ಸಂಗ್ರಹಗಳು

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯೊಂದೇ ಸರಿಯಾದ ದಾರಿಯೇ?

ಕಳೆದ ಡಿಸೆಂಬರ್ ನಲ್ಲಿ ನಡೆದ ದೆಹಲಿ ಅತ್ಯಾಚಾರ ಕೇಸು ಎಲ್ಲರ ಮನದಲ್ಲೂ ಹಸಿಗೋಡೆಯ ಮೇಲೆ ಹರಳು ನೆಟ್ಟಂತಿದೆ. ಸುದ್ದಿ ಹರಡುತ್ತಿದ್ದಂತೆ, ಅತ್ಯಾಚಾರಿಗಳ ವಿರುದ್ಧ ಕೇಳಿ ಬಂದ ಮಾತುಗಳು: “ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸಬೇಕು”, “ಲಿಂಗ ನಿಷ್ಕ್ರಿಯಗೊಳಿಸಬೇಕು”. ಹೀಗೆ ಮಾಡಿದರೆ ತಪ್ಪಿತಸ್ಥರಿಗೆ ತಮ್ಮ ತಪ್ಪಿನ ಅರಿವಾಗಬಲ್ಲುದೆ? ತಪ್ಪನ್ನು ತಿದ್ದಿಕೊಳ್ಳಲು ಅವಕಾಶಗಳೇ ಇಲ್ಲವೇ? ಅವರುಗಳು ಮಾಡಿದ್ದು ದೊಡ್ಡ ತಪ್ಪು ನಾನು ಒಪ್ಪುವೆ. ಆದರೆ, ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡದೆ ಮರಣದಂಡನೆ ವಿಧಿಸುವುದು ಅದೆಷ್ಟು ಸರಿ ಎನ್ನುವುದು ನನ್ನ ಪ್ರಶ್ನೆ.

ನಮ್ಮ ಬಸವಣ್ಣನವರು ಒಂದು ಕಡೆ ಹೇಳುತ್ತಾರೆ, “ತೆಗೆದು ಕೊಡೆ ಎಲೆ ಚಾಂಡಾಲಗಿತ್ತಿ ಕಳ್ಳನ ಮನೆಗೊಬ್ಬ ಬಲುಗಳ್ಳ ಬಂದರೆ ಕೂಡಲಸಂಗಮನಲ್ಲದೇ ಮತ್ತಿನ್ನಾರು” ಅಂತ. ಗಂಡ-ಹೆಂಡತಿ ರಾತ್ರಿ ಮಲಗಿದ್ದಾಗ, ಕಳ್ಳ ಬಂದು ಬಸವಣ್ಣನ ಹೆಂಡತಿಯ ಕತ್ತಲ್ಲಿದ್ದ ಮಂಗಳಸೂತ್ರವನ್ನು ಕದ್ದೊಯ್ಯುವ ಸಂದರ್ಭದಲ್ಲಿ ಹೆಂಡತಿಗೆ ಹೇಳಿದ ಮಾತಿದು. ಆ ದೇವರನ್ನು ಭಜಿಸಿ ಧ್ಯಾನಿಸಿ, ಅವರ ಹೃದಯವನ್ನೇ ಕದಿಯ ಹೊರಟ ಮಹಾಕಳ್ಳ ನಾನು, ನನ್ನ ಮನೆಗೆ ಮತ್ತೊಬ್ಬ ಕಳ್ಳ ಬಂದರೆ ಅದು ಆ ದೇವರ ಹೊರತು ಬೇರಾರೂ ಅಲ್ಲವೆಂದು ನುಡಿದರು. ಆ ದಿನ ಕಳ್ಳನಿಗೆ ಮಾಡಿದ ಆ ಉಪಚಾರ ಕಳ್ಳನ ಮನಪರಿವರ್ತನೆಗೆ ಕಾರಣವಾಗಿರಬಹುದಲ್ಲವೇ?

