಂದ್ ಮದ್ವಿಗಿ ಹೋಗಿದ್ನಿರಿ ಭಾಗ-೩

ಮನಸಿಗೆ ಹೌಸಿ ತರು ಮಲ್ನಾಡ್ ಸೀಮಿ ಅಲ್ಲ ಬಟ್ಟಾ ಬಯಲ್ ಸೀಮಿ ರೀ ನಮ್ದು. ದಾರಿ ಆಚಿಕ್-ಇಚಿಕ್ ಪೀಕ್ ಜಾಲಿ ಗಿಡಗೋಳ್, ಅಲ್ಲೆಟ್ ಇಲ್ಲೆಟ್ ಹಸಿ ಬಿಸಿ ಬೆಳದ್ ನಿಂತ ಬಂಬಲಕ್ಕಿ, ಹಂಗ ಬಂದಕ್ಯಾಸ್ ಸೊಡ್ಡನ್ ಮಕಕ್ಕ ಬಡದ್ ನೆತ್ತಿ ಸುಟ್ಟ ಹೋಗ್ತೈತೆನೋ ಅನ್ನು ಸುಡು-ಸುಡು ಬಿಸಲ್. ಕೆಂಡ್ ಉಡ್ಯಾಗಿಟ್ಕೊಂಡ್ ಬೀಸೂ ಬಿರುಗಾಳಿ, ಉರಿ ಉರಿ ಝಳ. ಗಾಳಿ ಪದರಿನ್ಯಾಗ್ ಕಟ್ಕೊಂಡ್ ಬರು ಹಾಳ್ ಮಣ್ಣ ಮಕದ ಮ್ಯಾಲ್ ಮನಿ ಮಾಡಿ ಕುಂತ್ ಬಿಡ್ತೈತಿ.

ಟ್ರಕ್ಕಿನ್ ಮೂರು ದಂಡಿಗಿ ಗಂಡಸರ ನಿಂತಿದ್ರು. ಒಂದು ಮೂಲ್ಯಾಗ್ ಮದಿ ಮಗಳನ ಕುಂದಿರಿಸಿದ್ರು. ರಂವ ರಂವ ಬಿಸಲಾಗ್ ಸೋಬಾನಿ ಪದ ಸುರು ಮಾಡಿದ್ರು ನಮ್ಮ ಗೌರಮ್ಮತ್ತಿ, ಸಾಬವ್ವ, ಶಾಂತವ್ವ, ಲಸಮವ್ವ. ಇಬ್ರು ಮುಂದ್ ಮುಂದ್ ಹಾಡಿದ್ರ, ಇಬ್ರು ಹಿಂದಿಂದ “ಸೋ ನಿಂಗ” ಅಂತ ಅನ್ನವರ. ಹಾಡ್ ಕೇಳ್ಕೊಂತ ಹಾಂಗ ನನ್ನ ಕಣ್ಣ ತನ್ಯಾಡೂ ಕೈ ತುಂಬುವಾಂಗ ಹಚ್ಚ್ ಹಸರ ಬಳಿ ಉಡ್ಕೊಂಡ್ ನಡು ನಡು ಬಂಗಾರದ್ ಪಾಟ್ಲಿ ಹಾಕೊಂಡಿದ್ದ ಮದಿಮಗಳ ಕೈ ಮ್ಯಾಲ್ ಬಿದ್ದು. ಹಾಂಗ್ ನೋಡುವಾಗ್ ಮತ್ತ ನನ್ನ ತಲಿ ನನ್ನ ಇನ್ನಷ್ಟ್ ಒಳಗ್ ತಗೊಂದ್ ಹೋತು. ಹುಡುಗೀಗಿ ಇನ್ನೂ ಹದ್ನೆಂಟು ದಾಟಿಲ್ಲ ೧೪ ವರಸಿನ್ಯಾಕಿ ಹೆಂಗ್ ಸಂಸಾರ ಮಾಡ್ತಾಳ್ ಆಕೀ ಅಂತ. ಅದ್ ಒತಾಟಿ ಇರ್ಲಿ ಇಕಿನ್ ಹೀರ್ಯಾ ಆಗಾಂವ್ ಎಷ್ಟ್ ವರ್ಸನ್ಯಾವ್ ಇರ್ಬೇಕ್ ಅಂತೇಳಿ ಚಿಂತಿ ಶುರು ಆತ್ ನಂಗ್. ಯಾಕಂದ್ರ, ಶಾಂಯವಾಯಿ ಮಗ ನಮ್ಮ ಸಣ್ಣಪ್ಪ ಚೆನ್ನಪ್ಪಗ ಅವರಕ್ಕ ಅಂದ್ರ ನಮ್ಮ ಗೌರವ್ವತ್ತಿ ಮಗಳನ ತಗೊಂಡಾರ. ಆ ಹುಡುಗಿ ಭಾಳ ಸಣ್ಣದ ಇತ್ತ. ಖರ್ಚಿನ್ಯಾಗ್ ಖರ್ಚ ಹೊಕ್ಕೈತಿ. ಎಲ್ಲಿ ಹೊಳ್ಳೆ ಮುಳ್ಳೇ ಖರ್ಚ್ ಮಾಡುದ ಅಂತ ಒಂದ ಚಪ್ಪರದಾಗ ಇಬ್ಬರ ಕಾಕಾಗೋಳಿಗೆ ಅಕ್ಕಿ ಕಾಳ ಒಗ್ದಿದ್ವಿ.

ಈಗ ಮೂವತ್ತರ ಗಡಿ ದಾಟೀತ್ ನಮ್ಮ ಚೆನ್ನಪ್ಪ ಕಾಕಾಗ. ೧೨ ವರ್ಷದ್ ಹುಡುಗಿ ಇನ್ನ ಮೈ ನೆರಿವಲ್ಲದು ಅಂತ ಅಕೀ ಅಪ್ಪ-ಅವ್ವಗ ಹುಡುಗೀದ ಚಿಂತಿ. ತಿಂದುಂಡ್ ದುಂಡಗ ಮೈ ಬೆಳೆಸ್ಲಿ ಅಂತ ಮಗಳಿಗಿ ಏನ ಬೇಕ್ ಅದನ್ ತಿನಿಸಿ ತುಪ್ಪದಾಗ್ ಕೈ ತೋಳಿಸಿ, ಅಂಗೈ ಮ್ಯಾಲ್ ನಡಿಸಿ, ಕಣ್ಣ ರೆಪ್ಪ್ಯಾಗ್ ಮುಚ್ಚಿಟ್ಟ ಬೆಳಸಿದ್ರೂ ಹುಡುಗಿ ಬೆಳದಿಲ್ಲ.

ಅಕಡಿ ನಮ್ಮ ಚೆನ್ನಪ್ಪ ಕಾಕಾ ವಾರಿಗೆವರೆಲ್ಲ ಯಾಡ್ಯಾಡ ಮಕ್ಕ್ಳಿಗೆ ತಂದಿ ಅನಿಸ್ಕೊಂಡ್ರ; ನನ್ನಾಕಿ ಮಾತ್ರ ಇನ್ನ ತವರ ಮನ್ಯಾಗ್ ಕುಂತಾಳ ಅಂತ ಮಕ ಬ್ಯಾರಿ ಗಡಗಿ ಮಾಡ್ಕೊಂಡ ಕುಂದ್ರತಾನ್. ನಮ್ಮಾಯಿ ಮುತ್ಯಾನ ಕೂಡ ಜಗಳಾನೂ ಮಾಡ್ತಾನ್! ಒಂದೊಂದ್ಸಲ ಕಳ್ಳಭಟ್ಟಿ ಕಳ್ಳ ವ್ಯಾಪರ್ ಮಾಡ್ತಾಳಲ್ಲ ಆ ಲಮಾನ್ಯಾರ್ ಲಸಮವ್ವ! ಅಕೀ ಮನೀಗಿ ಹೋಗಿ ಒಂದ್ ನಾಲ್ಕೈದ್ ದಾರು ಪಾಕೀಟ್ ಕುಡದ್ಕ್ಯಾಸ ಜೋಲಿ ತಪ್ಪಿ ಹೊಯ್ಡ್ಯಾಡ್ಕೋಂತ್ ಮಂದಿ ಅನ್ನದ ಮಕ್ಳ ಅನ್ನದ ಸರೂ ರಾತ್ರ್ಯಾಗ್ (ಮಧ್ಯ ರಾತ್ರಿ) ಸಂದಿ-ಗೊಂದಿ ನೋಡದ್ ಮೂಲಿ ಕಲ್ಲಿಗಿ ಅಲ್ಲೆಟ್ ಇಲ್ಲೆಟ್ ತಲಿ ಬಡಿಸ್ಕೋಂತ್, ಅಖಂಡಪ್ಪ ಕಾಕಾನ ಕಟ್ಟಿ ಮ್ಯಾಲಟ್ ಹೊಳ್ಳ್ಯಾಡಿ ಜಟ್ಟೆಪ್ಪಗೋಳ್ ಧರೆಪ್ಪ ಕಾಕಾನ ಮನಿ ಕಟ್ಟಿ ಮ್ಯಾಲ್ ಕುಂತ್, ಊರ್ ಮಂದಿ ಹೌ ಹಾರಿ ಏಳುವಾಂಗ್ ಚೀರ್ಯಾಡ್ತಾನ. ಆಮ್ಯಾಕ್ ಹೆಣ್ಣ್ ಕೊಟ್ಟ ಅಕ್ಕನ ಮನಿ ಅಂಗಳದಾಗ್ ನಿಂತ್ ಎಲ್ಲಾರಿಗೂ ಸಿಕ್ ಸಿಕ್ಕಂಗ್ ಬಾಯಿಗಿ ಬಂದಂಗ್ ಅಂತಾನ.

ಮಾರಿ ಮ್ಯಾಗ್ ಬಿಸಲ್ ಬೀಳು ಮಟಾ ಬಿದ್ದ್ ಉಳ್ಯಾಡ್ತಾನ್. ಹೊಲ-ಮನಿ ಚಿಂತಿ ಬಿಟ್ಟ್ ಗುಡಿ-ಗುಂಡಾರ ಇಸ್ಪೀಟ ಅದಿದ ಅನ್ಕೋಂತ ಕಾಲಾ ಕಳ್ಯಾಕ್ ಸುರು ಮಾಡಿದ್ ನಮ್ಮ ಚೆನ್ನಪ್ಪ ಕಾಕಾ. ಯಾಡೂ ಮನ್ಯಾಗ್ ಇವನ ಚಿಂತ್ಯಾಗ್ ಮನಸಿಗಿ ಶಾಂತಿ ಅನ್ನುದ್ ಇರಾಕಿಲ್ಲ. ಕಾಕಾ ಅಲ್ಲಿ ಇಲ್ಲಿ ಓಡ್ಯಾಡುದ್ ನೋಡಿಕ್ಯಾಸ್ ಎಲ್ಲಿ ಚೆನ್ನಪ್ಪ ಯಾರದರ ಹೆಂಗಸಿನ ಕೂಡ ಗೆಳೆತನ ಇಟ್ಕೊಂಡ ಗಿಟ್ಕೊಂಡಾನ ಅಂತ ಶಂಕಿ ಬ್ಯಾರಿ ಸುರು ಆತು ನಮ್ಮಾಯಿ ಮುತ್ಯಾಗ್. ಆ ಚಿತ್ರ ನನ್ನ ಕಣ್ಣ ಮುಂದ್ ಕಟ್ಟಿದಂಗ್ ಆಗಿತ್ತ. ಅಂತ ಹಣಿಬಾರ್ ಈ ಹುಡುಗಿಗೂ ಬರಬಾರ್ದ ಅಂತ ನೆನಿಸ್ಕೊಂಡ್ನಿ ನಾ.

ಇಷ್ಟ್ ಸಣ್ಣ ವಯಸ್ಸಿನ್ಯಾಗ ಮದ್ವಿ ಮಾಡಬ್ಯಾಡ್ರಿ ಅಂತ ಹೇಳುವಷ್ಟ್ ನನ್ಕಡಿ ಧೈರ್ಯ ಏನೋ ಇತ್ತು ಆದ್ರ ನನ್ನ ಮಾತು ಯಾರು ಕೇಳಾಂಗಿಲ್ಲ ಅನ್ನು ಖಾತ್ರಿನೂ ನಂಗಿತ್ತ್. ಮಗಳ ಬೆಳದ ನಿಂತ ದ್ವಾಡದ ಆಗೈತಿ ಲಗುಟ್ನ ಚಪ್ಪರ ಹಾಕಿಸಿ ವಾಲಗ ಊದಿಸಿ ಲಗ್ನ ಮಾಡಿ ಕೊಟ್ಟ ಬಿಡ್ ಸತ್ಯಮ್ಮ ಅಂತ್ ನಮ್ಮೌಗನ ಅನ್ನವರ ನಮ್ಮ ಕಳ್ಳಬಳ್ಳ್ಯಾವರ. ನನ್ನ ಮಗಳ ಇನ್ನ ಓದಾಕತ್ಯಾಳವ ಓದುದ್ ಮುಗಿಲಿ ಆಮ್ಯಾಲ್ ನೋಡಿದ್ರಾತ್ ಈಗೇನ್ ಅಂವಸ್ರ ಐತಿ ಅಂತ ಅನ್ನು ನಮ್ಮ ಅವ್ವನ ಮಾತಿಗಿ, ಅಯ್ಯ ನಿನ್ ಸುಡ್ಲಿ, ಆ ಹೆಣ್ಣ್ ಹುಡುಗೀನ ಇನ್ನ ಓದಿಸ್ತ್ಯಾ? ಇವತ್ ಮದ್ವಿ ಮಾಡಿ ಕೊಟ್ರ ಎರಡ್ ಮಕ್ಳ ಹಡ್ಯು ವೈಸಾಗೈತಿ (14 ವರ್ಷದಕಿರಿ ನಾ ಆವಾಗ). ಅದೂ ಅಲ್ದ್ ಕೊಟ್ಟ ಹೆಣ್ಣ ಕುಲಕ್ಕ ಹೊರಗ್ ಅಂತ. ಯಾಕ ರೊಕ್ಕ ಸೂರುವ್ತಿ ಆ ಹುಡುಗಿ ಮ್ಯಾಗ್ ? ಅಕಿನ ಸಾಲಿ ಕಲ್ಸು ವಿಚಾರ ಬಿಟ್ಬಿಡ ಸತ್ಯಮ್ಮ. ಮೆಟ್ರಿಕ್ ಮುಗಿಸಿದ್ರ ರಗಡ್ ಆತ್. ನೀ ಅಕಿನ್ ಜೇರಕರ್ತ (ಒಂದು ವೇಳೆ) ಓದಿಸಿದಿ ಅಂದ್ರ ನಾಳಿ ಬಕ್ಳಂಗಾ ಸಾಲಿ ಕಲ್ತ್‌ವಂಗ್ ನೋಡಿ ಲಗ್ನ ಮಾಡಿ ಕೊಡುದ ಅಕೈತಿ. ಸಾಲಿ ಕಲತ್ ಸೂಟು ಬೂಟು ಹಾಕೊಂಡ ಸೂರ್ ಏನ್ ಇಕಿನ್ ಹಂಗ ಹಾರಿಸ್ಕೊಂಡ್ ಹೊಕ್ಕಾನಾ? ಲಕ್ಸ್ ಗಟ್ಲೆ ಗಂಟ ಕೊಡ್ಬೇಕ್ ಅಕೈತಿ ಅದೆಲ್ಲ ತಲ್ಯಾಗಿಂದ ತಗದ ಹಾಕ್. ಗಂಡ ಹುಡುಗನ ಬೇಕಾದರ ಓದಸ್ ಅನ್ನವರು ರೀ.

ಬಾಂವ್ಯಾಗಿಂದ ಒಂದ್ ಕಪ್ಪಿ ಮ್ಯಾಲ್ ಬರ್ಬೇಕಂತ ಜಿಗೀತಿದ್ರ ಉಳದ್ ಕಪ್ಪಿಗೋಳ ಬ್ಯಾಡ ಹೋಗ್‌ಬ್ಯಾಡ್ ಅಂತ ಕಾಲ್ ಹಿಡದ ಎಳಿತಿದ್ದು ಅಂತ. ಹಾಂಗ್ ಆಗಿತ್ರಿ ನನ್ನ ಹಣಿಬರಾನೂ. ಜೇರಕರ್ತ ನಮ್ಮವ್ವ ನನ್ನ ಬಳಗ ಅನ್ಕೋತ್ ಅವರ ಮಾತ್ ಕೇಳಿಕ್ಯಾಸ ನನ್ನ ಸಾಲಿ ಬಿಡಿಸಿ ಮದ್ವಿ ಮಾಡಿ ಕೊಟ್ಟಿದ್ರ, ಅನ್ಪಡ್ ಗಂಡಪ್ಪನ ಕೂಡ ಸಂಸಾರ ಹೂಡಿ ನಾಕ್ ಮಕ್ಕಳಿಗೆ ತಾಯಿ ಆಗಿ ಅಲ್ಲೇ ಅಡಿಗಿ ಮನ್ಯಾಗಿನ ಗಡಿಗಿ ಮುಕ್ಳಿ ತೋಳ್ಯುದಾಕ್ಕಿತ್ರಿ ನನ್ನ ಪಾಳೆನೂ. ಸಮಾಜ್ ಸೇವೆ ಕನಾಸಾಗೆ ಉಳಿತಿತ್ತು. ನಮ್ಮವ್ವ ನನ್ನ ಪಾಲಿನ ದೇವರು. ನೂರಾ ಜನಮ ಬಂದ್ರು ಆಕೀ ಹೊಟ್ಯಾಗ್ ಹುಟ್ಟಿಸ್ಲಿ ನನ್ನ ದೇವರ.

ಸಣ್ಣ ವಯಸ್ಸಿನ್ಯಾಗ್ ಮದ್ವಿ ಆಗ್ಬ್ಯಾಡ್ರಿ. ಎಲ್ಲದಕೂ ತಿಳುವಳಿಕೆ ಭಾಳ ಬೇಕ್ ಅಲ್ದ ಕಳ್ಳ ಬಳ್ಳ್ಯಾಗ್ ಮದ್ವಿ ಮಾಡಿ ಕುಡ್ಬ್ಯಾಡ್ರಿ ಅಂತ ಸಾಲ್ಯಾಗ್ ಕಲತ್ ಪಾಠಾ ಜೀವನದಾಗ ಅನುಸರಿಸಿ ನಡಿಬೇಕಂತ ನಾ ಹಿಂಗ್ ಅಟಟ್ ಆಗಾಗ ಬಿಟ್ಟಿ ಉಪದೇಶ ಕೊಟ್ರ, ನನ್ನ ಮಾತಿಗಿ ಏನ್ ಅನ್ನವರ ಗೊತ್ತೇನ್ರೀ ನಮ್ಮ ಜನ?, “ಏ ಹುಡುಗಿ, ಮಂಗ್ಯಾ ತಾ ಕೆಡುದ್ ಅಲ್ದಾ ವನಾನೂ ಕೆಡಿಸ್ತಂತ. ಏನ್ ತಿಳುವಳಿಕಿಲ್ಲ ಅವರಿಗೆ? ಕಸ ಮುಸ್ರಿ ಮಾಡ್ತಾರ್, ಅಡಿಗಿ ಮಾಡ್ತಾರ್, ಯಾಡೆಡ್ ಕೊಡ ನೀರ್ ಹೊತ್ತ ತರ್ತಾರ್. ಹೊಲಕ್ಕೋದ್ರ ಒಲಿ ಉರ್ಯಾಕ್ ಕಟಿಗಿ, ದನಗೋಳಿಗಿ ಹಸರ್ ಮೆವ್ವ ಮಾಡ್ಕೊಂಡ್ ತಲಿಮ್ಯಾಲ ಇಟ್ಕೊಂಡ್ ಹರದಾರಿ ನಡದ್ ಬರ್ತಾರ್. ಕೊಡಾ ಬ್ಯಾಡ ಸಣ್ಣ ಕಳಿಸೀಲಿ ನೀರ್ ತಂದ್ರ ಹೊಟ್ಟಿ ಝಾಡಿಸಿತ್ತ ಮಗಳದ ಅಂತ ನಿಮ್ಮವ್ವ ಒಂದ್ ಕೆಲಸ ಹಚ್ಚಿಲ್ಲ ನಿನಗ್. ನಿಮ್ಮವ್ವ ಕೊಟ್ಟ ಸಲಿಗಿ ಹೆಚ್ಚಾಗೈತಿ ನಿನಗ. ಅದ್ಕ ಇಷ್ಟ ಮಾತಾಡ್ತಿ ನೀ. ಗಂಡನ ಮನಿ ನಡ್ಯಾಕತ್ರ ಎಲ್ಲಾನೂ ತಿಳ್ಕೋತಾರ ನಿನಗ್ ಆ ಚಿಂತಿ ಬ್ಯಾಡ. ಇಲ್ನೋಡ ಹುಡುಗಿ, ನಿನ್ ಪುರ್ತೇಕ್ ನೀ ಇರು ಅದ್ಬಿಟ್ಟಕ್ಯಾಸ್ ಹಂಗ-ಹಿಂಗ ಅನಾಕತ್ತಿ ನಮ್ಮನಿಗಿ ಹೆಜ್ಜಿ ಇಡ್ಬ್ಯಾಡ್ ನೀ ಅನ್ನವರ ನಂಗ್. ಊರ್ ಚಿಂತಿ ಮಾಡಿ ಮುಲ್ಲಾ ಸೊರ್ಗಿದಂತ! ಏನರ ಹೇಳಾಕ ಹೋದ್ರ ಹೀಂಗೆಲ್ಲ ಅಂದಕ್ಯಾಸ್ ನನ್ನ ಬುಡಕ್ ಕೋಡ್ಲಿ ಇಡಾಕ್ ಬರ್ತಿತ್ರಿ ಜನ. ಹಂತಾದಕನ ನಾ ಉಸಾಬರಿ ಮಾಡುದ್ ಬಿಟ್ಟ ಸುಮ್ಮ ಮದ್ವಿಗಿ ಹೋಗಿ ಅಕ್ಕಿ ಕಾಳ ಒಗದ್ ಬಂದ್ರ ಆತ್ ಅಂತ ಹೊಂಟ್ ನಿಂತೀನಿ. ಅದ್ರಾಗ್ ನನಗ್ ಆವಾಗ್ ಅಷ್ಟ ಬ್ಯಾರಿ ತಿಳಿತಿರ್ಲಿಲ್ಲ ನೊಡ್ರಿ.

ಹತ್ತ ಹೊಡಿಗುಡ್ದ ಗಾಡಿ ಬಬಲೇಸೂರ್ ಮುಟ್ಟಿ ಆಗಿತ್ತ. ನಾವ್ ಹೋಗಿ ಮುತ್ಟುಗುಡ್ದ ಗಂಡಿನ ಕಡೆಯವರ ಹೆಣ್ಣ ಕಡೆಯವರನ್ನ ಇದರಗೊಳ್ಳಾಕ ಮುತ್ತೈದೆರ ಕೂಡ ಕಾಯಿ, ಕಪ್ರ, ಆರತಿ ಐಗೋಳ ಗುರುಸ್ವಾಮಿ ಕರ್ಕೊಂಡ ಬಾಜಾ ಬಜಂತ್ರಿ ಕರಿಸಿ ಊದಿಸ್ಕೊಂತ ಬಾರಿಸ್ಕೊಂತ ದೊಡ್ಡ ಹಿಂಡ ಬಂದು ಅಗಸಿ ಬಾಗಿಲಿಗೆ ನಿಂತಿತ್ತು. ಮತ್ತೊಂದ್ ಕಡೆ ಒಂದು ದೊಡ್ಡ ಗುಂಪ್ ಡೊಳ್ಳ ಹಿಡಿದು ತಮ್ಮ ಗುಂಗಿನ್ಯಾಗ್ ಕಣ್ಣ ಮುಚ್ಚಿ ಸೊಂಡಿ ಕಡದ್, ಹಿಡ್ದಂಗ್ ಕಟ್ಟಂಗ್ ಹಿಡ್ದಂಗ್ ಕಟ್ಟಂಗ್ ಹಿಡದ್ ಕಟ್ಟಿ ಗುಮ್ಮ ಅನ್ನು ಸ್ವರಾದಾಗ್ (ನನಗ್ ಹಂಗ ಕೇಳಿಸ್ತಿತ್ತು) ಬಾರಿಸು ಕಡ್ತಕ್ಕ ನನ್ನ ಕಿವಿ ರಮ್ಮ ಅಂದ ರಂಗೇರಿದ್ದು.

ಅಗಸಿ ಬಾಗಿಲನ್ಯಾಗ ಇದರ್ಗೊಂಡ ಬೀಗರು ಕಾಲು ತೊಳೆದು ತಾಂಬೂಲಾ ಬದ್ಲಾಡಿಸಿ ಸಕ್ರಿ ಬಾಯೊಳಗ ಹಾಕೊಂಡ್ರು. ಆಮ್ಯಾಗ್. ಇಬ್ರೂ ಬೀಗರು ಸೇರಿ ಗುರುಸ್ವಾಮಿದು ಕಾಲು ತೊಳದು ಪೂಜಿ ಮಾಡಿ ದಕ್ಷಿಣ ಕೊಟ್ಟು ಮತ್ತ ಅದ ಬಾಜಾ ಬಜಂತ್ರಿ ಕಡ್ಸಿಂದ ಊದಿಸ್ಕೋಂತ ಬಾರಿಸ್ಕೋಂತ ಹೆಣ್ಣಿನ ಕಡೆಯವರನ್ನ ಕರಕೊಂಡ ಹಂದರ ಕಡೆ ಹೆಜ್ಜಿ ಹಾಕಿಸಿದ್ರು. ಹಾದಿ ತುಂಬಾ ಸೋಬಾನಿ ಪದ ಹಾಡುದ ಸುರು ಮಾಡಿದ್ರು ಹೆಣ್ಣು ಮಕ್ಳು.

“ಬೀಗರ ಬಂದಾರ

ಬಾಳಿಯ ಬನದಾಗ ಇಳಿದಾರ

ಬಾಳಿಯ ಮರವೆಲ್ಲ

ನೂರಿ ನುಗ್ಗಿ ಸ್ವಾಗತ

ಬೀಗರಿಗಿ ಬಯಸ್ಯಾವ”

ಅನ್ನು ಪದ ಹಾಡಿದ್ರು, ಮತ್ತೊಂದ್

“ಕಿಲ್ಲೇದ್ ಕಾಲವಳ ಮೆಲ್ಲಕ ಬಾರವ್ವ

ಕಲ್ಲ ಬಾಳವರ ಮನಿ ಮುಂದ

ಕಲ್ಲ್ಮುಳ್ಳ ಭಾಳವ್ವ ದಾರ್ಯಾಗ

ಇರಲಿ ನಿನ್ನೆರಡೂ ಕಣ್ಣವ್ವ”

ಹಿಂಗ್ ಏನೇನೋ ಪದ ಹೇಳಿ ಬೀರಪ್ಪ ಮುತ್ಯಾನ ಗುಡಿಗಿ ಕರ್ಕೊಂಡ ಹ್ವಾದ್ರು.