ಒಬ್ಬಾತ ಏಸುವಿನ ಬಳಿ ಬಂದು, ” ಸ್ವಾಮಿ, ಕ್ಷಮೆ ಕೇಳಿ ಬಂದ ನನ್ನ ಸಹೋದರನನ್ನು ಎಷ್ಟು ಸಾರಿ ಕ್ಷಮಿಸಬೇಕು” ಎಂದಾಗ ಯೇಸು ಹೇಳಿದರು, “ಏಳಲ್ಲ ಏಳೆಪ್ಪತ್ತು ಬಾರಿ ಕ್ಷಮಿಸು” ಅಂತ. ಅಷ್ಟೇ ಏಕೆ, ಕ್ರೂಜೆಗೇರಿಸುವ ಕೊನೆಯುಸಿರ ಘಳಿಗೆಯಲ್ಲೂ, ” ತಂದೆಯೇ, ಇವರನ್ನು ಕ್ಷಮಿಸು, ತಾವೇನು ಮಾಡುತ್ತಿರುವರು ಎಂಬುದು ಇವರು ಅರಿಯರು” ಎಂದು ಕ್ಷಮೆಯ ಸಂದೇಶವನ್ನು ಜಗತ್ತಿಗೆ ಸಾರಿದ ಕರುಣಾಮಯಿ ಆ ಏಸು.

ವಾಲ್ಮಿಕಿಗೆ ಕ್ಷಮೆ ನೀಡದೆ ಮನಪರಿವರ್ತನೆಗೆ ಅವಕಾಶ ಸಿಗದೆ ಹೋಗಿದ್ದರೆ ಇವತ್ತು ರಾಮಾಯಣ ನಮ್ಮೆಲ್ಲರಿಗೂ ಓದಲು ಸಿಗುತ್ತಿರಲಿಲ್ಲವೆನೋ. ನಮ್ಮ ರಾಷ್ಟ್ರದ ಪಿತಾಮಹ ಮಹಾತ್ಮ ಗಾಂಧಿ ಕೂಡ ಹೇಳಿದ್ದರು, “ಪಾಪವನ್ನು ದ್ವೇಷಿಸು, ಪಾಪಿಯನ್ನಲ್ಲ”ವೆಂದು ( Hate the sin not the sinner ). ಇಂತಹ ಮಹಾಪುರುಷರು ಕ್ಷಮೆಯ ಬಗ್ಗೆ ವ್ಯಾಖ್ಯಾನ ನೀಡಿದಲ್ಲಿ, ನಾವು ಕೂಡ ಕ್ಷಮಿಸಿ, ತಪ್ಪು ತಿದ್ದಿಕೊಳ್ಳಲು ಅವಕಾಶ ಕೊಡುವಲ್ಲಿ ಅರ್ಥವಿದೆ ಅಲ್ಲವೇ? ಅಪ್ರಾಪ್ತ ವಯಸ್ಕರರು ಹಾಗೂ ಮೌಲ್ಯಗಳ ಬಗ್ಗೆ ಜ್ಞಾನ ಇಲ್ಲದಿರುವ ಇಂತಹ ಮಕ್ಕಳು ಮಾಡಿದ ತಪ್ಪನ್ನು ತಿದ್ದಿಕೊಳ್ಳುವಲ್ಲಿ ಅವಕಾಶ ನೀಡುವಲ್ಲಿ ನ್ಯಾಯವಿದೆಯಲ್ಲವೇ ಸ್ನೇಹಿತರೆ?