ಅಕ್ಕಿ ಕಾಳ್ ಮನಿ ಮುಂದ ಇದ್ದಿರ್ಲಿಲ್ಲ ಬೀರಪ್ಪ ಮುತ್ಯಾನ ಗುಡ್ಯಾಗ್ ಇತ್ತ. ನಮ್ಮೂರ್ ಕಡೆ ಮದಿವಿ ಎಲ್ಲ ಗುಡಿ ಗುಂಡಾರ್ನ್ಯಾಗ್ ಮಾಡ್ಟಾರ್. ಉಗ್ರಾಣ ಕೋಲೆದಾಗ್ ಆಹ್ಹಾ! ಘಮ್ಮಂತ ಉಪ್ಪಿಟ್ಟ ಭಾಸ್ ಬರ್ತಿತ್ತ್. ಬಿಸಲಾಗ್ ಬಂದ ನಮಗ ಹೊಟ್ಟಿ ಹಸದ ಹೌ ಹಾರಿತ್ತ್. ಹಿಂದ್ ಮುಂದ್ ಇಚಾರ್ ಮಾಡದ ಮದಲನೆ ಪಂತಿಗೆ ಚಾ, ನಾಷ್ಟಾಕ ಕುಂತ್ನಿ ನನ್ನ ಗೆಳತ್ಯಾರ್ ಕೂಡ. ಎಗ್ಗಳಂಗಾ ಉಪ್ಪಿಟ್ ಜೆಡದ್ ಮ್ಯಾಲೊಂದ್ ಚಾ ಕುಡದ್ ಹೊಂಟಿವಿ ನಮ್ಮ ವಯಸ್ಸಿನ್ಯಾವರನ ಹುಡುಕೊಂತ. ಅಲ್ಲೇ ಬಾಜುಕ್ ಇದ್ದ ಹೊಲದಾಗ ಅಡ್ಡಾಡಿ ಬರ್ಬೇಕಂತ ಹೆಜ್ಜಿ ಹಾಕಿದ್ವಿ, ನಮಗ ಮದ್ವಿಗಿ ಸಂಬಂಧನಾ ಇಲ್ಲೆನೋ ಅನ್ನುವಂಗ. ನಮ್ಮನ ನೋಡಿಕ್ಯಾಸ ಒಂದ್ ನಾಳ್ಕೈದ್ ಹುಡುಗ್ರು ಬ್ಯಾರಿ ಬೆನ್ನ ಹತ್ತಿದ್ದು. ಅದ್ರಲ್ಲಿ ಒಬ್ಬಾಂವ ತನಗ ಗುಂಡಿಗಿ ಐತಿ ಅನ್ನುವಂಗ ಸೋಗ್ಲಾಡ್ಯಾ ಕಾಗಿ ಕಂಠದಾಗ ಟಪೋರಿ ಹಾಡಾ ಸುರು ಮಾಡಿದ,

“ನೀ ಎಲ್ಲಿಗೊಂಟಿ ಅಲ್ಲಿಗಿ

ಬರ್ತೀನಿ ಸುವರ್ಣ

ನಿನ್ ಹೆಸರಿಗಿ ನನ್ನ ಹೆಸರ

ಸೇರಿಸ್ತೀನಿ ಸುವರ್ಣ.

ನನ್ನ ಎದೆಯ ಗೂಡ

ತಮಟೆ ನೀನು ಸುವರ್ಣ

ಯಾವಾಗ ಹೇಳೆ

ನನಗೂ ನಿನಗೂ ಕಲ್ಯಾಣ”

ಅಂತ ಹಾಡು ಕಡ್ತಿಗಿ ಉಳದ ಹುಡುಗುರು ಕಿಕಿಕಿಕಿ ಅಂತ ಗೇಲಿ ಮಾಡಿ ಹಲ್ಲ ಕಿಸ್ಯಾಕ ಸುರು ಮಾಡಿದು. ಹುಡುಗ್ಯಾರ್ ಅಂದ್ರ ಏನಂತ ತಿಳದಾರ್ ಯಾಂಬಾಲ್ ಊರ್ ಬಾಡ್ಯಾಗೋಳ್ ತಡಿ ಇವರಿಗಿ ಶಾಸ್ತಿ ಮಾಡ್ತನ್. ನಾ ಏನ್ ಕಡಿಮಿ ಅಂತ ಎಲ್ಲೋ ಕೇಳಿದ್ದ ಗೊತ್ತಿದ್ದ ಹಾಡ ಐತಿ,

“ನೀನೊಂದು ಕಬ್ಬಿಣ ಜಲ್ಲೆ

ನಿನ್ನ ಡೊಂಕನೆಲ್ಲ ಬಲ್ಲೆ”

ಅಂತ ಅಂದ ನಡಿ, ನಿಮ್ಮನಿಗಿ ಈ ಸದ್ದ ಹೋಗುನ್ ನಿಮ್ಮಪ್ಪ ಅವ್ವನ ಭೆಟ್ಟಿ ಆಗಿ ಮಾತಾಡ್ತನ. ಹಿಂದಿಂದ ಬರ್ತೀಯೋ ಇಲ್ಲ ಹೆಸರಿಗಿ ಹೆಸರ ಸೇರಿಸ್ತೀಯೊ ನೋಡುನ ನಡಿ ಅಂದ್ನಿ. ನಾ ಹಾಂಗ್ ಅಂದ ಕಡ್ತಿಗಿ ದಿಕ್ಕಾ ಪಾಲಾಗಿ ಓಡಿ ಹೋದ್ ಹುಡುಗ್ರು ಆಮ್ಯಾಲ ಒಂದ್ ಕಪೇನೂ ಕಣ್ಣೀಗಿ ಬೀಳಲಿಲ್ಲ. ಇಷ್ಟೆಲ್ಲ ಕಿತಬಿ ಮಾಡುಗೊಡ್ದ ಅಕ್ಕಿಕಾಳ ಬೀಳು ಟೈಂ ಆಗಿತ್ತು. ಮದ್ವಿ ನಡಿಯು ಜಾಗಕ್ ಹೋದ್ವಿ.

ಎಲ್ಲಿ ನೋಡ್ತಿ ಅಲ್ಲಿ ಹೆಂಗ್ಸರು ಮಣಕಾಲ್ ಮುರಿ ಸೀರಿ, ರೇಶ್ಮಿ ಸೀರಿ ಕಾಣ್ತಿದ್ವು. ಕೈತುಂಬ ಅನ್ನುವಂಗ ಹಸರ ಕಡ್ಡಿ ಬಳಿ ಬ್ಯಾರಿ ಹಾಕೊಂಡಿದ್ರು, ಮಾರಿ ಮ್ಯಾಲ ಹಣಿ ತುಂಬುವಂಗ ಬಂಡಾರ್ ಹಚ್ಕೊಂಡ, ರೂಪಾಯಿ ಸಿಕ್ಕಾದಷ್ಟ್ ದೊಡ್ಡದು ಕೆಂಪು ಕುಂಕುಮ ಮುತ್ತೈದಿಗಿ ಮೆರಗ್ ಕೊಟ್ಟಿದ್ದನ್ ನೋಡಾಕ್ ಯಾಡು ಕಣ್ಣು ಸಾಲಾಂಗಿಲ್ಲ ಅನಿಸ್ತಿತ್ತು. ಸುತ್ತ ಹತ್ತು ಹಳ್ಳಿಗೆ ಕೇಳುವಂಗ ಸಿನೆಮಾ ಹಾಡ್ ಹಾಕಿದ್ರು.

ಅಕ್ಕಿ ಕಾಳಿಗಿಂತ ಮದಲ ಸುರಿಗಿ ನೀರ್ ಅಂತ ಬೀಳ್ತಾವ್ರಿ. ಗುಡಿ ಮುಂದ್ ನಾಲ್ಕು ಕಡೆ ದೊಡ್ಡು ನಾಲ್ಕು ಕಟಿಗಿ ಪಳಿ ಇಟ್ ನಡುವ ಆಡ್ಡಡ್ಡ ಯಾಡ್ಯಾಡ ಪಳಿ ಇಟ್ ಒಂದೊಂದು ದಂಡಿ ಕಡಿ ಮದಿಮಗಳನ ಮದಿಮಗನ ಕುಂದ್ರಿಸಿ ಇಬ್ಬರಿಗಿ ಬೆನ್ನ ಹಿಂದ ಇಬ್ಬ್ಬಿಬ್ರೂ ಮುಂದ್ ಇಬ್ಬಿಬ್ರೂ ಅರಿಸಿನ ಸೀರಿ ಬಿಳಿ ವಸ್ತ್ರ ವಲ್ಲಿ ಹಿಡ್ಕೊಂಡ್ ನಿಂತಿದ್ರು. ಉಟ್ಟರವಿ ಮ್ಯಾಲ ಸುರಿಗಿ ನೀರ ಹಾಕಿ ಜಳಕ ಮಾಡಿಸಿದ್ರು. ಅಲ್ಲೇ ಊರ ಹಿರೆರ ಮುಂದ್ ಅವರು ಉಟ್ಟರವಿ ಮ್ಯಾಲ ಅರವಿ ಬದಲ್ ಮಾಡಿದ್ರ್.

ನನಗ ಒಂದ್ ಸಂಪ್ರದಾಯ ಬರಬ್ಬರಿ ಅಂತ ಅನಿಸ್ಲಿಲ್ಲ. ಅದೆಂಗ್ ಊರ ಜನ ಮುಂದ್ ಹೆನ್ಮಕ್ಳು ಬಟ್ಟೆ ಬದಲ ಮಾಡೋದು ಅದೊಂತರ ಮುಜುಗರ ಅನ್ನಿಸ್ತು. ಆ ಆಚರಣಿ ನಂಗ್ ಬಿಲ್ಕುಲ್ ಸರಿ ಅನಿಸ್ಲಿಲ್ಲ. ಮನಿಸಿನ್ಯಾಗ್ ಅನ್ಕೊಂಡ್ನಿ ಇಂತವೆಲ್ಲ ಇದ್ರ ನಾ ಮದ್ವಿ ಮಾಡ್ಕೊಳ್ಳುದಿಲ್ಲ ಅಂತ. ಆಮ್ಯಾಕ್ ಆ ಜಾಗದಿಂದ ವಧು ವರನ ಕರ್ಕೊಂಡ್ ದೇವರ ಮುಂದ್ ನಿಲ್ಲಿಸಿದ್ರು ಅಲ್ಲೇ ಅಕ್ಕಿ ಕಾಳ್ ಬಿದ್ದು . ಮದಿಮಗನ ಕೈಗೊಂದ್ ತೆಂಗಿನ ಕಾಯಿನ ಕೆಂಪ ಅರಿವ್ಯಾಗ್ ಸುಳ್ಳಿ ಸುತ್ತಿಕ್ಯಾಸ್ ಕಟ್ಟಿದ್ರು. ಆ ತೆಂಗಿನ್ ಕಾಯಿನ ಲಗ್ನ ಮುಗದ್ ಮ್ಯಾಲ್ ಮನಿ ಜಂತಿಗಿ ಕಟ್ಟಬೇಕಂತ ವಾಡಿಕಿ. ನನಗ್ ಗದ್ದಲ ಅಂದ್ರ ಆಗಿ ಬರುದಿಲ್ಲ ಅದಾಕ್ ಲಗುಟ್ನ ಅಲ್ಲಿಂದ ಜಾಗ ಕಿತ್ತಬೇಕಂತ ಊಟ ಮಾಡಿ ಮತ್ತ ಆ ಬಾಜೂಕಿನ ಹೊಲಕ್ ಹ್ವಾದ್ನಿ . ಅಲ್ಲಿ ಏನೋ ಆಗಿತ್ತ, ಭಾಳ ಜನ ಹುಯ್ಯ ಅಂತ ಗುಂಪ್ ಕಟ್ಟಿತ್ತು!

ಮುಂದುವರಿಯುವುದು….

ಇದೇ ಲೇಖನವನ್ನು ನೀವು ಪಂಜುವಿನಲ್ಲಿ ಕಾಣಲು ಕ್ಲಿಕ್ಕಿಸಿ: http://www.panjumagazine.com/?p=2472

Advertisements

ಅಪರೂಪಕ್ಕೊಂದ್ ಮದ್ವಿಗಿ ಹೋಗಿದ್ನಿರಿ ಭಾಗ-೨

ಆ ತೆಗ್ಗಿಮನಿ ಸಿದ್ದಕ್ಕನ್ ಹೆಸರ ಎತ್ತುಗೊಡ್ದ, ದೂರ್ನಿಂದ ಅಕಿ ಬರುದ್ ಕಾಣ್ತ್. ಬರಿಮೈ ಮುಕ್ಳಿ ಹುಡುಗನ್ ಬಗಲಾಗ ಕುಂದ್ರಸ್ಕೊಂಡ್, ಹುಡುಗನ ಚಡ್ಡಿ ಸೊಂಟದಾಗ ತುರ್ಕೊಂಡ್, ಇನ್ನೊಂದ್ ಕಡೆ ಹುಡ್ಗಿ ಕೈ ಹಿಡದ್ ದರಾ-ದರಾ ಎಳ್ಕೋತ್ ಬರಾಕತ್ತಿದ್ಳು. ಅಕೀ ಆ ಕೂಸಿನ್ ಕೈ ಎಳಿಯು ಕಡ್ತಕ್ಕ, ಹುಡುಗಿದ್ ರಟ್ಟಿ ನೂಸ್ತಿತ್ತ್ ಯಾಂಬಾಲ್(ಯಾರಿಗೆ ಗೊತ್ತು). ಒಂದ್ ಸವ್ನಿ ರೊಂಯ್ ಅಂತ ಅಳಾಕತ್ತಿತ್ ಹುಡುಗಿ. ಕಣ್ಣಾಗೀನ್ ನೀರ್ ಕಪಾಳಕ್ಕ್ ಬಂದ್ರ, ಮೂಗನ್ಯಾಗಿನ್ ಸುಂಬಳ್ ಬಾಯಾಗ್ ಇಳ್ಯಾಕತ್ತಿತ್. ದೊಡ್ಡ್ ಗಾಡ್ಯಾಗ್ ಹತ್ತಾಕ್ ಏನರ ಆಸ್ರ (ಆಸರೆ, ನೆರವು) ಬೇಕ, ಹುಡುಗುರ್ನ್ ಕರ್ಕೊಂಡ್ ಅಕೀ ಗುದ್ದ್ಯಾಡುದ್ ನೋಡಿಕ್ಯಾಸ್ ನಾನ ಕೈ ಎಳದ್ ಮ್ಯಾಗ್ ಹತ್ತಸಿಕೊಂಡ್ನಿ.

ಬರಗ್ನ (ಅವರಸರದಿಂದ) ಬಂದಕಿನ್ ಒಂದ್ ಮೂಲ್ಯಾಗ್ ಜಾಗಾ ಹಿಡ್ಕೊಂಡ್ ಕುಂತ್ಳು. ಸೊಂಟದಾಗ್ ತುರ್ಕೊಂಡಿದ್ದ ಮಗನ ಚಡ್ಡಿ ಹಿರದ್ ತಗದಾಕಿನ್, ಅದರ(ಮಗನ) ಕಾಲ್ ಸಿಗಸಿ ಹುಡುಗನ್ ಮುಕಳಿ ಮುಚ್ಚಿದ್ಳು.

ಅಕಡಿ(ಅತ್ತ) ಇನ್ನೊಂದ್ ಮೂಲ್ಯಾಗ್ ನೀ ದರಾ-ದರಾ ಎಳ್ಕೊಂಡ್ ಯಾಕ್ ಬಂದಿ ಅಂತೇಳಿ ಚಂದ್ರಿ (ಸಿದ್ದಕ್ಕನ್ ಮಗಳು) ಸೊಂಡಿ ಪಿರ್ಕಿಸಿ (ಮುಖ ಗಂಟು ಹಾಕಿ, ಅಳುವ ಭಂಗಿಯಲ್ಲಿ) ಕುಂತಿತ್ತ್ . ಅವ್ವ ರಮಿಸ್ಲಿ (ಸಮಾಧಾನ ಮಾಡ್ಲಿ) ಅಂತ್ ಕುಂತಿತ್ತ್ ಯಾಂಬಾಲ್. ಅಯ್ಯ ಬಿಡ್ರಿ, ಅವರವ್ವಗ ಹುಡುಗಿ ದ್ಯಾಸ್ (ಲಕ್ಷ) ಇರಾಕಿಲ್ಲ. ತನ್ನ ಸನ್ಯಾಗ ತಾ ಇದ್ಳ್ ನೋಡ್ರಿ.

ಅಯ್ಯ ಇನ್ನ ೮ ಆಗಿಲ್ಲ, ಏನ್ ಸೆಕೀ (ಸೆಕೆ) ಐತೆವಾ. ಗಂಟ್ಲ ಎಸ್ಟ್ ಒಣಿಗ್ತ್.. ನನ್ನವ್ವಾ. ಏ ಅವಿ (ಪುಟ್ಟಿ) ರುಕುಮಾ, ನೀರ ಇದ್ರ ಕೊಡ ತಂಗೀ ಅಂದ್ಲು (ಮಡ್ಡಿ ಮನಿ, ಬಾಳ ದೂರಿತ್ತ್. ಅಲ್ಲಿಂದ್ ಕೂಸಿಗೋಳ್ನ ಕರ್ಕೊಂಡ್ ಬರುಗೊಡ್ದ ತೇಕ್(ತೇಗು) ಹತ್ತಿತ್ತ್ ಅಕಿಗಿ). ಮೂಲ್ಯಾಗ್ ಕುಂತಿದ್ದ ಅಕೀ ಮಗಳ್, ನಮ್ಮವ್ವ ನನ್ನ ದಾದ್ ಮಾಡೊಳ್ಳ್ (ಲಕ್ಷ ಕೊಡ್ತಿಲ್ಲ) ಅಂದಕಿನ್; ಸೋಗ್ಲಾಡಿ, ಗತ್ತ್ (ನಟಿಸು) ತಗದ ಮತ್ತ ರಾಗಾ ತಗೀತ್. ಆ ಆ ಆ ಆ ಅಂತ ಗಂಡುಸುರ್ ದನಿ ಎತ್ತಿತ ಪಡಶಾಂಟದ್ (ಬೈಗುಳ). ಈ ಕಪೆ ಕಣ್ಣಾಗನಿ ನೀರಿಲ್ಲ ಮೂಗಿನ್ಯಾಗ್ ತಟಕ್ ಸುಂಬ್ಳಿಲ್ಲ.

ಅಯ್ಯ ಬಾರವಾ ಬಂಗಾರಿ, ಏನ್ ಆತ್ ಸಿಂಗಾರಿ? ರಟ್ಟಿ ನೂಸತೈತ್ಯಾ? ಗೊತ್ತಾಗ್ಲಿಲ್ಲ್ ಕೂಸ, ಬೇಕಂತ್ ಮಾಡ್ಲಿಲ್ಲ ಮಗಳ. ಅಂತ್ ಹೇಳಿಕ್ಯಾಸ್ ಮಗಳ ಕಡಿ ಕೈ ಚಾಚಿ ಬಾ ಅಂತ್ ಸನ್ನಿ ಮಾಡಾಕತ್ಲ್ (ಬಾ ಎಂದು ಸೂಚನೆ ಕೊಡು). ಇಷ್ಟಕ್ ಯಾಕ್ ಗಪ್ಪ್ ಆಗ್ಯಾಳ್ ಚಂದ್ರಿ? ಅಕ್ಯು(ಅವಳೂ) ನನ್ ಜಾತ್ಯಾಕಿ. ನೀ ದಾದ್ ಯಾಕ್ ಮಾಡ್ಲಿಲ್ ನಂಗ್? ಹೂಹೂಹು ಅಂತ್ ಮತ್ತ್ ಅಳಾಕ್ ಸುರು ಹಚ್ಕೋತ್ ಅಳಮಾರಿ ಹೆಣ್ಣ!

ಕಾಯಿ ಕೊಡ್ತನ್ ಬಾ ಚಂದಾನಿ, ಗುಂಡಾನಿ, ನನ್ನ ತವರಿನ ಸೊಸಿಯ, ನಮ್ಮಪ್ಪನ ಲಗ್ನ ಆಕ್ಕಿಯಾ ಯವ್ವಾ, ಮುತ್ಯಾ ಬೇಸಿದನ, ನಮ್ಮಪ್ಪನ ಕಟ್ಕೊಲ್ಳವ್ವ ಚಂದ್ರಕಲಾ. (ಪ್ರೀತಿಯಿಂದ) ಅಂತ್ ಕೈ ಮಾಡಿದ್ಲ ಅವರವ್ವ. ಕೈ ಆಕಡೆಟ್ ಇಕಾಡೆಟ್ ಸರಸ್ಕೊಂತ್ ನೀ ಕಾಯಿ ಕೊಟ್ಟಾಗ್ ನಾ ಬರಾಕಿ ಅಂತ ಚಾಲ್ ಊರಿ (ಹಟ ಹಿಡಿದು) ಕುಂತ್ಳು ಚಂದ್ರಿ. ಅವರವ್ವ ನಮ್ಮ ಅಮೋಘಸಿದ್ಯಾನ್ ಕೈಲಿಂದ ೨ ರೂಪಾಯಿ ಕೊಟ್ಟ ನಾಕಣೆಕೊಂದುರು(೨೫ ಪೈಸೆ ಗೆ ಒಂದು) ೮ ಪಾಪಡಿ ತರಿಸಿ ಐದು ಬಳ್ಳಿಗಿ (ಬೆರಳಿಗೆ) ಒಂದೊಂದ್ ಹಾಕಿ ತಿನಿಸಿದಾಗ್ ಹುಡುಗಿ ಸಮಾಧಾನ ಆತ್ರಿ.

ಇಕಡಿ (ಇತ್ತ), ನೀರಡಿಕಿ ಆಗೇತಿ ಅಂತ್ ನೀರ ಇದ್ರ ಕೊಡ ತಂಗೀ ಅಂತ ನೀರ್ ಕೇಳಿದ್ಲ್ ಸಿದ್ದಕ್ಕ. ನನ್ ಕಡೆನೂ ಇಲ್ಲೆಕ್ಕ್, ಹೊಲ್ಯಾರ್ ಯಲ್ಲವಾಯಿ ಮನ್ಯಾಗ್ ಇಸ್ಕೊಂಡ್ ಬರ್ತನ್ ತಡಿ ಅಂತ್ ಹೊಂಟ್ ನಿಂತ್ನಿ. ಅಯ್ ತಂಗೀ ಹೊಲ್ಯಾರ್ ಮನ್ಯಾನ ನೀರ್ ಕುಡಿಸಾಕ್ಯಾ ನಂಗ್? ಬ್ಯಾಡ್ ಬಿಡ್ವಾ ಅಂತೇಳಿ ಮಕಾ ಗಡಿಗಿ ಮಾಡಿದ್ಲು (ಮುಖ ಊದಿಸಿ ಕೂಡು).

(ನಾ ಅರೆ ಏನ್ ಮಾಡ್ಲಿ, ಗಾಡಿ ಬಸ್ ಸ್ಟಾಂಡಿನ್ಯಾಗ್ (ಬಸ್ ನಿಲ್ದಾಣ) ನಿಂತಿತ್ತು. ಊರಿನ ಯಾಡು ದಂಡಿಗಿ ಒಂದ್ ಕಡಿ ಹೊಲ್ಯಾರು ಇನ್ನೊಂದ್ ದಂಡಿಗಿ ಮಾದರ ಮಂದಿ ಮನಿಗೋಳ್ ಅದಾವ್. ಅದು ಅಲ್ದ್, ನನಗ ಮಾದ್ರೂ, ಹೊಲ್ಯಾರು ಅನ್ನು ಭೇದ-ಭಾವ ಮಾಡಿ ಗೊತ್ತಿರಾಕಿಲ್ಲ (ಮೂರ್ ತಿಂಗಳ ಕೂಸಿದ್ದಾಗಿನಿಂದ ಕ್ರಿಸ್ಚಿಯನ್ ಸಂಸ್ಥೆಯಲ್ಲಿ ಬೆಳೆದವಳು ನಾನು, ಹೀಗಾಗಿ ಸಂಕುಚಿತ ಭಾವನೆಗಳು ನನ್ನಲ್ಲಿ ಇರಲೇ ಇಲ್ಲ)).

ತುಗೊಂದ್ ಬಾ ಅಂದ್ರ ಇಲ್ಲೆ ಚಂದ್ರಪ್ಪಣ್ಣನ ಮನ್ಯಾಗಿಂದ ನೀರ್ ತಂದ್ ಕೊಡ್ತನ, ಇಲ್ಲ ಅಂದ್ರ ಗಪ್ಪ್ ಕುಂದ್ರ ಅಂದ್ನಿ. ಅದಕ್ ಸಿದ್ದಕ್ಕ ಏನ್ ಅನ್ಬೇಕ್ರಿ ನನಗ್. ಆ ಗಿರಣಿ ಸಾಬು (ಸಾಬಣ್ಣ) ಮುತ್ಯಾನ (ಮುತ್ಯಾ=ಅಜ್ಜ) ಮನಿಗೋಗಿ ತುಗೊಂದ್ ಬಾರ ತಂಗೀ.. ಬಾಯಿ ಬಾಳ್ ಆರೈತಿ ಅಂದ್ಲು (ಯಾಕಂದ್ರ ಅವರು ಮ್ಯಾಗಿನ ಜಾತ್ಯಾವರು).

ನೀ ವಳೆ ಅದಿ ನೋಡ್ ವಾ, ಆ ಗಿರಣಿ ಮನ್ಯಾನವರ್ ಅಂದ್ರ ಆಗಿ ಬರುದುಲ್ ನನಗ್. ದೊಡ್ಡ ಸೊಕ್ಕಿನೂ ಅದಾವವ. ಗಿರಣಿ ಏನ್ ಹಾಕಿದ್ರೋ, ಆ ಕಿರಾಣಿ ಅಂಗಡಿ ಏನ್ ಚಾಲೂ ಮಾಡಿದ್ರೋ, ಅದ್ ಅಲ್ಲದ, ಮಗಾ ಬಿಜಾಪೂರ್ ನ್ಯಾಗ್ ನೋಕ್ರಿ ಏನ್ ಮಾಡಕತ್ತ, ಕೋಡ್ ಬಂದು ಅನಿಸ್ತೈತಿ ಅವರೀಗಿ. ಆ ಈಶೀ (ಈಶ್ವರಿ), ಎದೀ ಸೀಳಿದ್ರ ಯಾಡ್ ಅಕ್ಷರ ಗೊತ್ತಿಲ್ಲಕಿಗಿ, ನನಕಿನ್ ಸಣ್ಣಾಕಿ ಬ್ಯಾರಿ ಅಕೀ ಹಾಂಗ್ ನೋಡಿದ್ರ. ಮನ್ನಿ ನಮ್ಮ್ ಮುದಕಿ ಅಂಗಡಿಗಿ ಹ್ವಾದ್ರ ಚಿಲ್ಲರ ಇಲ್ಲದಕ್ಕ್ ತಡಾ-ತಡಾ ಮಾತಾಡಿ ಕಳಿಸ್ಯಾಳ ಅಂತ್. ಆ ಗಿರಣಿ ಆಯಿನೂ (ಈಶ್ವರಿ ಅತ್ತೆ) ಬಾಜುಕ್ ಇದ್ದಳಂತ, ದೊಡ್ಡವರಿಗೆ ಹಾಂಗ್ಯಾಕ್ ಅಂತೀವ ಅಂತ ಒಂದು ಮಾತು ಹೇಳಲಿಲ್ಲ ಅಂತ್. ಈ ನಮ್ಮ ಮುದಿಕೀಗೂ ಎಟ್ಟ ಸಲ ಹೇಳಿನಿ ಆ ಗಿರಣ್ಯಾರ್ ಅಂಗಡಿಗಿ ಹೋಗಬ್ಯಾಡ. ಅವು ಕೌ ಕೌ ಕಾಗಿ ಹಂಗ್ ಮಾಡ್ತಾವಂತ. ಇಕೆಲ್ಲಿ ಕೇಳ್ತಾಳ್ ನನ್ನ ಮಾತ? ಮತ್ತೂ ಅಲ್ಲೇ ಹೊಕ್ಕಿನಂತಾಳ.