ಇಂತಹ ಒಂದು ಪ್ರಯತ್ನ ನನ್ನಿಂದ, ನಿಮ್ಮಿಂದ, ನಮ್ಮ ಸಾಮಾಜಿಕ ಸಂಸ್ಥೆಗಳಿಂದ ಶುರುವಾಗಬೇಕು. ನಾವು ಮನೆಯಲ್ಲಿ ಮಕ್ಕಳೊಂದಿಗೆ ಸ್ನೇಹ ಭಾವದಿಂದ ವರ್ತಿಸಬೇಕು, ಅವರ ಇಷ್ಟ ಕಷ್ಟಗಳನ್ನು ಅರಿತು ಸ್ಪಂದಿಸಬೇಕು. ದಿನಕ್ಕೊಮ್ಮೆ, “ಮಗನೇ ಇವತ್ತು ಶಾಲೆಯಲ್ಲಿ ಏನೆಲ್ಲಾ ಮಾಡಿದೆ” ಎಂದು ಕೇಳುತ್ತ ಮಾತು ಮುಗಿದ ನಂತರ ಮಗನೇ, “ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಹೇಳಿದರೆ ಸಾಕು ಮಕ್ಕಳು ನಿಮ್ಮ ಆಪ್ತರಾಗಿಬಿಡುತ್ತಾರೆ. ಇಂತಹ ಪ್ರಕ್ರಿಯೆಗಳಿಂದ ಮಕ್ಕಳ ಮೇಲೆ ನಿಗಾ ಇಡಲು ಸಾಧ್ಯವಾಗಬಹುದು. ಮಕ್ಕಳು ತಿಳಿಯದೇ ತಪ್ಪು ದಾರಿಯಲ್ಲಿ ನಡೆಯುವ ಲಕ್ಷಣಗಳು ಕಂಡಲ್ಲಿ, ಅವರಿಗೆ ಪ್ರೀತಿಯಿಂದ ಸಲಹೆ ಕೊಟ್ಟರೆ, ತಮ್ಮ ತಪ್ಪನ್ನು ತಿದ್ದಿ ನಡೆಯುತ್ತಾರೆ. ಮಕ್ಕಳನ್ನು ಹೊಡೆಯಲು, ನಿಂದಿಸಲು ಹೊರಟರೆ ಮಕ್ಕಳು ಭಯಬಿದ್ದು ಸುಳ್ಳು ಹೇಳಲು ಶುರು ಮಾಡುವುದಲ್ಲದೇ ತಂದೆ-ತಾಯಿಯೊಂದಿಗಿನ ನಂಟು ಕಡಿಮೆಯಾಗುತ್ತ ಹೋಗುತ್ತದೆ.

ಮಕ್ಕಳ ಪ್ರಗತಿ ವಿಚಾರಿಸಲು ಪಾಲಕರು ಸಮಯ ಬಿಡುವು ಮಾಡಿಕೊಂಡು ಆಗಾಗ ಶಾಲೆಗಳಿಗೆ ಭೇಟಿ ನೀಡಿ ವಿಚಾರಿಸಿದರೆ ತುಂಬಾ ಒಳ್ಳೆಯದು. ಹಾಗೆಯೇ ಶಿಕ್ಷಣ ಸಂಸ್ಥೆಗಳಲ್ಲಿ “ಮೌಲ್ಯ ಶಿಕ್ಷಣ” ಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮಕ್ಕಳಿಗೆ ಪ್ರಾರ್ಥನೆ ಮಾಡುವುದನ್ನು ಹೇಳಿಕೊಡಬೇಕು ಅವರು ಹೇಳುವ ಭಜನೆ, ಶ್ಲೋಕ, ಹಾಗೂ ಕೀರ್ತನೆಗಳ ಅರ್ಥವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಜೊತೆಗೆ ದೇಶ ಪ್ರೇಮ, ದೇಶದ ಚಿಂತನೆ, ಸಾಮಾಜಿಕ ಚಿಂತನೆ ಹಾಗೂ ಸಾಮಾಜಿಕ ಕಾಳಜಿಯನ್ನು ಮಕ್ಕಳಲ್ಲಿ ತುಂಬಬೇಕು.