ಇದ್ದುಳ್ಳಾರ (ಶ್ರೀಮಂತರು) ಇದ್ರ್ ತಮ್ಮ ಪುರತೇಕ(ತಮ್ಮಷ್ಟಕ್ಕೆ ತಾವು) ಇರ್ತಾರ್. ನಮಗೇನ ತಂದ್ ಹಾಕ್ತಾರೋ ಬಂದ್ ಹಾಕ್ತಾರೋ? ಮನಿ ಕೂಳ್(ಊಟ) ತಿಂದ, ಇಂತ ಸೊಕ್ಕಿನ ಮೂಳಗೋಳಿಗಿ ಸಲಾಮ್ ಹೊಡಿ ಅಂದ್ರ ಆಗಿ ಬರುದುಲ್ ನಂಗ್. ನಮ್ಮುವುಕ (ನಮ್ಮವರಿಗೆ) ಬುದ್ಧಿ ಇಲ್ಲ ಮದಲ. ಈಗ ಏನರ ಜಾಸ್ತ್ ಅಂತೀಯಾ; ನಮ್ಮ ಸತ್ಯಮ್ಮನ ಮಕ್ಕಳು, ನಮಗ ಬುದ್ಧಿ ಹೇಳಾಕ್ ಬರ್ತಾವ್ ಅಂತ ಚೆಂಜಿಕ್(ಸಂಜೆಗೆ) ಕಟ್ಟಿಗಿ ಕುಂತ್, ಡಂಗುರಾ ಬಾರಿಸ್ತಾಳ್ ನಮ್ಮ್ ಆಯಿ. ಎದಕ ಬೇಕ್ ಒಣಾ ಉಸಾಬರಿ ಅಂತ ನಮ್ಮ್ ಮುದಿಕಿಗಿ ಏನ್ ಹೆಳುದುಲ್ ನಾ. ಹೀಂಗೈತಿ ನೋಡ್ ಎಕ್ಕ. ಅದಕ ನಾ ಗಿರಣಿ ಮುತ್ಯಾನ ಮನಿಗಿ ಹೋಗುದಿಲ್ಲ. ಅಯ್ಯ ಹುಡುಗಿ ಹೋಗಲಿಲ್ಲ ನೋಡ್ ಅಂತ್ ಅನ್ನಾಕ್ ಹೋಗಬ್ಯಾಡ ನೀ. ಅಟ್ಟೊತ್ತಿಗೆನ (ಅಷ್ಟರಲ್ಲಿ ) ನನ್ನ ಗೆಳತ್ಯಾರ್ ಮೂರು ಮಂದಿ ಜತ್ತ(ಜೊತೆಯಾಗಿ) ಆಗಿ ಬಂದ್ರು. ಒಬ್ಬಾಕಿ ಕಡಿ ನೀರಿದ್ದುವು. ಕುಡಿಯವ ಎಕ್ಕ ಅಂತ ನೀರ್ ಕೊಟ್ನಿ. ಗಟಾ-ಗಟಾ ಅಂತ್ ಅರ್ಧ ಕ್ಯಾನ್ ನೀರ್ ಕುಡುದ್ಲ.

ಆಟ್ಟೊತ್ತನ್ನುಗೋಡ್ದ (ಆ ಸಮಯಕ್ಕೆ) ಗಾಡಿ ತುಂಬಿತ್ತು. ಇನ್ನೊಂದಿಷ್ಟ್ ಮಂದಿ ಬರಾವರ್ ಬಾಕಿ ಆದಾರ್ ಅಂತೇಳಿ ಗಾಡಿ ಇನ್ನ್ ಬಿಟ್ಟಿರಲಿಲ್ಲ. ಹುಯ್ಯಿ ಅಂತ ಕುರಿ ಹಿಂಡ್ ತುಂಬಿದಂಗ ಮಂದಿ ತುಂಬಿ ಬಿಟ್ಟಿದ್ರು, ಗಾಡಿ ಸಣ್ಣಗ ಹೊಂಟಾಕ (ಹೊರಡಲಿಕ್ಕೆ) ಸುರು ಮಾಡಿದ್ರ ಅದರ ಒಂದ್. ಬಿಸಲ ಆರಕ್ಕೊಂಡ (ಹರಡು) ಬಿದ್ದಿತ್ತು. ಹತ್ಯಾಗ್ ಕುಂತಿದ್ದಿಕ್ಕ ಗಾಳಿ ಆಡದ ಉಸರ ಕಟ್ಟಿ ಒಗದಂಗ್ ಆಗಿತ್ತ್. ಅಷ್ಟ ಯಾಕ್ ಒಂದ್ ಸವಣಿ ಬೆವರ ಬಿಟ್ಟ್, ಮೈ ಎಲ್ಲ ತಪ್ಪ ಅಂತ್ ತೋದಿತ್ತ್. ಮದಿಮಗಳನ್ ತಯಾರ ಮಾಡಿ ಕರ್ಕೊಂಡ್ ಬರುದ್ ಮುಗ್ದಿರಾಕಿಲ್ಲ.

ಅಯ್ಯ ದೇವ್ರ..! ಇದೊಳ್ಳಿ ಆತ್ ನೋಡ್. ಇಂತಾ ಶೆಡಗ್ರಕ್ಕನ, ನಾ ಎಲ್ಲಿ ಹೋಗುದುಲ್ಲ ಅಂತ ಬಡ್ಕೊಳ್ಳುದು ನಮ್ಮವ್ವನ ಕೂಡ್. ನನ್ನ ಮಕ್ಳು ಮಾತ್ ಕೇಳೂದಿಲ್ಲ, ಮನಸಿನ್ಯಾಗ್ ಮರಗತೈತಿ ಅಂತೇಳಿ, ಅಕಿ ಅಂದಿದ್ದಕ್ಕೆಲ್ಲ ಹೂಂ ಅನ್ಕೋತ್ ಹೊಕ್ಕಿವಿ ನಾಂವ್. ಈಗ, ಇದ.. ಲಿಬ್ನಕ್ಕ ಹೊಂಟ್ ನಿಲ್ಬೇಕಾದ್ರ ಆಕೀ ಹಂತೆಕ್ ಬಕ್ಕಳಗ (ಬಹಳಷ್ಟು) ಬೇಗಳಾ ತಿಂದ ಬಂದನ್ ನಾ, ನಿನ್ನೆ ಇವತ್ ಕೂಡೆ. (ನಿಮಗ ಮಂದಿ ಬ್ಯಾಡ, ಮಕ್ಕಳ ಬ್ಯಾಡ. ಎದ್ರಾಗು ಜಮಾ ಇಲ್ಲ ನೀಂವ್ ಅಂತಾಳ. ಹೋಗುದಿಲ್ ಅಂದಿದ್ದಕ್ಕ ಇಷ್ಟೆಲ್ಲ ಮಾತಾಡಿದ್ಳು ನಮ್ಮವ್ವ. ಅದಕ, ಯಾಕ್ ಸುಮ್ಮ ಅಕೀ ಮನಸ್ ನೂಸುದು? ಹೂಂ ಅಂದ್ರ ಅಕಿ ಮನಸಿಗೂ ಹೌಸಿ (ಖುಷಿ) ನಮಗೂ ನೆಮ್ಮದಿ).

ಗದ್ದಲ್ದಾಗ ಒಬ್ಬರ ಉಸಲ್(ಉಸಿರು) ಒಬ್ಬರಿಗಿ ಬಡ್ಯಾಕತ್ತಿತ್. ಒಂದ್ ಮುದುಕಿ ಬ್ಯಾರಿ ನನಗೀಟ್ ಜಾಗಾ ಕೊಡ್ರೆವ ಅಂತ ಎಲ್ಲಾರ್ನೂ ಕೇಳಾಕತ್ತಿತ್. ಇರ್ಲಿ ಮುದಕಿ ಐತಿ ಅಂತೇಳಿಕ್ಯಾಸ್ ನನ್ ಎದ್ರಿಗಿ ಕುಂದ್ರಸ್ಕೊಂದಿದ್ನಿ. ವಯಸ್ಸಾದ ಮುದುಕ್ರು ಮುದಕ್ಯಾರ್ ಅಂತೇಕ ಕುಂದ್ರಬಾರ್ದ ಅನ್ನುದು ಅವತ್ ತಿಳೀತು. ಬಾಯಾನ ಹಲ್ಲೆಲ್ಲ ಉದಿರಿದ್ದು ಮುದಕೀವ್, ಮ್ಯಾಲ್ ಯಾಡ್ ತಳಗ ಯಾಡ್ (ಮೇಲೆರೆಡು ಕೆಳಗೆರಡು) ಹಲ್ ಬಿಟ್ರ. ಆಕೀ ಮಾತಾಡು ಕಡ್ತಿಗಿ ಬಾಯಾನ್ ಉಗುಳ್ ಬಂದ್ ನನ್ನ ಮಕಕ್ಕ ಸಿಡಿತ್. ಆದ ಆಲ್ದ, ಮುದುಕಿ ಬಾಯಿ ಹೊಲಸ್ ನಾರಾಕತ್ತಿತ್ತ್. ಎಂದ್ ಹಚ್ಚಿತ್ ಯಾಂಬಲ್ ಹಲ್ಲಿಗಿ ಇದ್ಲಿಪುಡಿ, ಬ್ಯಾನ್ ಕಡ್ಡಿ (ಬೇವಿನ ಕಡ್ಡಿ). ಇರುವ ನಾಕ ಹಲ್ಲ. ಅವು ಜಿಡ್ಡಗಟ್ಟಿದಂಗ್ ಆಗಿದ್ದು. ಎಲ್ಲಾ ನೋಡಿಕ್ಯಾಸ್ ಅಳುಮಾರಿ ಬ್ಯಾರಿ ಮಾಡಿ, ನಮ್ಮವ್ವನ್ನ ಮನಿಸಿನ್ಯಾಗ್ ಹಚ್ಚಿ ತಿರಿವ್ಯಾಡಿದ್ನಿ (ಮನಸಿನಲ್ಲಿ ಬೈಯ್ದಾಡು). ಮದಿಮಗಳ ಬರುಮಟಾ; ತಳಗಿಳದ ಒಂದಿಟ್ ಹವಾ ತಿಂದ್ರ ಆತಂತೇಳಿ ತಳಗ್ ಇಳಿದ್ನಿ.

ಹಾಲಪ್ಪಗೋಳ ಬೀರಪ್ಪ ಮುತ್ಯಾನು ಲಗ್ನಕ್ಕ ಹೊಂಟ್ ನಿಂತಿದ್ದ್. ಗಾಡಿ ಬಿಡುಮಟಾ ಅಂತೇಳಿ, ಕುಂದ್ರಾಕ್ ಸಾಲಾಗಿ ಒಗದಿದ್ದ ಕರಿ ಕಲ್ಲ ಮ್ಯಾಲ್ ಹೊಸಾ ಬಿಳಿ ವಲ್ಲಿ ಹೊಲಸಕ್ಕೇತಿ ಅನ್ನುವಾಂಗ್ ಮಕ ಕಿವುಂಚ್ಯಾಡಕೋತ್ ಬಾಯಿಲೆ ಉಫ್ ಅಂತ ಊದಿಕ್ಯಾಸ್ ಧೂಳಾ ಹೊಡದ ತಳಾ ಊರಿ ಕುಂತ. ನಮ್ಮವ್ವಗ ಕಾಕಾ ಆಗ್ಬೇಕ್ ಅಂವ.

(ನಿಮ್ಮಮ್ಮಗ ಕಾಕಾ ಅಂದ್ರ ನಿಂಗ್ ಮುತ್ಯಾ ಅಲ್ಲೇನ ಹುಡುಗಿ ಅನ್ಬ್ಯಾಡ್ರಿ ನೀವ್ ನನಗ್. ನಾ ಯಾರ್ನೂ ಭಾಳಾಕೋನ(ಬಹಳಷ್ಟು) ಹಚ್ಕೋತಿರಲಿಲ್ಲ. ನಮ್ಮವ್ವ ನಮಗ ಹೊಳ್ಳೆ-ಮುಳ್ಳೆ ಅಂತಿದ್ಳು. ಮಕ್ಕಳ್ರ್ಯಾ, ಹಿಂಗ್ ಇರಾಕ್ ಹೋಗಬ್ಯಾಡ್ರಿ ನೀವ್. ಕಾಕಾ, ಮಾಮಾ ಅನ್ಕೋಂತ ನಡೀರಿ ಊರ ತುಂಬ ನಮ್ಮದ ಮಂದಿ ಐತಿ. ಬಿಟ್ಕೋತ್ ಹೋದ್ರ ಕಳ್ಳ ಬಳ್ಳಿ ಹಾಂಗ್ ಬಿಟ್ಕೋತನ ಹೊಕ್ಕೇತಿ. ಇವೆಲ್ಲ ಇರುವನ ನನ್ನ ಮಕ್ಕಳ್ರ್ಯಾ ಸಣ್ಣವರಾಗಿ ನಾವ ತಲಿ ತಗ್ಗಿಸಿ ನಡಿಬೇಕ ಅನಾಕರಿ ನಮ್ಮವ್ವ. ಎವ್ವಾ, ಪುರಾಣ ಸಾಕ್ ಮಾಡ್ ನನ್ನ ಹಡದವ್ವ ನಿಂದ್. ಮನಿಸ್ಲೆ(ಮನಸಿಂದ) ದೊಡ್ಡಂವಿದ್ದ ದೊಡ್ಡತನ (ಹಿರಿಗುಣ) ತೋರ್ಸು ಮಂದಿಗಿ ನಾ ನನ್ನಾವ್ರು ಅನಾಕಿ ಇಲ್ಲ ಅಂದ್ರ ಹಿಂಗ್ ನೋಡ್ ನಾ ಅಂತೇಳಿ ಜವಾಬ್ ಕೊಡ್ತಿದ್ನಿ ನಮ್ಮವಗ. ಗಂಡನ ಆಶ್ರಯ ಇಲ್ಲದ ನಮ್ಮ ಮನಿಗಿ ನಮ್ಮವ ಒಂದ ಜೀವ ಗಂಡಾಳಿನಂಗ್ ದುಡದ ನಮಗ್ ಹೊಟ್ಟಿಗಿ ಬಟ್ಟಿಗಿ ಮಾಡ್ಯಾಳ್ರಿ. ಅವ್ವನ ತವರ ಮನ್ಯಾನವರಿಗಿ ಏನೂ ಕಡಿಮಿ ಇರಾಕಿಲ್ರಿ ನಮ್ಮ್ ಆಯಿ ೨ ವರಸದ ಕೂಸ್ ನಮ್ಮವ್ವನ ತಬ್ಲಿ ಮಾಡಿಕ್ಯಾಸ್ ಊರ್ ಹೊಂತುಟ್ಲೆ ಬದುಕನ್ನು ಆಟದಾಗ ಔಟ್ ಆಗಿ ಹೋಗಿದ್ಳ್. ತಾಯಿ ಸತ್ತ್ ನಮ್ಮವಾಗ ಇನ್ನೊಬಾಕಿ ಅವ್ವ ಬ್ಯಾರಿ ಇದ್ಲು. ಹಿಂಗಾಗಿ ತವರ್ ಮನಿ ಬಾಗಿಲ ಎಂದೋ ಮುಚ್ಚಿತ್ತ್. ಮಕ್ಳ ಕರ್ಕೊಂಡ್ ತವರ ಮನ್ಯಾಗ್ ಬಾಡಿಗಿ ಮನಿ ಮಾಡಿ ಇದ್ದ ನಮ್ಮವ್ವಗ, ಸಣ್ಣ ವಯಸ್ಸ.. ಯಾಡ್ ಮಕ್ಕಳ್ನ ಕಟ್‌ಗೊಂಡ್ ಬದುಕ್ ಅನ್ನು ನೀರಿಗಿ ಈಜ್ ಬರ್ದ ಬಿದ್ದೈತಿ ಹುಡುಗಿ, ಹೆಂಗ್ ನಡದೈತಿ ತಂಗೀ ಬಾಳೆ, ಏನರ ಅಡಚ್ನಿ ಅದು ಬಂದ್ರ ನಮ್ನ ಕೇಳುತ್ ಬಾ ಅಂತ್ ಅಂದವರ್ ಬೆಳ್ಳೆನಿಕ್ಯಾಗ್ರಿ (ಬೆರಳೆಣಿಕೆಯಷ್ಟು). ಊರ್ ತುಂಬ ಮಂದಿ ಮಕ್ಳ ಇದ್ದ ಇಂತ ಗತಿ ನಮ್ಮವ್ವಗ ಮತ್ತ. ಯಾರಿಲ್ಲ ಅಂದ್ರ ಆ ಮಾತ್ ಬ್ಯಾರೆ ಅಕ್ಕಿತ್. ಹೀಂಗಿತ್ರಿ ನಮ್ಮವನ ಬಳಗ. ಅವ್ವಗ, ಯಾರ್ ಉಪಕಾರು ಬೇಕಿರಾಕಿಲ್ಲ ಒಂದೆರಡು ಮಾತ್ ಬೇಕಿದ್ದು. ಆಗಾಗ ಕಷ್ಟ ಕಾರ್ಪಣಿ (ಸಂಕಟ) ಬಂದ್ರ ಒಳಗೊಳಗ್ ಕಣ್ಣೀರಿಡುದ್ ನಮ್ಮವ್ವ. ಇಷ್ಟೆಲ್ಲ ಇದ್ರು ನನ್ನ ಮಂದಿ, ನನ್ನ ಬಳಗ ಅಂತ ಹುಚ್ಚರಂಗ್ ಆಡ್ತೈತಿ ನನ್ನವ್ವ. ಹೀರ್ಯಾರ್ ಹೇಳಿದ್ ಮಾತ್ ಖರೇ ಐತಿ ನೋಡ್ರಿ ಹಣ ಅಂದ್ರ ಹೆಣಾನು ಬಾಯಿ ತಗಿತೈತೆಂತ್. ಇಲ್ಲಿ.. ಹಣ ಇರಲಾರ್ದವ್ರ್ ನಾವು.. ಅದಕ್ಕ ಇದ್ದ ಜನಾನು ಹೆಣಾ ಇದ್ದಂಗ್ ಇದ್ರು. ಇಂತಾ ಕಾರಣಕ್ಕ, ನಾ ಯಾರಿಗೂ ನನ್ನ ಬಳಗ ನನ್ನ ಮಂದಿ ಅನ್ನಾಕ್ ಮನ್ಸ್ ಮಾಡುದುಲ್ಲ್. ಇಂತಾವೆಲ್ಲ ನೆನಿಸ್ಕೊಂಡ್ರ ಈಗೂ ನನ್ನ ಹೊಟ್ಯಾಗ್ ಕಾರಾ ಕಲಿಸಿದಂಗ್ ಅಕ್ಕೈತ್ರಿ). ನಾ ವಳ್ಳೆ… ಏನೋ ಹೇಳಾಕೋಗಿ ಎಲ್ಲೆಲ್ಲೋ ಬಂದ್ನಿ.

ಹಾ.. ಕರಿಕಲ್ಲ್ ಮ್ಯಾಲ್ ತಳಾ ಊರಿ ಕುಂತಿದ್ದ ಬೀರಪ್ಪ ಮುತ್ಯಾ ನನ್ ನೋಡಿಕ್ಯಾಸ್, ಏನ್ ಚೆಂದ ಕಾಣ್ತಿ ಲೆ ರುಕುಮಿ, ಬಾರ ನನ್ನ ಸಂಗಾಟ್ (ಬೆನ್ನತ್ತಿ ಜೊತೆ ನಡಿ) ಅಂತ ಅಂದ ಕೈ ಹಿಡಿದ್ ನಂದ್. ಹೂ.. ನಡಿ ಬರ್ತನ ಅದಕ್ಕೇನಂತ್, ಮದಲ್ ತಾಳಿ ಕಟ್ಟ ನನ್ನ ಮುದೋಡಿ (ಮುದುಕ) ಅಂದಾಕಿನ್ ಹಿಡಿದಿದ್ದ್ ಕೈ ಕಸರ್ಕೊಂಡ್ ಹಿಂದ್ ಸರಿಗುಡ್ದ ಮಾರುಕಟ್ಟಿ ಓಣ್ಯಾಗಿಂದ ಐದಾರು ಹೆಣ್ಣಮಕ್ಳು ಅರಿಸಿನ ಸೀರಿ ಉಟ್ಕೊಂಡ್ ಹಸರ(ಹಸಿರು) ಶ್ಯಾಲ್, ಮ್ಯಾಲ್ ಹೊದ್ದ ಮದಿಮಗಳನ (ಮದುವೆ ಮಗಳು) ಹೆಜ್ಜಿ ಮ್ಯಾಲ ಹೆಜ್ಜಿ ಇಡಿಸ್ಕೊಂತ ಕರ್ಕೊಂಡ ಬರುದ್ ಕಾಣಿತ್. ಕೈಯಿಗಿ ಹಚ್ಚಿದ್ ಆ ಮದರಂಗಿ ಕೆಂಪಾ ಆಕೀ ಮಕಾದಾಗ್ ರಂಗೇರಿದಾಂಗ್ ಅನಿಸ್ತಿತ್ತ. ಮದುವಿ ಆಗಿ ಗಂಡನ ಮನಿಗಿ ಹೋಗಿ ಹ್ಯಾಂಗ್ ಬಾಳೆ ಮಾಡ್ಲಿ ಅನ್ನು ಭಯಾ ಇತ್ತ ಯಾಂಬಾಲ್ ಆಕೀ ಮೆಲ್ಲಕ್ ಹೆದರ್ಕೋತ ಇಡು ಹೆಜ್ಜ್ಯಾಗ್. ೮ ದಿನದ ಗಟ್ಲೆ ಅರಿಸಿನಾ ಉಂಡ್ ಆಕೀ ಮೈಗೆ ಚಲೋ ಕಲರ್ ಬಂದಿತ್ತ್. ಎನ್ನಿ ಹಚ್ಚಿ ಎರದ್ ಮಕಕ್ಕ ಭೆಷೆಂಗೆ ಕಳಾ ಬಂದಿತ್ರಿ. ಹನಿ ತುಂಬ ಕುಂಕುಮಾ ತಲಿ ತುಂಬ ಮಲ್ಲಿಗಿ ಕನಕಾಂಬರ ಹೂವ, ಕೊಳ್ಳಾಗ ಹಾಕಿದ್ದ ಬೋರಮಾಳ, ಗುಂಡ, ಈಗೀಗ್ ಹೊಸದಾಗಿ ಬಂದಿದ್ದ್ ನೆಕ್ಲೆಸ್ ಕೊಳ್ಳ ತುಂಬುವಾಂಗ್ ಹಾಕಿದ್ರ್. ಮೂಗಿನ್ಯಾಗ ಹಾಕಿದ್ದ ಮುತ್ತಿನ ನತ್ತ ಇನ್ನಷ್ಟ ಕಳಾ ಕೊಟ್ಟಿತ್ತ ಹುಡುಗಿಗಿ. ನಾನು ಮದಿಮಗಳ ಜೋಡಿನ ಗಾಡಿ ಹತ್ತಿ ಕುಂತ್ನಿ. ಮತ್ತೊಂದ್ ಕಪೆ ಬರವರೆಲ್ಲ ಬಂದಾರೋ ಇಲ್ಲೊ ಅಂತ ಖಾತ್ರಿ ಮಾಡ್ಕೊಂಡ್ ೯ ಗಂಟೇಕ ಗಾಡಿ ಬಬಲೇಸೂರ್ ಕಡೆ ಓಡಾಕ ಸುರು ಮಾಡಿತ್ರಿ.

(ಮುಂದುವರೆಯುವುದು…)

ಇಂತಿ ನಿಮ್ಮ ಮನೆ ಮಗಳು

ರುಕ್ಮಿಣಿ ಎನ್.

ಇದೇ ಲೇಖನವನ್ನು ನೀವು ಪಂಜುವಿನಲ್ಲಿ ಕಾಣಲು ಕ್ಲಿಕ್ಕಿಸಿ: http://www.panjumagazine.com/?p=1706

ಅಪರೂಪಕ್ಕೊಂದ್ ಮದ್ವಿಗಿ ಹೋಗಿದ್ನಿರಿ- ಭಾಗ ೧

ಹುಟ್ಟಿದಾಗಿನಿಂದ ಇವತ್ತಿನವರ್ಗು ನಾ ಮದ್ವಿ ಮುಂಜಿ, ಜಾತ್ರೀ ಅಂತ್ ಹೇಳಿ ಊರೂರ್ ತಿರಿಗಿದ್ ಭಾಳ ಕಡಿಮಿ ರೀ. ಮದ್ವಿಅಂದ್ರ್ ಸಿನಿಮಾದಾಗ್ ನೋಡು ಸೀನ್ ಅಷ್ಟ್ ಗೊತ್ತಿತ್ರ್ ನಂಗ್. ಅದರೀ.. ಹುಡುಗನ ಕಡೆಯಿಂದ ಅವನ್ ಗೆಳ್ಯಾರು, ಹುಡುಗಿ ಕಡೆಯಿಂದ ಅಕಿ ಗೆಳತ್ಯಾರು, ಮದ್ವಿ ಒಂದ್ ವಾರ್ ಇರುತ್ಲೇನ್ ಬರಾತಾರು. ಏನೇನರ ಕೆಂತಿ ಮಾಡ್ತಾರು, ಯಾರಗೋ ಯಾರದೋ ಮ್ಯಾಲ್ ಲವ್ವ್ ಅಕ್ಕೈತಿ… ಮದ್ವಿ ದಿನ, ಊಟ ಮದಲ್ ಇರ್ತೈತಿ. ಆಮ್ಯಾಕ್ ಅಕ್ಕಿಕಾಳ್ ಒಗಿತಾರು. ಮದ್ವಿ ಆತ್ ಆತ್ ಅನುಗುಡ್ದ, ಹುಡುಗಿ ಕರ್ಕೊಂಡ್ ಹೋಗು ಸೀನ್, ಅಪ್ಪನ ಅವ್ವನ ಆಪ್‌ಕೊಂಡ್ ಗೊಳೋ ಅಂತ್ ಹುಡುಗಿ ಅಳುದು, ಚಿಂತೀ ಬ್ಯಾಡ್ರಿ ಮಾಮರ ನಾ ಚೆಂದಗ ನೋಡ್ಕೊತನ ನಿಮ್ಮ ಮಗಳನ ಅನುದು, ಗಾಡ್ಯಾಗ್ ಹುಡುಗಿ ಕರ್ಕೊಂಡ್ ಹೊರಡು ಮದಿಮಗ (ಮದುಮಗ), ಹಿಂಗ್ ಏನೇನೋ ಎಟ್ಸೆಟ್ರ ಎಟ್ಸೆಟ್ರ.. ಇಷ್ಟ್ ಗೊತ್ತಿತ್ರಿ.. ಈಗೇನ್ ಮಹಾ ಗೊತ್ತಗಾತೋ ಅನ್ಬ್ಯಾಡ್ರಿ, ಈಗ್ಲೂ ಏನೂ ಗೊತ್ತಿಲ್ಲ… 😛

ನಾ ಯೋಳನೆತ್ತೆ ಇದ್ದಾಗ್, ನಮ್ಮ್ ಓನ್ಯಾಗಿನ್ ಬುಡ್ಡ (ಲಾಲ್ ಸಾಹೇಬ್) ಮಾಮಾನ ಮದ್ವಿಗಿ ಹೋಗಿದ್ನಿ. ಮದ್ವಿ ಹೆಂಗ್ ಇರ್ತೈತಿ, ಏನ್ ಸಂಪ್ರದಾಯ, ಏನ್ ಆಚರಣೆ ಅಂತ ತಿಳ್ಕೊಳ್ಳೋ ಹಂಬಲೇನ್ ಇರ್ಲಿಲ್ಲ. ಮಾಮಾ ಅಂದ್ರ ನಂಗ್ ಭಾಳ ಪ್ರೀತಿ ಇತ್ತು ಅವನ್ ಜೊತಿ ಫೋಟೋ ತಕ್ಕೋ ಬೇಕ್ ಅನ್ನು ಹಂಬಲ್ ಅಷ್ಟ್ ಇತ್ರಿ. ಸಣ್ಣ ಹುಡಿಗ್ಯಾಗಿ ಒಂದ್ ಕಡಿ ಕುಂದರಲೇ ರುಕುಮಿ ಅಂತ ಗುಡುಮಾ (ಲಾಲ್ಸಾಬ್ ಮಾಮನ್ ಅವ್ವ) ಆಯಿ (ಅಜ್ಜಿ) ಗದರಿಸಿದ್ಲು. ಸಪ್ಪನ್ ಮಕ ಹಾಕೊಂಡ್ ನೀನು ಬ್ಯಾಡಾ ನಿನ ಮಗನ್ ಮದ್ವಿನೂ ಬ್ಯಾಡಾ ಅಂತ್ ಮನಿಗಿ ಬಂದಿದ್ನಿ.