ಬಂಧುಗಳೇ, ಇಂತಹ ಚಿಕ್ಕ-ಚಿಕ್ಕ ವಿಷಯಗಳನ್ನು ಮಕ್ಕಳಿಗೆ ಹೇಳಿಕೊಡುವುದು ತುಂಬಾ ಜರೂರಿಯಾಗಿದೆ. ದುಡ್ಡು ಗಳಿಕೆಯ ಅಬ್ಬರದಲ್ಲಿ ಇಂದು ಗಂಡ-ಹೆಂಡತಿಯರಿಬ್ಬರೂ ದುಡಿಯುತ್ತಿರುವುದು, ಮನೆಗೆ ಸುಸ್ತಾಗಿ ಬಂದು ತಿಂದು ಮಲಗಿ ಬಿಡುವುದು. ಯಾವಾಗಲೋ ಸಮಯ ಸಿಕ್ಕರೆ ಅದನ್ನೂ ಕೂಡ ಸಿನೆಮಾ, ಶಾಪಿಂಗ್ ಅಂತ ಕಾಲ ಕಳೆದುಬಿಡುವುದರಲ್ಲಿಯೇ ಬಿಜಿಯಾಗಿವೆ ಇಂದಿನ ಬೀಜಿ ಡೇ ಗಳು. ನಾವು, ನಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಇಷ್ಟೆಲ್ಲ ಕಷ್ಟ ಪಡ್ತಿದೀವಿ ನಿಜ. ಆದರೆ ನಾಳೆಯ ಚಿಂತೆಯಲ್ಲಿ ಮಕ್ಕಳ ಪ್ರಸ್ತುತ ದಿನಚರಿಯತ್ತ ಗಮನ ಹರಿಸದಿರುವುದೇ ಮಕ್ಕಳ ಅನಾರೋಗ್ಯಕರ ಬೆಳವಣಿಗೆಗೆ ಹಾಗೂ ಮುಂದೊಂದಿನ ಆಗುವ ಇಂತಹ ಅನಾಹುತಗಳಿಗೂ ಕಾರಣ.

ಹಾಗಾಗುವುದು ಬೇಡ ಬಂಧುಗಳೇ, ಇಂದಿನ ನಮ್ಮ ಮಕ್ಕಳೇ ಭವಿಷ್ಯದ ಉಜ್ವಲ ಸಂಪತ್ತು, ಆ ಉಜ್ವಲ ಸಂಪತ್ತಿಗಾಗಿ ನಾವು ಇಂದಿನ ದಿನ ಅವರನ್ನು ಆರೋಗ್ಯಕರ ಬೆಳವಣಿಗೆಯಲ್ಲಿ ತೊಡಗಿಸುವುದು, ನಮ್ಮ ಮಕ್ಕಳನ್ನು ಸಂರಕ್ಷಿಸುವುದು ಇವೆಲ್ಲ ನಮ್ಮ ನಿಮ್ಮ ಆದ್ಯ ಕರ್ತವ್ಯ. ಮೇಲೆ ಹೇಳಿದ ಎಲ್ಲ ಅಂಶಗಳನ್ನು ಅಳವಡಿಸಿಕೊಂಡು ಹೋದಲ್ಲಿ ಸಮಾಜದಲ್ಲಿ ಭುಗಿಲೇಳುವ ಇಂತಹ ಸಮಸ್ಯೆಗಳ ಬೇರುಗಳನ್ನು ಬುಡ ಸಮೇತ ಕಿತ್ತೊಗೆಯಬಹುದು. ಹಾಗೂ ಇಂತಹ ಒಳ್ಳೆಯ ಪ್ರಕ್ರಿಯೆಗಳಿಂದ ದೆಹಲಿ ರೇಪ್ ಕೇಸ್ ಗಳಂತಹ ಘೋರ ಅನಾಹುತಗಳನ್ನು ತಪ್ಪಿಸಬಹುದು.

ಅಲ್ಲದೇ ದೆಹಲಿ ಕೇಸ್ ನ ಅತ್ಯಾಚಾರಿಗಳಿಗೆ ಮರಾಣದಂಡನೆಯೊಂದೇ ಶಿಕ್ಷೆಯಲ್ಲ. ಅಂತಹ ಮಕ್ಕಳನ್ನು “Rehabilitate” ಮಾಡುವುದರ ಮೂಲಕ ಅವರ ಮನವನ್ನು ಪರಿವರ್ತನೆಗೊಳಿಸಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯನ್ನಾಗಿ ಕೊಡಬಹುದು ಎಂದೆನಿಸಿ ಈ ಒಂದು ಪುಟ್ಟ ಲೇಖನ.

ನಿಮ್ಮ ಮನೆ ಮಗಳು

ರುಕ್ಮಿಣಿ ಎನ್.

ಇದೇ ಲೇಖನವನ್ನು ನೀವು ಪಂಜುವಿನಲ್ಲಿ ಕಾಣಲು ಕ್ಲಿಕ್ಕಿಸಿ: http://www.panjumagazine.com/?p=906

Advertisements