ಮತ್ತೊಂದ್ ಕಪೆ (ಮತ್ತೊಂದು ಬಾರಿ), ನಾನಗ್ ಒಂಭತ್ನೆತ್ತೆ ಇದ್ದೀನ್ರಿ, ತಳೇವಾಡ ನನ್ನೂರ್ ಆದ್ರ ಬಾಜೂಕಿನ ಊರ್ ಮುಳವಾಡ ಹೈಸ್ಕೂಲ್ ಸಾಲಿಗಿ ಹೋಗ್ತಿದ್ನಿ, ಒಂದಿನ ನಮ್ಮ ಕಳಬಳ್ಳ್ಯಾಗಿನುವ ಮೂರು ಲಗ್ನ(ಮದುವೆ) ಒಮ್ಮೆಗೆ ಬಂದಿದ್ದು ರೀ. ಯಾವದು ಮಿಸ್ ಮಾಡು ಹಂಗೀರಾಕಿಲ್ಲ. ಅದಕ್ ನಮ್ಮವ್ವ ನಂಗ್, ನುಕುನಾ (ಅಮ್ಮ ನಂಗೆ ಪ್ರೀತಿಯಿಂದ ನುಕುನಾ ಅಂತಾರೆ) ಒಂದಿನ ಸಾಲೀ ಬಿಟ್ಟ, ಬಬಲೆಸೂರ್ ಹೋಗಿ ಅಕ್ಕಿ ಕಾಳ್ ಒಗದ್ ಬಾ ಮಗಳ ಅಂದ್ಲು.

ಥೊ.. ಈ ಮದ್ವಿ ಮುಂಜಿ ಅಂದ್ರ ನನಗ್ ಆಗಿ ಬರುದುಲ್ ನೋಡ್ ಬೇ. ಸಾದಾ ಅರವಿ ಹಾಕೊಂಡ್ ಹೊಕ್ಕಿಯಾ ಮಂದಿ ಅಂತಾರು, ಅಯ್ಯ ನೋಡವ ಹೆಂಗ್ ಬಂದಾವ್ ಗೊಲ್ಲರಂಗ್ ಅಂತಾರ್. ಚಂದಾನ್ ಅರವಿ ಹಾಕೊಂಡ್ ಹೊಕ್ಕಿಯ, ಮೀಸಿ ಒಡದ್ ವಯಸೀಗಿ ಬಂದ್ ಹುಡುಗ್ರು ಪಿಕಿಪಿಕಿ ಮಕಾ ನೋಡ್ಕೋತನ ನಿಲ್ತಾವ ಊರ್ ಬಾವಾಗೋಳ್(ಬೈಗುಳ). ಬರೀ ನೋಡ್ತಾವಾ? ಇಲ್ಲ.. ನೋಡಿಕ್ಯಾಸ ಹಿಂದೊಂದ್ ಮುಂದೊಂದ್ ಅನ್ಲಿಕ್ ಸುರು ಮಾಡ್ತಾವ್. ಹಂತದೇಲ್ಲ ಕೇಳಿಸ್ಕೊಂಡ್ ಸುಮ್ಮ್ ಕೂಡು ಹುಡುಗೆಲ್ಲ್ ನಾ. ನನಗ್ ಹಿಂತಾದ್ ಬಗಿಹರಿಯುದಿಲ್ಲ ಅಂತ ನಿನಗ ಗೊತ್ತಿದ್ದ ಮಾತ ಐತಿ; ನಾ ಹೋಗುದುಲ್ ನೋಡ, ಅಂತ್ ಹೇಳಿ ಕೈ ಚೆಲ್ಲಿದ್ನಿರಿ.

ನಮ್ಮವ್ವ ನನಗ್ ಹೋಗ ಅಂದ ಮದ್ವಿಗೆನ ನನ್ ವಾರಿಗಿ ಹುಡುಗೇರು, ಕ್ಲಾಸ್ ಮೆಟ್ಸ್ ಹುಡುಗ್ಯಾರ್ ಬ್ಯಾರಿ ಹೊಂಟ್ ನಿಂತಿದ್ರು, ಲೇ ನಾಗೀ (ನಾಗಣ್ಣವರ ನನ್ನ ಸರ್ ನೇಮ್ ಇರುವುದರಿಂದ) ನೀನು ಬಾರ.. ಗೆಳತ್ಯಾರ್ ಗೆಳತ್ಯಾರ್ ಕೂಡಿಕ್ಯಸ್ ಹೋಗುನ್. ನೀ ಎಲ್ಲಿ ಬರುದುಲ್ ನೋಡ್ಲೆ.. ಇದೊಂದ್ ಕಪೆ ಬಾ (ಒಂದು ಬಾರಿ). ಒಂದ್ ಸವ್ನಿ ತಲಿ ತಿನ್ಲಿಕತ್ರು. ಮನ್ಯಾಗ್ ನಮ್ಮವ್ವ ಬ್ಯಾರಿ ಬಡ್ಕೊಳಾಕ್ ಶುರು ಮಾಡಿದ್ಲು ಅಂತೇಳಿ, ಹೂ ಬರ್ತನ್ ಬಿಡ್ರೆ ಅಂತ ಗೋಣ ಹಾಕೀದ್ನಿ.

ಲೈಫ್ನಲಿ ಫರ್ಸ್ಟ್ ಟೈಮ್ ಇರ್ಬಕ್ ನೋಡ್ರಿ ಆಪತಿ ತಯಾರಾಗಿ ಪೀಕಣಿ (ಮೇಕ್ ಅಪ್- ಆಡುಭಾಸೇಲಿ) ತಕ್ಕೊಂಡಿದ್ದೆ. ನಾ ಉಡೊ ಹೆಚ್ಚನೆಚ್ಚ ಅರಿಬಿ ಎಲ್ಲ ನಮ್ ಗೋವ ಚಿಗವ್ವ ಕೊಡ್ತಿದ್ಲು. ಹಿಂಗಾಗಿ ನಾ ಯಾವತ್ತೂ ಸ್ವಲ್ಪ ಘಮಂಡಿನ್ಯಾಗ ಇರ್ತಿದ್ನಿ. ಒಂದು ಚೆಂದನೆ ಮೀಡಿ ಹಾಕೊಂಡ್ನೀ, ಗುಂಗುರು ಕೂದ್ಲು ಅಂದ್ರ ನಂಗ್ ಭಾಳ ಪ್ರೀತಿ ಅದರ ಹಿಂದಿನ ದಿನ ತಲಿ ತೊಳ್ಕೊಂಡ್ ಬಾಜು ಮನಿ ನಾಗಮ್ಮನ ಕಡೆ ಇರುವಿ ಜಡಿ ಹಾಕೀಸ್ಕೊಂಡಿದ್ನಿ ಸಣ್ಣಗಿ ಹಾಕಿದ್ ಇರುವೆ ಜಡಿಗಿ ಬೆಳಿಗ್ಗೆ ಅನ್ನುವಸ್ಟ್ರಲ್ಲಿ ಕೂದ್ಲೆಲ್ಲಾ ಗುಂಗುರಾಗಿ ಸುರುಳಿ ಸುರುಳಿ ಸುತ್ತಿದ್ವು.

ನಾ ತಯಾರಗುದುನ್ನ ನಮ್ಮವ್ವ ಒಂದ್ ಸವ್ನಿ ಬಿಟ್ಟ್ ಕಣ್ ಬಿಟ್ಟಂಗ್ ನೋಡ್ಕೋತ್ ಕುಂತ ಬಿಟ್ಲು. ಯಾಕ್ ಅಂತಿರ್ಯಾ? ದಿನ ಬೈಯಾಕಿ ನಂಗ್ ಮಕದ ಮ್ಯಾಲ ಹಂಚಿಬಟ್ಟ್ ಇಲ್ಲ, ಕೈಯಾಗ್ ಬಳಿ ಹಾಕೊದೀಲ್.. ಹೋದಲ್ಲೆಲ್ಲ ಡಿಗ್ಗಿ ಗಟ್ಲೆ ತರ್ತನ್ ಹಾಕೋತೈತಿ ಮಗಳ ಅಂತ್ ಹೇಳಿ. ಮಂದಿ ಮಕ್ಕಳ್ನೋಡ್ ಹೆಂಗ್ ಇರ್ತ್ಯಾವ್, ತಮ್ ಹಂತೇಕ ಇರ್ಲಿಲ್ಲ ಅಂದ್ರೂ ಮಂದಿ ಕಡಿಯಿಂದ ಇಸ್ಕೊಂಡ್ ಹಾಕೋತಾವ್. ನೀನು ಆದಿ, ಇಷ್ಟೆಲ್ಲಾ ಇದ್ರು ಹಾಕೋಳುದಿಲ್ಲ ಅಂತ ಬೈಯಾಕಿ.

ಗಂಡ ಮಗ ಆಗೇರ್ ಹುಟ್ಟಲಿಲ್ಲ ನೀ ನನಗ. ಈಗ ಅವರ್ ಇವರ್ ನೋಡಿದ್ರ ನಿಂಗ್ ಏನ್ ಅನುದುಲ್ಲ; ನನ್ನ ಮುಂದ್ ಅಂತಾರ ಆಯ್ಯ ಸತ್ಯಮ್ಮ, ನಿನ್ನ ಮಗಳಿಗೆ ಬಳಿ ಅದು ಹಾಕೋ ಅಂತ್ ಹೇಳವಾ. ಗಂಡ್ ಹುಡುಗ್ರಾಂಗ್ ಹಂಗ್ ಅಡ್ಡ್ಯಾಡತೈತಿ ಹುಡುಗಿ ಅಂತಾರ್.

ಇಲ್ಲಿ ನೋಡ್, ನಿನಗ್ ತಿಳಿದಿದ್ದ ನೀ ಮಾಡಕ್ ಹೋಗಬ್ಯಾಡಾ ನಿಮ್ಮ ಮಾಮಾನ್ (ಅಮ್ಮನ ತಮ್ಮ) ಮುಂದ್ ಹೇಳ್ತನ ಮಾತ ಕೇಳುಲ್ ಪಾ ನಿನ್ ಸೊಸಿ ಅಂತ್ ಹೇಳಿ,

ನಿನ್.. ನಿನ್.. ಲಗಾ ಹಾಕಿಸ್ತನ್… ಅಂಜಿಕಿ ಹಾಕ್ತಿದ್ಲು ನಮ್ಮವ್ವ. (ಹಾಸ್ಟೆಲ್ ಪ್ರಭಾವ, ಗಾಢವಾಗಿ ನನ್ ಮೇಲೆ ಬೀರಿತ್ತು. ನಾನಾದ್ರೂ ಏನ್ ಮಾಡ್ಲಿ?)

ಅಕಿ ಬಯ್ಯು ಕಡ್ತಿಗೆ “ಏ ಬೇ.. ಎಲ್ಲಾದ್ಕೂ ನೀ ಮಂದಿ ಮಕ್ಕಳಿಗೆನ ನಮ್ಮನ್ನ್ ಹೋಲಿಸ್ತೀಯಲ್ಲ, ಸುಮ್ಮೀರ್ತಿ ಸ್ವಲ್ಪ? ಬೆಳಕ ಹರಿದಾಗ್ನಿಂದ ನಿಂದ್ ಸುಪ್ರಭಾತ ಕೇಳಿ, ತೆಲಿ ಗಿರ್ರ್ ಅಂತ್ ನೂಸಾಕತ್ತ್ ನಂದ್; ಗಪ್ಪ್ ಅಕ್ಕಿ ಅಟಾ? “ಅವರದವರ ಸುತ್ತ, ನಮ್ದು ನಮ್ಮ ಸುತ್ತ”. ಏನು?, ನನ್ನ ಪಿರ್ಯಾದಿ ಮಾಮಾಗ್ ಹೇಳ್ತೀಯ? ನಿಮ್ಮ ತಮ್ಮ ನನ್ನ ನೋಡಿದ್ರ ಮಾರುದ್ದ ಜಿಗಿತಾನ್, ನಾ ಎದುರಿಗೆ ಬರಾಕತ್ತನ್ ಅಂದ್ರ ನಾ ಕಣ್ಮರಿ ಆಗುಮಟಾ ನೆಲದಾಗ್ ಇಟ್ಟ್ ಕಣ್ಣ ನೆಲದಾಗ್ ಇರ್ತಾವ್ (ಯಾಕಂದ್ರೆ ನಮ್ಮ ಮಾವ ನಾನು ಇವತ್ತಿನ ವರ್ಗೂ ಒಂದಿನ ಮಾತಾಡಿಲ್ಲ). ಇನ್ನ್.. ನನ್ನ ಲಗಾ ಹಾಕ್ಸು ಮಾತ್ ದೂರ್ ಉಳಿತ್ ಬಿಡ್ ಬೇ ಅಂತ, ಹೊಟ್ಟಿ ಹುಣ್ಣಾಗುವಂಗ್ ನಗು ನನ್ನ ಮಗಳು ಮಗಳಿಗಿ ಇವತ್ತೇನ ಇದ್ಕಿದ್ದಂಗ್ ಏನ್ ಆತು ಅಂತ ಅಚ್ಚರಿ ಆದ್ರ, ಹೆಣ್ಣ್ ಮಕ್ಕಳಂಗ ತಾಯರಾಗಕತೈತಿ ಅಂತ ಖುಸಿ ಪಟ್ಟಳ್ರಿ ನಮ್ಮವ್ವ.

ಮದಿವಿ ಬಬಲೇಸೂರನ್ಯಾಗಿತ್ರಿ, ದೊಡ್ಡ ಮಾಲ್ ಗಾಡಿ (ಟ್ರಕ್) ಹೆಣ್ಣಿನ ಕಡೆಯವರ್ನ ಒಯ್ಯಾಕ್ ಬಂತ್, ಟ್ರಕ್ ಬಂದ ಸುದ್ದಿ ಕೇಳಿದಕಿನ, ಕೂಡ್ಲಿಕ್ ಜಾಗ್ ಸಿಗುದಿಲ್ಲ್ ಅನ್ಕೊಂಡ್ ಬರಾಬರಾ ಹೋಗಿ ಜಾಗಾ ಹಿಡ್ಕಂಡ್ ಕುಂತ್ನೀ. ಟ್ರಕ್ ಬಂದ್ ಯಾಡ್ ತಾಸಿಗಿ ಜನ ಕೂಡ್ತು. ಕಲ್ಲವ್ವ ಬಾರ, ಮಲ್ಲವ್ವ ಬಾರ ಅಂತ್ ಹೇಳಿ.

ಆ ಗಾಣಿಗ್ಯಾರ್ ಗಂಗವ್ವ ನಸಿಕಿನ್ಯಾಗ್ ಎದ್ದು ೨೦ ಬಿಳಿಜಾಳ್ ರೊಟ್ಟಿ ಬಡ್ಕೊಂಡು ಬುತ್ತಿ ಕಟ್ಕೊಂಡ್ ಹೀರ್ಯಾಗ್(ಪತಿ) ಕೊಟ್ಟ ಬರ್ತನ್ ಅಂತ ಹೊಲಕ್ (ಹೊಲ) ಹ್ವಾದ್ಳ. ಬಸಪ್ಪ( ಗಂಗವ್ವನ ಪತಿ) ಲಿಬ್ಬನಕ ಬರಂಗ್ ಕಾಣುದಿಲ್ಲ, ೩೦ ಆಳ್ ಹಚ್ಚಿಸಿ ಸದಿ(ಕಳೆ) ತಗ್ಸಾಕತ್ತಾನ್ ಅಂತ. ಬಿಟ್ಟ್ ಹೆಂಗ್ ಬಂದಾನೂ, ನಿಮ್ಮ ತಂಗೀನ ಹಚಗೊಡ್ತನಬೇ ಎಕ್ಕ ಅಂದಿದ್ದ. ಗಾಡಿ ನಿಲ್ಸರಿ ಆಕೀ ಬರುತಕ ಅಂತ ಆ ಬೆಲ್ಲದ ಬಾಳಕ್ಕ ಆ ಕಡಿಯಿಂದ ಚೀರ್ತಿದ್ಲು, ಗಾಡ್ಯಾಗ್ ಅಲ್ಲಿಬ್ರೂ ಇಲ್ಲೀಬ್ರೂ ಕುಂತಿದ್ ಬಿಟ್ಟ್ರ ಗಾಡಿ ಖಾಲಿನ ಇತ್ತ. ಚೀರಿ ಕ್ಯಾಸ್ ಗಂಟ್ಲ ಯಾಕ್ ಹರ್ಕೋಳಾಕತಿದ್ಲೋ ಗೊತ್ತಾಗ್ಲಿಲ್ಲ ನನಗ್..

ಆ ಹೂವ್ಗಾರ್ ಲಸಮವ್ವ(ಲಕ್ಷ್ಮಿ) ಮಗಳ ತೆಲಿಗಿ ಕುಂಚಗಿ ತರತನ್ ಅಂತ ಹ್ವಾದಾಕಿ ಇನ್ನ್ ಬಂದಿಲ್ಲ, ಹೊತ್ತಾತ್ ಬಾರ ಬಾ ಅಂತ್ ಕೈಯಾಗಿನ್ ತಿನ್ನು ರೊಟ್ಟಿ ಬಿಡಿಸಿ ಕರ್ಕೊಂಡ್ ಬಂದಿದ್ನಿ. ಆ ಕಟಗಿ ಕಲ್ಲಪ್ಪ ಮುತ್ಯಾ ಬರ್ತನಂದಿದ್ದ; ಏ ಹರಿದೇಶ, ನಿಮ್ಮ ಮುತ್ಯಾನ ಮನಿಗಿ ಹೋಗಿ ಗಾಡಿ ಹೊಂಟ್ ನಿತ್ತೈತಿ ಅಂತ್ ಲಗುಟ್ನ (ಬೇಗ) ಹಚಗೊಡಪಾನ್ ಅಂತ ನಮ್ಮ ಬಸೊ(ಬಸಮ್ಮ) ಚಿಗವ್ವ ಒಂದ್ ಸವನಿ ಒದುರುದ ನೋಡಿ, ಸಣ್ಣವ್ವ ಅಷ್ಟಾಕ್ ಬಡ್ಕೊತಿ ಬಿಡಬೇ.. ನಮ್ಮ ತಳೇವಾಡ ಮಂದಿನ ಹಿಂಗ್ ಅದಾರ್ ನೋಡ್, ಮೂರಕ್ಕ್ ಬಾ ಅಂದ್ರ್ ಆರಕ್ಕ್ ಬರ್ತಾರ್. ಬಾ ಇಲ್ಲಿ ನನ್ನ್ ಬಾಜುಕ ಕೂಡ ಅಂತ ಸಣ್ಣವನ ಕೈ ಎಳೆದ ಬಾಜೂಕ್ ಕರ್ಕೊಂಡ್ನೀ.

ಆಕೀ ಬುಜದ ಮ್ಯಾಲ್ ತಲಿ ಇಟ್, ಎವ್ವ ನಂಗ್ ಹಸು ಆಗೈತಿ, ಮನ್ಯಾಗ್ ಅವ್ವ ಶಾವಿಗಿ ಉಪ್ಪಿಟ್ ಮಾಡಿದ್ಲು; ಗಾಡಿ ಹೊಕ್ಕೈತಿ ಅಂತ ಓಡಿ ಬಂದ್ ಜಾಗ ಹಿಡ್ಕೊಂಡ್ ಕುನ್ತ್ನಿ. ಹೊಟ್ಟಿ ಗುರ್ ಅನ್ನಾಕತೈತಿ. ಹೋಗ್ಗೊಡ್ದ ಮದ್ವಿ ಹಂದರ್ದಾಗಿನ್ ಉಪ್ಪಿಟ್ಟು ಖಾಲಿ ಅಗಿರ್ತೈತಿ. ಅಕ್ಕಿ ಕಾಳ್ ಬೀಳುಮಟ ಹೆಂಗಿರ್ಲಿ ನಾ ? ನನ್ನ ಸಪ್ಪ್ ಮಕ ನೋಡಿ ನಮ್ಮ ಚಿಗವ್ವ ಆಯ್ಯ ಶಿವನ! ಅಂತ ಗದ್ದಕ್ ಕೈ ಹಿಡ್ಕೊಂಡ್ ಅಲ್ಲಿತಕಾ ಉಪಾಸ್ ಇರ್ತೀಯಾ? ನಿಲ್ ಬರ್ತನ್ ಅಂದಾಕಿನ್ ಸರಕ್ಕನ ತಳಗಿಳದ ದ್ಯಾವಾಪೂರ್ ಸಂಗಮೇಶನ ಚಾ ಅಂಗಡಿಯಿಂದ ಚುಮ್ಮರಿ ಸೂಸ್ಲ ಕಟ್ಟೀಸ್ಕೊಂಡ್ ಬಂದ್ಲು.

ಚುಮ್ಮರಿ ಸೂಸ್ಲ್ ಅಂದ್ರ ನನಗ್ ಯಾಡ ಹೊಟ್ಟಿ (ಅಷ್ಟಿಷ್ಟ). ಮದ್ಲ ಹಸದ್ ನಾಯಿ ಆಗಿದ್ ನನ್ನ್ ಹೊಟ್ಟಿಗಿ ಬಾಯಿ ರುಚಿಹಿಡಿಸು ಸೂಸ್ಲ ತಂದಕೊಟ್ಟ ಚಿಗ್ಗವಗ (ಚಿಕ್ಕಮ್ಮ) ಭಾಳ್ ಉಪ್‌ಕಾರ್ ಆತ್ ಬೇ ಅಂದಾಕಿನ ಸುರು ಮಾಡಿದ್ನಿ ಕೈಯಿಗೆ, ಬಾಯಿಗೆ. ಬ್ಯಾರೇದವರ್ ಬಂದ್ರ ಅವರಿಗಿಷ್ಟ ಕೊಡುದಕ್ಕೈತಿ ಅಂತ್ ತಿಳದ್ ಗಪಾ ಗಪಾ ತಿಂದ್ ಕ್ಯಾಸ್, ಹಾಳಿ ಮುದ್ದಿ ಮಾಡಿದಕಿನ ಮತ್ತ ಚಾ ಅಂಗಡಿಗಿ ಹೋಗಿ ನೀರ್ ಇಸ್ಕೋಂಡ ಗಳಗಳ ಅಂತ ಚರಿಗಿ ನೀರ್ ಕುಡದ್ ನಿಟ್ಟುಸಿರ್ ಬಿಟ್ನಿ.

ಚಾ ಚಪಲ್ ಬಿಡ್ಬೇಕೇಲ್ಲಿ? ದಸ್ತ್ಯಾಗ್ ಆಯೇರಿ ಹಾಕಕ ಅಂತ ಕೊಟ್ಟ ರೊಕ್ಕಾ ಬಿಟ್ರ ಹಂತೇಕ ಹೆಚ್ಚಿಗಿ ದುಡ್ಡಿರ್ಲಿಲ್ಲ. ನಮ್ಮ್ ಜಿಪುಣಿ (ಕಂಜೂಸ್) ಚಿಗವ್ವ ನನಗ್ ಸೂಸ್ಲ ಕೊಡಿಸಿದ್ದ್ ದೊಡ್ಡ ಮಾತಾಗಿತ್ತು. ಅಕಿನೆಲ್ಲಿ ಮತ್ತ ಕೇಳುದು? ನಾನ್ ಉದ್ರೀ ನಿಲ್ಲಿಸಿ ಕೂಡ್ದ್ರಾತು ಅಂದ್ಕಿನ; ಸಂಗಪ್ಪಣ್ಣ, ನಾಳೆ ಸಾಲಿಗಿ ಹೋಗುಮುಂದ್ ರೊಕ್ಕಾ ಕೊಡ್ತನ್, ಉದ್ರೀ ನಿಲ್ಸಿ ಒಂದ್ ಚಾ ಕೊಡ್ ಪಾ ಅಂತ; ಸಣ್ಣ ದನಿ ಮಾಡಿ ಕೇಳಿದ್ನಿ ಕೊಡ್ತಾನೋ ಇಲ್ಲೊ ಅನ್ಕೋತ್.

ಪುರೆ ಲಟ್ಟಸಾಕತ್ತಿದ್ದ ಸಂಗಪ್ಪಣ್ಣ ನನ್ನ ಕಡೆ ನೋಡಿ, ಯಾರವ ತಂಗಿ ನೀ ಅಂದ. ನಾ ಜಾಲಾಪೂರ್ ಯಲ್ಲಪ್ಪ ಮುತ್ಯಾನ ಮಮ್ಮಗಳಪಾ ಅಂದ್ನಿ. ನಮ್ಮ ಸತ್ಯಮ್ಮಕ್ಕನ ಮಗಳನವಾ ನೀ? ಬೆಳಗಾಂವ್ ದವರು? ಅಂದ. ಹೂಂ ಅಣ್ಣ ನಾವ್. ಅಂತ್ ಹೇಳಿಕ್ಯಾಸ್, ಉದ್ರೀ ನಿಲ್ಲಿಸಿ ಒಂದ್ ಚಾ ಕೊಡು. ಮತ್ತೊಮ್ಮಿ ಹೇಳಿನಿ. ನಮ್ಮ ನೀಲಮ್ಮನ ಗೆಳತಿ ಅಲ್ಲೇನವ ನೀ, ನೀನು ನನಗ್ ತಂಗಿ ಇದ್ದಂಗ್ ವಾ ಹಂಗ್ ಹೇಳ್ಬ್ಯಾಡ ಅಂದ. (ಇನ್ನೊಬ್ಬರ ಹಂಗಿನ್ಯಾಗ್ ಇದ್ದ್ ಗೊತ್ತಿರದ ನಂಗ್) ಅಯ್ಯೋ ನಾಳಿ ನೀ ರೊಕ್ಕಾ ತಗೋತನ ಅಂದ್ರ ಚಾ ಕೊಡು; ಇಲ್ಲ ಅಂದ್ರ, ಚಾ ಬ್ಯಾಡಪಾ ಅಂತ ಉತ್ರ ಕೊಟ್ನಿ. ಹೂಂ.. ಆತ್ ಬಿಡ್ ತಂಗಿ ನಾಳಿ ಕೊಡು ಅನ್ಕೋತ, ಸುಡು ಸುಡು ಚಾ ನನ್ನ ಕೈಯೊಳಗಿಟ್ಟ. ಬರಾಬರಾ ಚಾ ಹೀರಿದಕಿನ ಮತ್ತ ನನ್ನ ಜಾಗಕ್ ಹೋಗಿ ಕುಂತ್ ಬಿಟ್ನಿ.

ಆ ತೆಗ್ಗಿಮನಿ ಸಿದ್ದಕ್ಕ ಮಡ್ಡಿ ಮ್ಯಾಲ್ ಮನಿ ಮಡ್ಯಾಳ್, ಕತ್ತಲ್ದಾಗ್ ಬ್ಯಾಟ್ರಿ ತಗೊಂಡ್ ಹೋಗಿ, ಮದಿವಿಗಿ ಬಾರವ ಸಿದ್ದಕ್ಕ ತಪ್ಪಿಸಬ್ಯಾಡ. ಹರ್ಯಾಗೆದ್ದಗಳೆ ಮತ್ತೊಂದಸಲ ಕರ್ಯಾಕ್ ಬರಾಕ ಆಗೂದಿಲ್ಲ. ನಿನಗ್ ಗೊತ್ತ, ಮದಿವಿ ಮನಿ ಅಂದ್ರ ಎಷ್ಟ್ ಕೆಲಸಗೋಳ್ ಇರ್ತಾವಂತ. ಅದ್ ಒತಾಟಿ ಇರಲಿ ನೀ ಇಷ್ಟ್ ದೂರ ಮನಿ ಬ್ಯಾರೀ ಮಾಡ್ಕೊಂಡ್ ಕುಂತೀ ಹರದಾರಿ ನಡಿಬೇಕ ನಿನ್ ಮನಿಗ್ ಬರ್ಬೇಕಂದ್ರ. ಕರ್ದಿಲ್ ಅನಬ್ಯಾಡ ಹೊಂತುಟ್ಲೆ ಎದ್ದು ಮಕ್ಕಳ ತಾಯಾರ್ ಮಾಡಿಸಿ ಕರ್ಕೊಂಡ್ ಬಾ.

(ಮುಂದುವರೆಯುವುದು…)

ಇದೇ ಲೇಖನವನ್ನು ನೀವು ಪಂಜುವಿನಲ್ಲಿ ಕಾಣಲು ಕ್ಲಿಕ್ಕಿಸಿ: http://www.panjumagazine.com/?p=1602